ಉಡುಪಿ: ದಿನದಲ್ಲಿ 96ಕ್ಕೆ ಇಳಿದ ಕೋವಿಡ್ ಪಾಸಿಟಿವ್

Update: 2021-08-29 15:00 GMT

ಉಡುಪಿ, ಆ.29: ರವಿವಾರ ಜಿಲ್ಲೆಯಲ್ಲಿ ಕೋವಿಡ್‌ಗೆ ಪಾಸಿಟಿವ್ ಬಂದವರ ಸಂಖ್ಯೆ 96ಕ್ಕೆ ಇಳಿದಿದೆ. 10ದಿನಗಳ ಬಳಿಕ ಸೋಂಕಿತರ ಸಂಖ್ಯೆ 100ಕ್ಕಿಂತ ಕೆಳಕ್ಕಿಳಿದಿದೆ. ದಿನದಲ್ಲಿ ಯಾರೂ ಕೋವಿಡ್‌ಗೆ ಬಲಿಯಾಗಿಲ್ಲ. ಇಂದು 139 ಮಂದಿ ಸೋಂಕಿನಿಂದ ಚೇತರಿಸಿಕೊಂಡರೆ, ಸೋಂಕಿಗೆ ಸಕ್ರಿಯರಾಗಿರುವವರ ಸಂಖ್ಯೆ 1546ಕ್ಕಿಳಿದಿದೆ ಎಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗಭೂಷಣ ಉಡುಪ ತಿಳಿಸಿದ್ದಾರೆ.

ಇಂದು ಕೊರೋನ ಸೋಂಕು ದೃಢಪಟ್ಟ 96 ಮಂದಿಯಲ್ಲಿ 44 ಮಂದಿ ಪುರುಷರು ಹಾಗೂ 52 ಮಂದಿ ಮಹಿಳೆಯರು. ಪಾಸಿಟಿವ್ ಬಂದವರಲ್ಲಿ 62 ಮಂದಿ ಉಡುಪಿ ತಾಲೂಕು, 17 ಮಂದಿ ಕುಂದಾಪುರ ಹಾಗೂ 16 ಮಂದಿ ಕಾರ್ಕಳ ತಾಲೂಕಿನವರು. ಇವರಲ್ಲಿ 23 ಮಂದಿ ಕೋವಿಡ್ ಆಸ್ಪತ್ರೆ ಹಾಗೂ 73 ಮಂದಿ ಮನೆಗಳಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ.

ಶನಿವಾರ 139 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಈವರೆಗೆ ಕೊರೋನದಿಂದ ಚೇತರಿಸಿಕೊಂಡವರ ಸಂಖ್ಯೆ ಈಗ 71,650ಕ್ಕೇರಿದೆ. ನಿನ್ನೆ ಜಿಲ್ಲೆಯಲ್ಲಿ 10,321 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಈವರೆಗೆ ಜಿಲ್ಲೆಯಲ್ಲಿ ಸೋಂಕಿಗೆ ಪಾಸಿಟಿವ್ ಬಂದವರ ಸಂಖ್ಯೆ 73,645ಕ್ಕೇರಿದೆ. ಉಡುಪಿ ಜಿಲ್ಲೆಯಲ್ಲಿ ಈವರೆಗೆ ಒಟ್ಟು 9,50,552 ಮಂದಿಯನ್ನು ಕೋವಿಡ್ ಪರೀಕ್ಷೆ ಗೊಳಪಡಿಸಲಾಗಿದೆ.

ಜಿಲ್ಲೆಯಲ್ಲಿ ಇಂದು ಯಾರೂ ಬ್ಲ್ಯಾಕ್ ಫಂಗಸ್ ಸೋಂಕಿನ ಚಿಕಿತ್ಸೆಗೆ ದಾಖಲಾಗಿಲ್ಲ. ಸದ್ಯ ಹೊರಜಿಲ್ಲೆಗಳ ಇಬ್ಬರು ಖಾಸಗಿ ಆಸ್ಪತ್ರೆಗಳಲ್ಲಿ ಸೋಂಕಿಗೆ ಚಿಕಿತ್ಸೆ ಪಡೆಯುತಿದ್ದಾರೆ.

1853  ಮಂದಿಗೆ ಲಸಿಕೆ: ಜಿಲ್ಲೆಯಲ್ಲಿ ರವಿವಾರ ಒಟ್ಟು 1,853 ಮಂದಿಗೆ ಕೋವಿಡ್ ಲಸಿಕೆಯನ್ನು ನೀಡಲಾಗಿದೆ. ಇದರಲ್ಲಿ 1,484 ಮಂದಿಗೆ ಮೊದಲ ಡೋಸ್ ಹಾಗೂ 369 ಮಂದಿಗೆ ಎರಡನೇ ಡೋಸ್ ನೀಡಲಾಗಿದೆ ಎಂದು ಡಿಎಚ್‌ಓ ಡಾ. ನಾಗಭೂಷಣ ಉಡುಪ ತಿಳಿಸಿದ್ದಾರೆ.

18ರಿಂದ 44ವರ್ಷದೊಳಗಿನ 994 ಮಂದಿ ಮೊದಲ ಹಾಗೂ 121 ಮಂದಿ ಎರಡನೇ ಡೋಸ್ ಪಡೆದಿದ್ದರೆ, 45 ವರ್ಷ ಮೇಲಿನ 490 ಮಂದಿಗೆ ಮೊದಲ ಹಾಗೂ 248 ಮಂದಿಗೆ ಎರಡನೇ ಡೋಸ್ ಲಸಿಕೆ ನೀಡಲಾಗಿದೆ. ಜಿಲ್ಲೆಯಲ್ಲಿ ಈವರೆಗೆ ಒಟ್ಟಾರೆ 6,74,858 ಮಂದಿ ಮೊದಲ ಡೋಸ್ ಹಾಗೂ 2,55,483 ಮಂದಿ ಎರಡನೇ ಡೋಸ್ ಲಸಿಕೆಯನ್ನು ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News