ರಾಜ್ಯದಲ್ಲಿ 10 ವರ್ಷದೊಳಗೆ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನಗೊಳಿಸುವ ಗುರಿ: ಡಾ. ಅಶ್ವತ್ಥ ನಾರಾಯಣ

Update: 2021-08-30 09:25 GMT

ಮಂಗಳೂರು, ಆ. 30: ಜಾಗತಿಕ ಮಟ್ಟದಲ್ಲೇ ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆ ಆಗಬೇಕಾದ ಅನಿವಾರ್ಯತೆ ಇದೆ. ಈ ನಿಟ್ಟಿನಲ್ಲಿ ಪ್ರಧಾನಿ‌ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ರೂಪಿಸಲಾದ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರಾಜ್ಯದಲ್ಲಿ 10 ವರ್ಷದೊಳಗೆ ಅನುಷ್ಠಾನಗೊಳಿಸಲು ನಿರ್ಧರಿಸಲಾಗಿದೆ ಎಂದು ರಾಜ್ಯದ ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥ ನಾರಾಯಣ ಸಿ‌.ಎನ್. ಹೇಳಿದರು.

ಮಂಗಳೂರು ವಿವಿ‌ ಮತ್ತು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ  ಪರಿಷತ್ ವತಿಯಿಂದ ಕೊಣಾಜೆಯ ಮಂಗಳಗಂಗೋತ್ರಿಯ ಮಂಗಳ ಸಭಾಂಗಣದಲ್ಲಿ ಸೋಮವಾರ ನಡೆದ ರಾಷ್ಟ್ರೀಯ ಶಿಕ್ಷಣ ನೀತಿ- 2020 ಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಶಿಕ್ಷಣದ ಕಲಿಕಾ ನೀತಿ, ಮೌಲ್ಯಮಾಪನ, ಪಠ್ಯಕ್ರಮದಲ್ಲಿ ಸುಧಾರಣೆ ಆಗಬೇಕಿದೆ. ಆದರೆ ಈ ನಿಟ್ಟಿನಲ್ಲಿ ನಾವು ಹೆಚ್ಚಿನ‌ ಆದ್ಯತೆ  ನೀಡಿಲ್ಲ. ಕಲಿಕೆಯ ಆವಿಷ್ಕಾರಕ್ಕೆ ಆದ್ಯತೆ ನೀಡಿದರೆ ಸಾಲದು‌. ಸಕಾಲಕ್ಕೆ ಸೂಕ್ತ ನಿರ್ಣಯ ತೆಗೆಗುಕೊಳ್ಳಬೇಕಿದೆ. ಇಲ್ಲದಿದ್ದರೆ ಸಮಾಜಕ್ಕೆ ಭಾರೀ ನಷ್ಟವಾಗಲಿದೆ ಎಂದು ಸಚಿವ ಅಶ್ವತ್ಥ ನಾರಾಯಣ ಹೇಳಿದರು.

ಹೊಸ ಶಿಕ್ಷಣ ನೀತಿ ರೂಪಿಸಲು 5 ವರ್ಷ ತೆಗೆದುಕೊಳ್ಳಲಾಗಿದೆ. 15 ವರ್ಷದೊಳಗೆ ಈ ಶಿಕ್ಷಣ ನೀತಿಯನ್ನು ಅನುಷ್ಠಾನಗೊಳಿಸಲು ಕೇಂದ್ರ ಸರಕಾರ ನಿರ್ಧರಿಸಿದೆ. ಆದರೆ ರಾಜ್ಯವು‌‌ 10 ವರ್ಷದೊಳಗೆ ಅನುಷ್ಠಾನಗೊಳಿಸುವ ಗುರಿ ಹೊಂದಿದೆ ಎಂದು ಅವರು ಹೇಳಿದರು.

ಮಂಗಳೂರು ವಿವಿ ಕುಲಪತಿ ಡಾ. ಪಿ.ಎಸ್. ಯಡಪಡಿತ್ತಾಯ ಅಧ್ಯಕ್ಷತೆ ವಹಿಸಿದ್ದರು. ‌ವೇದಿಕೆಯಲ್ಲಿ ಶಾಸಕರಾದ ಉಮನಾಥ ಕೋಟ್ಯಾನ್, ಲಾಲಾಜಿ‌ ಮೆಂಡನ್, ಉನ್ನತ ಶಿಕ್ಷಣ ಪರಿಷತ್ ಉಪಾಧ್ಯಕ್ಷ ಪ್ರೊ. ಬಿ. ತಿಮ್ಮೇಗೌಡ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News