ಬದುಕಲ್ಲಿ ಸಮಾಜಮುಖಿಯಾಗಿರುವವರು ಅಮರರು: ಸೊರಕೆ

Update: 2021-08-31 13:22 GMT

ಉದ್ಯಾವರ, ಆ.31: ಮನುಷ್ಯನ ಬದುಕಲ್ಲಿ ಯಾರ ನಡೆ ಸಮಾಜಮುಖಿ ಯಾಗಿರುತ್ತೋ ಅವರು ಅಮರರಾಗಿರುವರು. ಅಂಥವರು ನಮ್ಮ ನಡುವೆ ಇಲ್ಲದಿದ್ದರೂ ಬದುಕಿನಲ್ಲಿ ಅವರು ಸಾಧಿಸಿದ ಸಮಾಜಮುಖಿ ಕೆಲಸಗಳಿಂದ ಶಾಶ್ವತವಾಗಿ ನಮ್ಮೋಂದಿಗೆ ಇರುತ್ತಾರೆ. ಇಂಥವರಲ್ಲಿ ಮಂಜುನಾಥ ಉದ್ಯಾವರ್ ಸಹ ಒಬ್ಬರು ಎಂದು ಮಾಜಿ ಸಚಿವ ವಿನಯಕುಮಾರ್ ಸೊರಕೆ ಹೇಳಿದ್ದಾರೆ.

ಉದ್ಯಾವರ ಫ್ರೆಂಡ್ಸ್ ಸರ್ಕಲ್, ಉಡುಪಿ ಜಿಲ್ಲಾಸ್ಪತ್ರೆಯ ಸಹಕಾರದೊಂದಿಗೆ ಉದ್ಯಾವರದ ಹಿಂದೂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗ್ರಾಮದ ಅಭಿವೃದ್ಧಿ ಹರಿಕಾರ ಮಂಜುನಾಥ ಉದ್ಯಾವರ ಅವರ ಒಂಭತ್ತನೇ ಸಂಸ್ಮರಣೆಯ ಅಂಗವಾಗಿ ಏರ್ಪಡಿಸಿದ್ದ ರಕ್ತದಾನ ಶಿಬಿರ ಉದ್ಘಾಟನೆ ಮತ್ತು ಮಂಜುನಾಥ ಉದ್ಯಾವರ ಸ್ಮಾರಕ ವೈದ್ಯಕಿಯ ನೆರವು ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತಿದ್ದರು.

ಉಡುಪಿ ಜಿಲ್ಲಾಸ್ಪತ್ರೆಯ ರಕ್ತನಿಧಿ ಕೇಂದ್ರದ ಮುಖ್ಯಸ್ಥೆ ಡಾ. ವೀಣಾ ಅವರು ಕೊರೋನಾ ಸಂದರ್ಭದಲ್ಲಿ ರಕ್ತದಾನ ಮಾಡಲು ತೆಗೆದು ಕೊಳ್ಳಬೇಕಾದ ಎಚ್ಚರಿಕೆ ಬಗ್ಗೆ ವಿವರಿಸಿದರು. ವ್ಯಾಕ್ಸಿನೇಷನ್ ಆದ 15 ದಿನಗಳ ಬಳಿಕವಷ್ಟೇ ರಕ್ತದಾನ ಮಾಡುವಂತೆ ಅವರು ತಿಳಿಸಿದರು. ಅಲ್ಲದೇ 18ರಿಂದ 60 ವರ್ಷದೊಳಗಿನ ಆರೋಗ್ಯವಂತರು ನಾಲ್ಕು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು ಎಂದೂ ಮಾಹಿತಿ ನೀಡಿದರು.

ಮತ್ತೊರ್ವ ಅತಿಥಿ ಕಾಪು ಉತ್ತರ ವಲಯ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪ್ರವೀಣ್ ಶೆಟ್ಟಿ ಕೊರಂಗ್ರಪಾಡಿ ಮಾತನಾಡಿದರು. ಅಧ್ಯಕ್ಷತೆಯನ್ನು ಉದ್ಯಾವರ ಗ್ರಾಪಂ ಅಧ್ಯಕ್ಷ ರಾಧಾಕೃಷ್ಣ ಶ್ರಿಯಾನ್ ವಹಿಸಿದ್ದರು. ಉದ್ಯಾವರ ಮುಸ್ಲಿಂ ಯುನಿಟಿ ಯುಎಇ ಅಧ್ಯಕ್ಷ ಖಾಲಿಕ್ ಹೈದರ್ ಉಪಸ್ಥಿತರಿದ್ದರು.

ಸಂಸ್ಥೆಯ ಅಧ್ಯಕ್ಷ ಶೇಖರ್ ಕೆ. ಕೋಟ್ಯಾನ್ ಸ್ವಾಗತಿಸಿದರೆ, ನಿರ್ದೇಶಕ ಉದ್ಯಾವರ ನಾಗೇಶ್‌ಕುಮಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರಧಾನ ಕಾರ್ಯದರ್ಶಿ ರಿಯಾಝ್ ಪಳ್ಳಿ ವಂದಿಸಿದರು. ಮಾಜಿ ಅಧ್ಯಕ್ಷ ತಿಲಕ್‌ರಾಜ್ ಸಾಲ್ಯಾನ್ ವೈದ್ಯಕೀಯ ನೆರವು ಫಲಾನುಭವಿಗಳ ಪಟ್ಟಿ ವಾಚಿಸಿದರೆ, ಆಬಿದ್ ಆಲಿ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಒಟ್ಟು ಸುಮಾರು ಒಂದು ಲಕ್ಷ ರೂ. ವೈದ್ಯಕೀಯ ನೆರವು ವಿತರಿಸಲಾಯಿತು. ಶಿಬಿರದಲ್ಲಿ 107 ಯುನಿಟ್ ರಕ್ತ ಸಂಗ್ರಹಗೊಂಡಿತು.

ನಾಮಫಲಕ ಅನಾವರಣ: ಉದ್ಯಾವರ ಗ್ರಾಪಂ ಸಭೆಯಲ್ಲಿ ಸರ್ವಾನುಮತ ದಲ್ಲಿ ನಿರ್ಣಯವಾದಂತೆ ಗ್ರಾಮದ ಮಠದಂಗಡಿ-ಪಾಂದೆ ರಸ್ತೆಗೆ ಮಂಜುನಾಥ ಉದ್ಯಾವರ ಮಾರ್ಗ ಎಂದು ನಾಮಕರಣ ಮಾಡಿ ಉದ್ಯಾವರ ಗ್ರಾಪಂ ಅಧ್ಯಕ್ಷ ರಾಧಾಕೃಷ್ಣ ಶ್ರೀಯಾನ್ ಅವರು ನಾಮಫಲಕ ಅನಾವರಣಗೊಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News