ವಿದ್ಯಾರ್ಥಿಗಳಿಗೆ ಮನೋಸ್ಥೈರ್ಯ ತುಂಬಿದ ಉಡುಪಿ ಜಿಲ್ಲಾಧಿಕಾರಿ

Update: 2021-09-01 14:34 GMT

ಉಡುಪಿ: ಜಿಲ್ಲೆಯಲ್ಲಿ ಇಂದಿನಿಂದ 9 ಮತ್ತು 10 ನೇ ತರಗತಿ ಹಾಗೂ ಪದವಿ ಪೂರ್ವ ಕಾಲೇಜುಗಳು ಆರಂಭಗೊಂಡ ಹಿನ್ನೆಲೆ ಉಡುಪಿ ಜಿಲ್ಲಾಧಿಕಾರಿ ಎಂ. ಕೂರ್ಮಾ ರಾವ್ ನಗರದ ಬಾಲಕಿಯರ ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜಿಗೆ ಭೇಟಿ ನೀಡಿ, ಕೋವಿಡ್ ಮಾರ್ಗ ಸೂಚಿಗಳನ್ನು ಪಾಲಿಸುವ ಬಗ್ಗೆ ಪರಿಶೀಲನೆ ನಡೆಸಿ ವಿದ್ಯಾರ್ಥಿಳಿಗೆ ಮನೋಸ್ಥೈರ್ಯ ತುಂಬಿದರು.

ಶಾಲೆಗಳಿಗೆ ವಿದ್ಯಾರ್ಥಿಗಳನ್ನು ಪೋಷಕರು ಶಿಕ್ಷಕರ ಮೇಲೆ ನಂಬಿಕೆಯನ್ನಿಟ್ಟು ಒಪ್ಪಿಗೆ ಪತ್ರವನ್ನು ನೀಡುವುದರೊಂದಿಗೆ ಕಳುಹಿಸುತ್ತಿದ್ದಾರೆ. ಶಿಕ್ಷಕರು ವಿದ್ಯಾರ್ಥಿಗಳಿಗೆ ಪಠ್ಯದ ಚಟುವಟಿಕೆಗಳನ್ನು ಕಲಿಸುವುದರ ಜೊತೆಗೆ, ಕೋವಿಡ್ ಸೋಂಕು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಅರಿವು ಮೂಡಿಸಬೇಕು. ವಿದ್ಯಾರ್ಥಿಗಳು ಈ ಕಾರ್ಯಕ್ಕೆ ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಭೌತಿಕ ತರಗತಿಗಳು ಆರಂಭವಾಗಿರುವುದರಿಂದ ವಿದ್ಯಾರ್ಥಿಗಳು ಶಿಕ್ಷಕರಿಂದ ನೇರವಾಗಿ ಪಾಠ-ಪ್ರವಚನಗಳನ್ನು ಕೇಳುವುದರೊಂದಿಗೆ ತಮ್ಮ ಸ್ನೇಹಿತರ ಜೊತೆಗೆ ಬೆರೆಯಲು ಅವಕಾಶ ದೊರೆತಿದೆ. ಜಿಲ್ಲೆಯಲ್ಲಿ ಸರಕಾರಿ ಶಾಲೆಯ ಶಿಕ್ಷಕರು ಶೇ. 100 ರಷ್ಟು ಹಾಗೂ ಅನುದಾನಿತ ಶಾಲೆಯ ಶಿಕ್ಷಕರು ಶೇ. 90 ರಷ್ಟು ಕೊರೋನ ಸೋಂಕು ನಿರೋಧಕ ಚುಚ್ಚುಮದ್ದು ಪಡೆದಿದ್ದಾರೆ. ಬಾಕಿ ಉಳಿದ ಶಿಕ್ಷಕರು ಶೀಘ್ರದಲ್ಲಿಯೇ ಚುಚ್ಚುಮದ್ದನ್ನು ಪಡೆುಬೇಕು ಎಂದು ಅವರು ಹೇಳಿದರು.

ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಸ್ವಚ್ಛತೆಗೆ ಆದ್ಯತೆ ನೀಡುವುದು ಸೇರಿದಂತೆ ಮತ್ತಿತರ ಕೋವಿಡ್ ಮಾರ್ಗಸೂಚಿಗಳನ್ನು ಸಮರ್ಪಕವಾಗಿ ಅನುಸರಿಸಿ ಸುರಕ್ಷತೆಯೊಂದಿಗೆ ಶಾಲೆಯ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳು ನಡೆಯಬೇಕು ಎಂದು ಜಿಲ್ಲಾಧಿಕಾರಿ ಶಿಕ್ಷಕರಿಗೆ ಇದೇ ಸಂದರ್ಭದಲ್ಲಿ ಸೂಚಿಸಿದರು.

ವಿದ್ಯಾರ್ಥಿಗಳು ಬೋಧನೆಯ ವಿಷಯಕ್ಕೆ ಹಾಗೂ ಕೊರೋನಾದ ಬಗ್ಗೆ ಯಾವುದೇ ರೀತಿಯ ಆತಂಕಗಳಿದ್ದಲ್ಲಿ ಶಾಲೆಯ ಶಿಕ್ಷಕರು, ಪ್ರಾಚಾರ್ಯರು ಅಥವಾ ತಮ್ಮಾಂದಿಗೆ ಮುಕ್ತವಾಗಿ ಹಂಚಿಕೊಂಡು ತಮ್ಮಲ್ಲಿರುವ ಗೊಂದಲಗಳನ್ನು ನಿವಾರಿಸಿಕೊಳ್ಳಬೇಕು ಎಂದರು.

ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಸಾಂಕೇತಿಕವಾಗಿ ಪಠ್ಯ ಪುಸ್ತಕಗಳನ್ನು ಜಿಲ್ಲಾಧಿಕಾರಿ ವಿತರಣೆ ಮಾಡಿದರು. ಪದವಿಪೂರ್ವ ಶಿಕ್ಷಣದ ಇಲಾಖೆಯ ಉಪನಿರ್ದೇಶಕ ಮಾರುತಿ ರಾವ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎನ್.ಎಚ್.ನಾಗೂರ ಮೊದಲಾದವರು ಉಪಸ್ಥಿತರಿದ್ದರು.

ಸದ್ಯ ಜಿಲ್ಲೆಯ ಪಾಸಿಟಿವಿಟಿ ದರಕ್ಕೆ ಅನುಗುಣವಾಗಿ 9ರಿಂದ ಪಿಯುಸಿವರೆಗಿನ ತರಗತಿಗಳನ್ನು ಆರಂಭಿಸಲಾಗಿದೆ. ಮುಂದೆ ಕೋವಿಡ್ ಪಾಸಿಟಿವಿಟಿ ದರದ ಆಧಾರದ ಮೇಲೆ ಹಾಗೂ ಸರಕಾರದ ನಿರ್ಧಾರವನ್ನು ಪರಿಗಣಿಸಿ 6ರಿಂದ 8ನೇ ತರಗತಿಯನ್ನು ಆರಂಭಿಸಲಾಗುವುದು.

ಕೂರ್ಮಾ ರಾವ್, ಜಿಲ್ಲಾಧಿಕಾರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News