ಮದ್ರಸ ಹೇಳಿಕೆ ಸಾಬೀತುಪಡಿಸಲಿ; ಸಿಟಿ ರವಿಗೆ ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸಯ್ಯದ್ ಅಹ್ಮದ್ ಸವಾಲು

Update: 2021-09-03 14:05 GMT

ಮಂಗಳೂರು, ಸೆ. 3: ಮದ್ರಸಾಗಳಲ್ಲಿ ಪವಿತ್ರ ಕುರಾನ್ ಓದಿಸುತ್ತಾರೆ. ಇದನ್ನು ಹೊರತುಪಡಿಸಿದರೆ ಬೇರೆ ಯಾವುದೇ ಚಟುವಟಿಕೆ ಅಲ್ಲಿ ನಡೆಯುವುದಿಲ್ಲ. ಒಂದು ವೇಳೆ ಮದ್ರಸಾಗಳಲ್ಲಿ ಉಗ್ರ ತರಬೇತಿಯಂತಹ ಕೃತ್ಯ ನಡೆಯುವುದಿದ್ದರೆ, ಅದನ್ನು ಸಾಬೀತುಪಡಿಸಬೇಕು ಎಂದು ಕೆಪಿಸಿಸಿ ಅಲ್ಪಸಂಖ್ಯಾತ ಘಟಕ ಅಧ್ಯಕ್ಷ ಸಯ್ಯದ್ ಅಹ್ಮದ್ ಅವರು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿಗೆ ಸವಾಲು ಹಾಕಿದ್ದಾರೆ.

ಮಂಗಳೂರಿನ ದ.ಕ. ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣಾ ಗಿಮಿಕ್‌ಗಾಗಿ ಸಿ.ಟಿ.ರವಿ ಅವರು ಮದ್ರಸಾ ಬಗ್ಗೆ ಸಲ್ಲದ ಹೇಳಿಕೆ ನೀಡುತ್ತಿದ್ದಾರೆ. ಬೇಕಾದರೆ ಅವರೇ ಖುದ್ದು ಮದ್ರಸಾಗಳಲ್ಲಿ ಏನು ನಡೆಯುತ್ತದೆ ಎಂಬುದನ್ನು ತಿಳಿದು ಕೊಂಡು ಮಾತನಾಡಲಿ ಎಂದರು.

ಮದ್ರಸಾಗಳು ಎಂದಿಗೂ ಉಗ್ರ ಪಾಠದ ತಾಣಗಳಲ್ಲ. ನಮ್ಮ ಹಿರಿಯರೂ ಕೆಟ್ಟದ್ದನ್ನು ಕಲಿಸಿಲ್ಲ. ಕುರಾನ್ ಕೂಡ ಒಳ್ಳೆಯದನ್ನೇ ಹೇಳಿದೆ. ಭಯೋತ್ಪಾದನೆ ಜೊತೆ ಇಸ್ಲಾಂ ಎಂದಿಗೂ ಹೊಂದಾಣಿಕೆ ಮಾಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.ಮದ್ರಸಾ ವಿರುದ್ಧ ಬಿಜೆಪಿಯ ಸಿ.ಟಿ.ರವಿ ಹಾಗೂ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮನಬಂದಂತೆ ಮಾತನಾಡುತ್ತಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಬೊಮ್ಮಾಯಿ ಯಾಕೆ ಮೌನವಾಗಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ. ಇಲ್ಲಿ ಅಫ್ಘಾನಿಸ್ತಾನ ಪರವಾದ ಮುಸ್ಲಿಮರಿದ್ದಾರೆ ಎಂದರೆ ಕೇಸು ದಾಖಲಿಸಲಿ. ಅದು ಬಿಟ್ಟು ಸುಮ್ಮನೆ ಆರೋಪ ಮಾಡುವುದು ಸರಿಯಲ್ಲ ಎಂದರು.

ಮಾಜಿ ಸಂಸದ ಬಿ. ಇಬ್ರಾಹಿಂ, ಮಾಜಿ ಶಾಸಕರಾದ ಜೆ.ಆರ್.ಲೋಬೋ, ಐವನ್ ಡಿಸೋಜಾ, ಜಿಲ್ಲಾ ಅಲ್ಪಸಂಖ್ಯಾತ ಘಟಕ ಅಧ್ಯಕ್ಷ ಶಾಹುಲ್ ಹಮೀದ್, ಜಿಲ್ಲಾ ಯುವಕ ಕಾಂಗ್ರೆಸ್ ಅಧ್ಯಕ್ಷ ಲುಕ್ಮಾನ್, ಮುಖಂಡರಾದ ಇಬ್ರಾಹಿಂ ಕೋಡಿಜಾಲ್, ಶಶಿಧರ ಹೆಗ್ಡೆ, ಪಿ.ವಿ.ಮೋಹನ್, ನಝೀರ್ ಬಜಾಲ್, ಟಿ.ಕೆ.ಸುಧೀರ್ ಇದ್ದರು. ಇದಕ್ಕೂ ಮುನ್ನ ದ.ಕ. ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಕಚೇರಿಯನ್ನು ಕಾಂಗ್ರೆಸ್ ಭವನದಲ್ಲಿ ಘಟಕದ ರಾಜ್ಯಾಧ್ಯಕ್ಷ ಸಯ್ಯದ್ ಅಹ್ಮದ್ ಉದ್ಘಾಟಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News