ಸರಕಾರದಿಂದ ತಾಪಂ, ಜಿಪಂ ಚುನಾವಣೆ ಮುಂದೂಡುವ ಹುನ್ನಾರ: ಉಡುಪಿ ಜಿಲ್ಲಾ ಕಾಂಗ್ರೆಸ್ ಆರೋಪ

Update: 2021-09-06 13:42 GMT

ಉಡುಪಿ, ಸೆ.6: ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಕ್ಷೇತ್ರ ವಿಂಗಡಣೆ ಮತ್ತು ಮೀಸಲಾತಿ ನಿಗದಿಯನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ಹೈಕೋರ್ಟಿನಲ್ಲಿ ಪ್ರಾರಂಭಗೊಳ್ಳುವ ಸಮಯದಲ್ಲೇ ರಾಜ್ಯ ಸರಕಾರ ಏಕಾಏಕಿ ಕ್ಷೇತ್ರ ಪುನರ್ ವಿಂಗಡಣೆಗಾಗಿ ಹೊಸ ಆಯೋಗ ರಚನೆಗೆ ಮುಂದಾಗಿರುವುದು ಚುನಾವಣೆಯನ್ನು ಮುಂದೂಡುವ ಹುನ್ನಾರವಾಗಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಆರೋಪಿಸಿದೆ.

ಸರಕಾರದ ಈ ನಿರ್ಧಾರಕ್ಕೆ ಹೈಕೋರ್ಟ್ ಅನುಮತಿ ನೀಡಿದಲ್ಲಿ ಪ್ರತ್ಯೇಕ ಆಯೋಗ ರಚನೆಯಾಗಿ ಪುನರ್ ವಿಂಗಡಣೆ ಪ್ರಕ್ರಿಯೆ ಕೈಗೊಳ್ಳಬೇಕಾ ಗಿದೆ. ಬಳಿಕ ಮೀಸಲಾತಿ ನಿಗದಿಯಾಗಿ ಬಳಿಕ ಚುನಾವಣೆ ನಡೆಯುವಂತಾಗಿದೆ.

ಈ ಹಿಂದೆ ಇದ್ದ ಮೀಸಲಾತಿ ನಿಗದಿಪಡಿಸುವ ಚುನಾವಣಾ ಆಯೋಗದ ಅಧಿಕಾರವನ್ನು ಹಿಂಪಡೆದು ಸರಕಾರವೇ ಮೀಸಲು ನಿಗದಿ ಮಾಡುವ ಬಗ್ಗೆ ಸಂಪುಟದಲ್ಲಿ ತೀರ್ಮಾನಿಸಲಾಗಿದೆ. ಚುನಾವಣಾ ಆಯೋಗಕ್ಕೆ ನೀಡಲಾಗಿರುವ ಪುನರ್ ವಿಂಗಡನೆ ಮಾಡುವ ಅಧಿಕಾರವನ್ನು ಸರಕಾರ ಹಿಂಪಡೆಯುವ ನಿರ್ಧಾರದ ಹಿಂದೆ ಚುನಾವಣೆಯನ್ನು ಮುಂದೂಡುವ ಚಿಂತನೆ ಅಡಗಿದೆ ಎಂದು ಜಿಲ್ಲಾ ಕಾಂಗ್ರೆಸ್‌ನ ವಕ್ತಾರ ಭಾಸ್ಕರ ರಾವ್ ಕಿದಿಯೂರು ಹೇಳಿದ್ದಾರೆ.

ಆಪರೇಷನ್ ಕಮಲದ ಮೂಲಕ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಅಧಿಕಾರ ಬಂದ ದಿನದಿಂದಲೂ ಭಿನ್ನಮತದಿಂದ ಹೊರಬರಲಾಗದೆ ಸರಕಾರ ಟೇಕ್‌ ಆಫ್ ಆಗಿರಲಿಲ್ಲ. ಇದರೊಂದಿಗೆ ಕೋವಿಡ್ ನಿರ್ವಹಣೆಯ ವೈಫಲ್ಯವನ್ನು ನೆಪವಾಗಿರಿಸಿ ಯಡಿಯೂರಪ್ಪ ನರನ್ನು ಬಿಜೆಪಿ ಹೈಕಮಾಂಡ್ ಪದಚ್ಯುತಿಗೊಳಿಸಿ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿ ಪೀಠದಲ್ಲಿ ಕುಳ್ಳಿರಿ ಸಿದೆ. ಆದರೂ ಸರಕಾರದಲ್ಲಿ ಗುಂಪುಗಾರಿಕೆ ಹಾಗೂ ಸಚಿವರಲ್ಲಿ ಹೊಂದಾಣಿಕೆ ಇಲ್ಲದೆ, ಜನರಲ್ಲಿ ಮತ ಯಾಚಿಸುವ ಧೈರ್ಯವಿಲ್ಲದೆ ಸರಕಾರ ಚುನಾವಣೆಯನ್ನು ಮುಂದೂಡಲು ನೆಪವನ್ನು ಕಂಡುಕೊಂಡಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News