ಬಂಟ್ವಾಳ: ಬಾಲಕಿಯ ಅತ್ಯಾಚಾರ ಎಸಗಿ ತಲೆಮರೆಸಿಕೊಂಡಿರುವ ಆರೋಪಿ

Update: 2021-09-07 07:40 GMT

ಬಂಟ್ವಾಳ, ಸೆ.7: ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಬಾಲಕಿಯನ್ನು ಪುಸಲಾಯಿಸಿ ಅತ್ಯಾಚಾರ ಎಸಗಿ ಸಂತ್ರಸ್ತೆ ಗರ್ಭಿಣಿಯಾಗುತ್ತಿದ್ದಂತೆ ಆರೋಪಿ ವಿದೇಶಕ್ಕೆ ತೆರಳಿ ತಲೆಮರೆಸಿಕೊಂಡಿರುವ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಉಪ್ಪಿನಂಗಡಿ ನಿವಾಸಿ ಮಸೂದ್ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದೆ. 17 ವರ್ಷ ಪ್ರಾಯದ ಸಂತ್ರಸ್ತ ಬಾಲಕಿ ತಾಲೂಕಿನ ಮಣಿನಾಲ್ಕೂರು ಗ್ರಾಮದ ನಿವಾಸಿಯಾಗಿದ್ದು ಇದೀಗ ಆಕೆ ಬಿ.ಸಿ.ರೋಡಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಮಗುವಿಗೆ ಜನ್ಮ ನೀಡಿದ್ದಾಳೆ. ದಾಖಲಾತಿ ಸಂದರ್ಭದಲ್ಲಿ ಮನೆಯವರ ಅಸ್ಪಷ್ಟ ಮಾಹಿತಿಯ ಹಿನ್ನೆಲೆಯಲ್ಲಿ ಆಸ್ಪತ್ರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದು ಇದರಿಂದ ಪ್ರಕರಣ ಬೆಳಕಿಗೆ ಬಂದಿದೆ.

ಸಂತ್ರಸ್ತೆ ಬಾಲಕಿಗೆ ಆರೋಪಿ ಮಸೂದ್ ವರ್ಷದ ಹಿಂದೆ ಇನ್ ಸ್ಟಾಗ್ರಾಂನಲ್ಲಿ ಪರಿಚಯವಾಗಿದ್ದನೆನ್ನಲಾಗಿದೆ. ಬಳಿಕ ಆತ ಬಾಲಕಿಯ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಬಂದು ಅತ್ಯಾಚಾರ ಎಸಗಿದ್ದಾನೆ. ಆ ಬಳಿಕ ಆರೋಪಿ  ನಾಪತ್ತೆಯಾಗಿದ್ದಾನೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.

ಇದೀಗ ಆರೋಪಿ ವಿದೇಶಕ್ಕೆ ತೆರಳಿ ತಲೆಮರೆಸಿಕೊಂಡಿದ್ದಾನೆ ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದ್ದು ಆತನಿಗಾಗಿ ಶೋಧ ಮುಂದುವರಿಸಿದ್ದಾರೆ. ಬಂಟ್ವಾಳ ಪೊಲೀಸ್ ಇನ್ ಸ್ಪೆಕ್ಟರ್ ಟಿ.ಡಿ.ನಾಗರಾಜ್ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News