ಕಾಂಗ್ರೆಸ್ ನಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ : ಡಾ.ಪರಮೇಶ್ವರ್

Update: 2021-09-07 11:20 GMT

ಉಡುಪಿ, ಸೆ.7: ನಮ್ಮ ಪಕ್ಷದಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ. ಅದನ್ನು ಯಾರು ಸೃಷ್ಠಿ ಮಾಡುತ್ತಿದ್ದಾರೆಂಬುದು ಗೊತ್ತಿಲ್ಲ. ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಇಬ್ಬರಿಗೂ ಜವಾಬ್ದಾರಿಗಳಿವೆ. ಪಕ್ಷ ಸಂಘಟನೆ ಮಾಡುವ ಜವಾಬ್ದಾರಿ ಎಲ್ಲರಿಗೂ ಇದೆ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ಹಾಗೂ ಮಾಜಿ ಉಪಮುಖ್ಯಮಂತ್ರಿ ಡಾ.ಪರಮೇಶ್ವರ್ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಂದು ಸಂಜೆ ನಡೆಯುವ ಶಾಸಕಾಂಗ ಪಕ್ಷ ಸಭೆಯಲ್ಲಿ ಸೆ.13ರಿಂದ ನಡೆಯುವ ಅಧಿವೇಶನದಲ್ಲಿ ಯಾವ ವಿಷಯಗಳ ಬಗ್ಗೆ ಪ್ರಾಸ್ತಾಪ ಮಾಡಬೇಕು ಹಾಗೂ ಸರಕಾರವನ್ನು ಯಾವ ರೀತಿ ಪ್ರಶ್ನೆ ಮಾಡಬೇಕು ಎಂಬುದರ ಬಗ್ಗೆ ಚರ್ಚಿಸಲಾಗುವುದು. ಅದೇ ರೀತಿ ಸರಕಾರದ ವೈಫಲ್ಯವನ್ನು ಹೇಗೆ ಇಡೀ ರಾಜ್ಯದ ಜನತೆಗೆ ತಿಳಿಸಬೇಕೆಂಬುದರ ಬಗ್ಗೆಯೂ ಚರ್ಚೆ ಮಾಡಲಾಗುವುದು ಎಂದರು.

ಸರಕಾರದಿಂದ ಅಧಿಕಾರ ದುರುಪಯೋಗ

ಮಹಾನಗರ ಪಾಲಿಕೆ ಚುನಾವಣೆಯ ಫಲಿತಾಂಶವು ರಾಜ್ಯ ಸರಕಾರ ತನ್ನ ಅಧಿಕಾರವನ್ನು ಯಾವ ರೀತಿ ದುರುಪಯೋಗ ಮಾಡಿದೆ ಎಂಬುದಕ್ಕೆ ಒಂದು ನಿದರ್ಶನವಾಗಿದೆ. ಪೆಟ್ರೋಲ್, ಡಿಸೇಲ್, ಗ್ಯಾ,ಸ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿರುವ ಇಂತಹ ಸಂದರ್ಭದಲ್ಲಿ ಬಿಜೆಪಿ ಅಧಿಕಾರ ದುರುಪಯೋಗ ಪಡಿಸಿಕೊಂಡು ಗೆದ್ದಿರುವುದು ಗೊತ್ತಾಗುತ್ತದೆ. ಈ ಫಲಿತಾಂಶಗಳು ನಮ್ಮನ್ನು ನಿರಾಶೆಗೊಳಿಸುವುದಿಲ್ಲ ಎಂದು ಡಾ.ಪರಮೇಶ್ವರ್ ತಿಳಿಸಿದರು.

ಕಾಂಗ್ರೆಸ್ ಮುಂದಿನ ದಿನಗಳಲ್ಲಿ ನಡೆಯುವ ಜಿಪಂ, ತಾಪಂ ಚುನಾವಣೆ ಯಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ. ವಿಧಾನಸಭಾ ಚುನಾವಣೆಯಲ್ಲೂ ಅತೀ ಹೆಚ್ಚಿನ ಸ್ಥಾನಗಳನ್ನು ಗೆದ್ದು ಸರಕಾರ ರಚನೆಯನ್ನು ಮಾಡುತ್ತೇವೆ ಎಂದು ಅವರು ಹೇಳಿದರು.

ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಡಿಕೆಶಿ, ಸಿದ್ದರಾಮಯ್ಯ ಹೆಚ್ಚು ತೊಡಗಿಸಿಕೊಳ್ಳದಿರುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸಾಮಾನ್ಯವಾಗಿ ಸ್ಥಳೀಯ ಚುನಾವಣೆಯಲ್ಲಿ ರಾಜ್ಯಾಧ್ಯಕ್ಷರು, ವಿರೋಧ ಪಕ್ಷದ ಮುಖಂಡರು ಭಾಗವಹಿಸುವುದಿಲ್ಲ. ಯಾಕೆಂದರೆ ಸ್ಥಳೀಯ ಮುಖಂಡರು, ಶಾಸಕರುಗಳೇ ಪರಿಣಾಮಕಾರಿಯಾಗಿ ಅಭ್ಯರ್ಥಿಗಳನ್ನು ಗೆಲ್ಲಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಾರೆ. ಆದುದರಿಂದ ಡಿಕೆಶಿ ಹಾಗೂ ಸಿದ್ದರಾಮಯ್ಯ ಹೆಚ್ಚು ತೊಡಗಿಸಿಕೊಂಡಿಲ್ಲ ಎಂಬುದು ದೊಡ್ಡ ವಿಷಯ ಆಗುವುದಿಲ್ಲ ಎಂದರು.

ಅಧಿವೇಶನದಲ್ಲಿ ಚರ್ಚೆಯಾಗಲಿ

ಸರಕಾರದ 160 ಕೋಟಿ ರೂ. ವೆಚ್ಚ ಮಾಡಿ ಜಾತಿ ಗಣತಿ ವರದಿಯನ್ನು ಸಿದ್ಧಪಡಿಸಲಾಗಿದೆ. ಅದನ್ನು ಸರಕಾರ ಬಹಿರಂಗ ಪಡಿಸಬೇಕು ಎಂಬುದು ನಮ್ಮ ಅಭಿಪ್ರಾಯವಾಗಿದೆ ಎಂದು ಡಾ.ಪರಮೇಶ್ವರ್ ತಿಳಿಸಿದರು.

ನಮ್ಮ ಸರಕಾರದ ಅವಧಿಯಲ್ಲಿ ಈ ವರದಿ ಪೂರ್ಣ ಆಗಿರಲಿಲ್ಲ. ಈಗ ಪೂರ್ಣಗೊಳಿಸಿ ಸರಕಾರಕ್ಕೆ ವರದಿ ಸಲ್ಲಿಸಲಾಗಿದೆ. ಆದುದರಿಂದ ಸರಕಾರದ ಕೈಯಲ್ಲಿರುವ ಈ ವರದಿಯನ್ನು ವಿಧಾನಸಭಾ ಅಧಿವೇಶನದಲ್ಲಿ ಚರ್ಚೆ ಮಾಡ ಬೇಕು. ಅದರಲ್ಲಿ ನ್ಯೂತೆಗಳಿಲ್ಲದೆ ಸರಿಪಡಿಸುವ ಬಗ್ಗೆ ಅಥವಾ ಪುನರ್ ಸಮೀಕ್ಷೆ ಮಾಡುವ ತೀರ್ಮಾನಗಳನ್ನು ತೆಗೆದುಕೊಳ್ಳಬೇಕು. ಅದರಲ್ಲಿ ಸರಕಾರಕ್ಕೆ ಮುಜುಗರ ಆಗುವ ವಿಚಾರ ಏನು ಇಲ್ಲ. ಸದನದ ಮುಂದೆ ಇಟ್ಟರೆ ಎಲ್ಲರು ಸೇರಿ ಚರ್ಚೆ ಮಾಡಬಹುದು ಎಂದರು.

ಸದ್ಯ ಸಕ್ರಿಯರಾಗಿಲ್ಲದ ಕುರಿತ ಪ್ರಶ್ನೆಗೆ, ‘ಪಕ್ಷ ನನಗೆ ಅನೇಕ ಅವಕಾಶಗಳನ್ನು ಕೊಟ್ಟಿದೆ. ಪಕ್ಷ ಕೊಟ್ಟ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ ಮತ್ತು ಮುಂದೆಯೂ ಮಾಡುತ್ತೇನೆ. ಆಗ ನಾನು ಅಧ್ಯಕ್ಷನಾಗಿದ್ದುದರಿಂದ ಹೆಚ್ಚು ಜವಾಬ್ದಾರಿ ಇತ್ತು. ಈಗ ಅಂತಹ ಯಾವುದೇ ಜವಾಬ್ದಾರಿ ಇಲ್ಲ ಎಂದು ಡಾ.ಪರಮೇಶ್ವರ್ ತಿಳಿಸಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ, ಅಭಯ ಚಂದ್ರ ಜೈನ್, ಎನ್‌ಎಸ್‌ಯುಐ ಜಿಲ್ಲಾಧ್ಯಕ್ಷ ಸೌರಭ್ ಬಲ್ಲಾಳ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News