ಶಾಲಾ ಮಕ್ಕಳ ಆರೋಗ್ಯ ತಪಾಸಣೆಗೆ ಆದ್ಯತೆ ನೀಡಲು ತಹಶೀಲ್ದಾರ್ ಸೂಚನೆ

Update: 2021-09-07 13:09 GMT

ಮಂಗಳೂರು, ಸೆ.7: ಕೋವಿಡ್‌ನ ಸಂಭಾವ್ಯ ಮೂರನೇ ಅಲೆಯ ಹಿ್ನೆಲೆಯಲ್ಲಿ ಶಾಲಾ ಮಕ್ಕಳ ಆರೋಗ್ಯ ತಪಾಸಣೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಕಡಿಮೆ ತೂಕ ಮತ್ತು ಹೆಚ್ಚು ತೂಕದ ಮಕ್ಕಳ ಆರೋಗ್ಯವನ್ನೂ ತಪಾಸಣೆ ಮಾಡಬೇಕು. ಈ ನಿಟ್ಟಿನಲ್ಲಿ ಗ್ರಾಮ ಸಹಾಯಕರು, ಆಶಾ ಕಾರ್ಯಕರ್ತೆಯರ ಸಹಿತ ಪ್ರತ್ಯೇಕ ತಂಡ ರಚನೆ ಮಾಡಲಾಗುವುದು ಎಂದು ಮಂಗಳೂರು ತಹಶೀಲ್ದಾರ್ ಗುರುಪ್ರಸಾದ್ ತಿಳಿಸಿದ್ದಾರೆ.

ಮಂಗಳೂರು ತಾಲೂಕು ಕಂದಾಯ ಕಚೇರಿಯಲ್ಲಿ ಮಂಗಳವಾರ ನಡೆದ ತಂಬಾಕು ನಿಯಂತ್ರಣ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ದ.ಕ.ದಲ್ಲಿ ಕೋವಿಡ್ ಪಾಸಿಟಿವಿಟಿ ದರ ಶೇ.2ಕ್ಕಿಂತ ಕಡಿಮೆಗೊಳಿಸುವ ಸಲುವಾಗಿ ಜಿಲ್ಲಾಡಳಿತದ ಸೂಚನೆಯ ಮೇರೆಗೆ ಕೋವಿಡ್ ಪರೀಕ್ಷೆಯನ್ನು ಹೆಚ್ಚಿಸಲಾಗುತ್ತಿದೆ. ಪ್ರತಿ ಗ್ರಾ ಪಂಗೆ ತಲಾ 150 ಕೋವಿಡ್ ಟೆಸ್ಟ್‌ನಂತೆ ಜಿಲ್ಲೆಯಲ್ಲಿ ದಿನಂಪ್ರತಿ 15 ಸಾವಿರ ಪರೀಕ್ಷೆ ನಡೆಸುವ ಗುರಿ ಇರಿಸಿಕೊಳ್ಳಾಗಿದೆ. ಪ್ರತಿ ಸರಕಾರಿ ಕಚೇರಿ, ವಾಣಿಜ್ಯ ಸಂಕೀರ್ಣಗಳಿಗೆ ಆಗಮಿಸುವವರ ಕೋವಿಡ್ ಪರೀಕ್ಷೆ ನಡೆಸುವಂತೆ ಸೂಚಿಸಲಾಗಿದೆ ಎಂದು ತಹಶೀಲ್ದಾರ್ ಹೇಳಿದರು.

ಈಗ ವೈರಲ್ ಜ್ವರ ತೀವ್ರವಾಗಿರುವುದರಿಂದ ಕೋವಿಡ್ ಪರೀಕ್ಷೆಯು ಅನಿವಾರ್ಯವಾಗಿದೆ. ಮಂಗಳೂರು ತಾಲೂಕಿನಲ್ಲಿ ಕೋವಿಡ್ ಪಾಸಿಟಿವಿಟಿ ದರ ಶೇ.3.2 ಇದ್ದು, ಅದನ್ನು ಕಡಿಮೆ ಮಾಡುವ ಸಲುವಾಗಿ ಕೋವಿಡ್ ಪರೀಕ್ಷೆಯನ್ನು ಹೆಚ್ಚಿಲಸಾಗುತ್ತಿದೆ ಎಂದು ತಹಶೀಲ್ದಾರ್ ನುಡಿದರು.

ದ.ಕ. ಜಿಲ್ಲೆಗೆ ಬೇಕಾಗುವಷ್ಟು ವ್ಯಾಕ್ಸಿನ್ ಪೂರೈಸುವಂತೆ ಸರಕಾರವೇ ಸೂಚನೆ ನೀಡಿದೆ. ಸೆ.8ರಂದು ಜಿಲ್ಲೆಯಲ್ಲಿ ದಿನಪೂರ್ತಿ ಲಕ್ಷ ಲಸಿಕಾ ಅಭಿಯಾನವು ಖಾಸಗಿ ಸಹಭಾಗಿತ್ವದಲ್ಲಿ ನಡೆಯಲಿದೆ. ಗಡಿ ಪ್ರದೇಶದ ಐದು ತಾಲೂಕುಗಳಲ್ಲಿ ಶೇ.100 ಲಸಿಕೆ ಗುರಿ ತಲುಪುವ ಉದ್ದೇಶ ಹೊಂದಲಾಗಿದೆ. ವಿಕಲಚೇತನರು ಹಾಗೂ ಗರ್ಭಿಣಿಯರು ಆಯಾ ವೈದ್ಯರ ಸಲಹೆ ಮೇರೆಗೆ ಲಸಿಕೆ ಪಡೆದುಕೊಳ್ಳಬೇಕು. ಹಾಸಿಗೆ ಹಿಡಿದಿರು ವವರ ಬಳಿ ತೆರಳಿ ಅವರಿಗೆ ಮಾತ್ರ ವ್ಯಾಕ್ಸಿನ್ ನೀಡಲು ಅವಕಾಶ ಇದೆ. ಜಿಲ್ಲೆಗೆ 1.80 ಲಕ್ಷ ಡೋಸ್ ಲಸಿಕೆ ಬಂದಿದ್ದು, ವ್ಯಾಕ್ಸಿನ್ ಕೊರತೆ ಇಲ್ಲ ಎಂದು ತಹಸೀಲ್ದಾರ್ ಗುರುಪ್ರಸಾದ್ ತಿಳಿಸಿದರು.

ಮಕ್ಕಳಿಗೆ ಲಸಿಕೆ ನೀಡುವುದಕ್ಕಾಗಿ ಈಗಾಗಲೆ ಬೆಂಗಳೂರಿಗೆ ಲಸಿಕೆ ತಲುಪಿದೆ. ಶೀಘ್ರ ಮಕ್ಕಳಿಗೆ ಪಿಸಿವಿ ಲಸಿಕೆ ನೀಡಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ವುಂಗಳೂರು ತಾಲೂಕು ಆರೋಗ್ಯಾಧಿಕಾರಿ ಡಾ.ಸುಜಯಾ ಭಂಡಾರಿ ಸಭೆಗೆ ಮಾಹಿತಿ ನೀಡಿದರು. ಮಕ್ಕಳಿಗೆ 6, 10 ಹಾಗೂ 14ನೇ ವಾರದಲ್ಲಿ ಒಟ್ಟು ಮೂರು ಡೋಸ್ ಲಸಿಕೆಯನ್ನು ಉಚಿತವಾಗಿ ನೀಡಲಾಗುತ್ತದೆ. 9 ತಿಂಗಳಲ್ಲಿ ಬೂಸ್ಟರ್ ಡೋಸ್ ನೀಡಲಾಗುತ್ತದೆ. ಈಗಾಗಲೇ ಖಾಸಗಿ ಆಸ್ಪತ್ರೆಗಳಲ್ಲಿ ಮಕ್ಕಳಿಗೆ ಈ ಲಸಿಕೆ ನೀಡಲಾಗುತ್ತಿದೆ. ನ್ಯುಮೋನಿಯಾ, ಮೆದುಳು ರೋಗ ಹಾಗೂ ರಕ್ತ ತೊಂದರೆಗೆ ಸಂಬಂಧಿಸಿ ಈ ಲಸಿಕೆ ಬಹಳ ಪ್ರಯೋಜನಕಾರಿಯಾಗಲಿದೆ ಎಂದರು.

ಪ್ರಸಕ್ತ ಶಾಲಾ ಕಾಲೇಜು ಆರಂಭವಾಗುತ್ತಿದ್ದು, ಈಗಲೇ ತಂಬಾಕು ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು. ಶಾಲಾ ಕಾಲೇಜಿನ 100 ಮಿೀಟರ್ ಆವರಣದಲ್ಲಿ ತಂಬಾಕು ಮಾರಾಟ, ಸೇವೆಗೆ ಅವಕಾಶ ಇಲ್ಲ. ಹೀಗಾಗಿ ತಂಬಾಕು ಪತ್ತೆಯಾದರೆ ದಂಡ ವಿಧಿಸಿ ಬಿಡುವುದಕ್ಕಿಂತ ಕೇಸು ದಾಖಲಿಸಲು ಗಮನ ನೀಡಬೇಕು. ಇದರಿಂದ ತಂಬಾಕು ಸೇವನೆ ನಿಯಂತ್ರಿಸಲು ಸಾಧ್ಯವಿದೆ. ತಂಬಾಕು ನಿಯಂತ್ರಣ ಕ್ಕೆ ಸೆ.8ರಿಂಲೇ ಮಂಗಳೂರು ತಾಲೂಕಿನಾದ್ಯಂತ ಸಂಬಂಧಿತ ಅಧಿಕಾರಿಗಳಿಂದ ಕಾರ್ಯಾಚರಣೆ ಆರಂಭವಾಗಲಿದೆ ಎಂದು ತಹಶೀಲ್ದಾರ್ ನುಡಿದರು.

ಮಂಗಳೂರು ತಾಲೂಕಿನಲ್ಲಿ ಒಂದು ಗ್ರಾಪಂವನ್ನು ತಂಬಾಕು ಮುಕ್ತವಾಗಿ ಪರಿವರ್ತಿಸಬೇಕು. ಸರಕಾರಿ ಕಚೇರಿಗಳಲ್ಲಿ ತಂಬಾಕು ನಿಷೇಧ ಬಗ್ಗೆ ಭಿತ್ತಿ ಫಲಕ ಅಳವಡಿಸಬೇಕು ಎಂದು ತಹಸೀಲ್ದಾರ್ ಸೂಚನೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News