ಶಿಕ್ಷಕರ ಸಮಸ್ಯೆಗಳನ್ನು ಹಂತ ಹಂತವಾಗಿ ಪರಿಹರಿಸಲು ಪ್ರಯತ್ನಿಸಲಾಗುವುದು : ಶಿಕ್ಷಣ ಸಚಿವ ಬಿ.ಸಿ.ನಾಗೇಶ್

Update: 2021-09-07 16:57 GMT

ಭಟ್ಕಳ: ಶಿಕ್ಷಕರ ಸಮಸ್ಯೆಗಳನ್ನು ಹಂತಹಂತವಾಗಿ ಬಗೆಹರಿಸುವ ಪ್ರಯತ್ನ ಮಾಡಲಾಗುವುದು ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್  ತಿಳಿಸಿದರು.

ಅವರು ಆಲ್ ಇಂಡಿಯಾ ಐಡಿಯಾಲ್ ಟೀಚರ್ಸ್ ಅಸೋಸಿಯೇಶನ್ ಐಟಾ ಕರ್ನಾಟಕ ಆಯೋಜಿಸಿದ್ದ ಆನ್‌ಲೈನ್ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಶಿಕ್ಷಣವು ಹಲವಾರು ನ್ಯೂನತೆ ಹಾಗೂ ಕೊರತೆಗಳಿಂದ ಕೂಡಿದ್ದು ಇದರ ಪರಿಣಾಮ ಸಮಾಜದ ಮೇಲೆ ಬೀಳುತ್ತಿರುವುದು ನಾವು ಕಾಣುತ್ತಿದ್ದೇವೆ. ಇದಕ್ಕಾಗಿಯೇ ಹೋಸ ಶಿಕ್ಷಣ ನೀತಿಯ ಮೂಲಕ ಮೌಲ್ಯಾಧಾರಿತ ಶಿಕ್ಷಣವನ್ನು ನೀಡಲು ಸರ್ಕಾರ ಮುಂದಾಗಿದ್ದು ಇದರಲ್ಲಿ ಶಿಕ್ಷಕರ ಪಾತ್ರ ಬಹಳ ಮುಖ್ಯವಾಗಿದೆ ಎಂದರು.

ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದ ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ, ಶಿಕ್ಷಣ ಕ್ಷೇತ್ರ ಎಂಬುವುದು ಅತ್ಯಂತ ಪವಿತ್ರವಾಗಿದ್ದು ಇದನ್ನು ಜಾತಿ, ಧರ್ಮದ ಆಧಾರದಲ್ಲಿ ಕೋಮುಕರಣ ಮಾಡಲಾಗುತ್ತಿದೆ. ಹೊಸ ಶಿಕ್ಷಣ ನೀತಿಯನ್ನು ಜಾರಿಗೆ ತರುವ ಮೂಲಕ ಸರ್ಕಾರ ಜಾತಿ, ಧರ್ಮಾಧಾರಿತ ಪೂರ್ವಗ್ರಹಗಳನ್ನು ಜಾರಿಗೆ ತರಲು ಯತ್ನಿಸುತ್ತಿದ್ದು ಇದನ್ನು ಕೈಬಿಡಬೇಕೆಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮರ್ಕಝಿ ತಾಲೀಮಿ ಬೋರ್ಡ್ ದಹೆಲಿ ಇದರ ನಿರ್ದೇಶಕ ಹಾಗೂ ಶಿಕ್ಷಣ ತಜ್ಞ ಸೈಯ್ಯದ್ ತನ್ವೀರ್ ಆಹ್ಮದ್, ಹೊಸ ಶಿಕ್ಷಣ ನೀತಿಯ ಅನುಕೂಲ ಮತ್ತು ಅನಾನುಕೂಲತೆಗಳ ಕುರಿತಂತೆ ಸಮಗ್ರವಾಗಿ ಚರ್ಚೆಯಾಗಬೇಕು, ಇದರಲ್ಲಿನ ಉತ್ತಮ ಅಂಶಗಳ ಬಗ್ಗೆ ಅದ್ಯಯನ ನಡೆಸಿ ಅದನ್ನು ಮಾತ್ರ ಅಳವಡಿಸಿಕೊಳ್ಳಬೇಕು ಎಂದರು.

ಐಟಾ ರಾಜ್ಯಾಧ್ಯಕ್ಷ ಎಂ.ಆರ್.ಮಾನ್ವಿ ಪ್ರಸ್ತವಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ರಾಜ್ಯಕಾರ್ಯದರ್ಶಿ ಯಾಸೀನ್ ಭಿಕ್ಬಾ ಹಾಗೂ ರಾಜ್ಯ ಸಲಹಾ ಸಮಿತಿ ಸದಸ್ಯ ಡಾ. ಮುಬೀನ್ ಉಲ್ಲಾಳ ಕಾರ್ಯಕ್ರಮ ನಿರೂಪಿಸಿದರು.  ರಾಜ್ಯ ಮಹಿಳಾ ವಿಭಾಗದ ಸಂಚಾಲಕಿ ಬಿಲ್ಕೀಸ್ ಫಾತಿಮಾ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News