ಉಡುಪಿ: ಒಂದೇ ದಿದಲ್ಲಿ 173ಕ್ಕೇರಿದ ಕೋವಿಡ್ ಪಾಸಿಟಿವ್

Update: 2021-09-08 14:54 GMT

ಉಡುಪಿ, ಸೆ.8: ಜಿಲ್ಲೆಯಲ್ಲಿ ನಿನ್ನೆ ಕೇವಲ 34 ಮಂದಿ ಕೋವಿಡ್ ಸೋಂಕಿಗೆ ಪಾಸಿಟಿವ್ ಬಂದಿದ್ದರೆ, ಒಂದೇ ದಿನದಲ್ಲಿ ಈ ಸಂಖ್ಯೆ 173ಕ್ಕೆ ನೆಗೆದಿದೆ. ಈ ಮೂಲಕ ಮಂಗಳವಾರ ಶೇ.0.65ಕ್ಕೆ ಇಳಿದ ಪಾಸಿಟಿವಿಟಿ ಪ್ರಮಾಣ, ಬುಧವಾ ಮತ್ತೆ ಶೇ.2.57ಕ್ಕೆ ನೆಗೆಯಿತು.

ಮಂಗಳವಾರ 5162 ಮಂದಿಯ ಕೋವಿಡ್ ಪರೀಕ್ಷೆಯಲ್ಲಿ 34 ಮಂದಿ ಪಾಸಿಟಿವ್ ಕಂಡುಬಂದಿದ್ದರೆ, ಬುಧವಾರ 6710 ಮಂದಿಯನ್ನು ಕೋವಿಡ್ ಪರೀಕ್ಷೆಗೊಳಪಡಿಸಿದ್ದು, ಇವರಲ್ಲಿ 173 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ರಾಜ್ಯದ ಕೋವಿಡ್ ವಾರ್‌ರೂಮ್ ಪ್ರಕಟಿಸಿದ ಅಂಕಿ ಅಂಶದಂತೆ ಕಳೆದ ಐದು ದಿನಗಳಲ್ಲಿ ಜಿಲ್ಲೆಯ ಕೋವಿಡ್ ಪ್ರಗತಿದರ ಶೇ.1.43ರಲ್ಲಿದ್ದರೆ, ರಾಜ್ಯದ ಸರಾಸರಿ ಶೇ.0.69ಕ್ಕೆ ಇಳಿದಿದೆ.

ಜಿಲ್ಲೆಯಲ್ಲಿ ಇಂದು ಸಹ ಯಾರೂ ಹೊಸದಾಗಿ ಸೋಂಕಿಗೆ ಬಲಿಯಾಗಿಲ್ಲ. ದಿನದಲ್ಲಿ 177 ಮಂದಿ ಸೋಂಕಿನಿಂದ ಚೇತರಿಸಿಕೊಂಡರೆ, ಸೋಂಕಿಗೆ ಸಕ್ರಿಯ ರಾಗಿರುವವರ ಸಂಖ್ಯೆ 1368ಕ್ಕಿಳಿದಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗಭೂಷಣ ಉಡುಪ ತಿಳಿಸಿದ್ದಾರೆ.

ಇಂದು ಕೊರೋನ ಸೋಂಕು ದೃಢಪಟ್ಟ 173 ಮಂದಿಯಲ್ಲಿ 75 ಮಂದಿ ಪುರುಷರಾದರೆ, 98 ಮಂದಿ ಮಹಿಳೆಯರು. ಪಾಸಿಟಿವ್ ಬಂದವರಲ್ಲಿ 103 ಮಂದಿ ಉಡುಪಿ ತಾಲೂಕು, 30 ಮಂದಿ ಕುಂದಾಪುರ ಹಾಗೂ 38 ಮಂದಿ ಕಾರ್ಕಳ ತಾಲೂಕಿನವರು.ಹೊರಜಿಲ್ಲೆಯ ಇಬ್ಬರು ಸಹ ಪಾಸಿಟಿವ್ ಬಂದಿದ್ದಾರೆ. ಇವರಲ್ಲಿ 22 ಮಂದಿಯನ್ನು ಕೋವಿಡ್ ಆಸ್ಪತ್ರೆಗೆ ಸೇರಿಸಿದರೆ, 151 ಮಂದಿ ಮನೆಗಳಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ.

ಮಂಗಳವಾರ 177 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಈವರೆಗೆ ಕೊರೋನದಿಂದ ಚೇತರಿಸಿಕೊಂಡವರ ಸಂಖ್ಯೆ 72,906ಕ್ಕೇರಿದೆ. ನಿನ್ನೆ ಜಿಲ್ಲೆಯಲ್ಲಿ 6710 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಈವರೆಗೆ ಜಿಲ್ಲೆಯಲ್ಲಿ ಸೋಂಕಿಗೆ ಪಾಸಿಟಿವ್ ಬಂದವರ ಸಂಖ್ಯೆ 74,732ಕ್ಕೇರಿದೆ. ಇಂದಿನವರೆಗೆ ಜಿಲ್ಲೆಯಲ್ಲಿ ಒಟ್ಟು 10,24,924 ಮಂದಿಯನ್ನು ಕೋವಿಡ್ ಪರೀಕ್ಷೆಗೊಳ ಪಡಿಸಲಾಗಿದೆ.

16,206 ಡೋಸ್ ಲಸಿಕೆ ವಿತರಣೆ: ಜಿಲ್ಲೆಯಲ್ಲಿ ಬುಧವಾರ ಒಟ್ಟು 16,206 ಮಂದಿ ಕೋವಿಡ್-19 ಲಸಿಕೆಯನ್ನು ಪಡೆದಿದ್ದಾರೆ.ಇವರಲ್ಲಿ 9137 ಮಂದಿ ಮೊದಲ ಡೋಸ್ ಹಾಗೂ 7069ಮಂದಿ ಎರಡನೇ ಡೋಸ್‌ನ್ನು ಸ್ವೀಕರಿಸಿದ್ದಾರೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ನಾಗಭೂಷಣ ಉಡುಪ ತಿಳಿಸಿದ್ದಾರೆ.

18ರಿಂದ 44ವರ್ಷದೊಳಗಿನ 6158 ಮಂದಿ ಮೊದಲ ಹಾಗೂ 3698 ಮಂದಿ ಎರಡನೇ ಡೋಸ್ ಪಡೆದಿದ್ದರೆ, 45 ವರ್ಷ ಮೇಲಿನ 2979 ಮಂದಿಗೆ ಮೊದಲ ಹಾಗೂ 3371 ಮಂದಿಗೆ ಎರಡೇ ಡೋಸ್ ಲಸಿಕೆಯನ್ನು ನೀಡಲಾಗಿದೆ.

ಬುಧವಾರ ಸಂಜೆಯವರೆಗೆ ಜಿಲ್ಲೆಯಲ್ಲಿ ಒಟ್ಟು 8,22,587 ಮಂದಿ ಮೊದಲ ಡೋಸ್‌ನ್ನು ಪಡೆದರೆ, 3,02,974 ಮಂದಿ ಎರಡೂ ಡೋಸ್‌ಗಳನ್ನು ಸ್ವೀಕರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News