ಲಿಂಗಾಯತರಿಗೆ ಮೀಸಲಾತಿ ಬಗ್ಗೆ ಕೊಟ್ಟಿದ್ದ ಮಾತನ್ನು ಬೊಮ್ಮಾಯಿ ಉಳಿಸಿಕೊಳ್ಳಲಿ: ಬಸವ ಜಯಮತ್ಯುಂಜಯ ಶ್ರೀ

Update: 2021-09-08 16:31 GMT

ಮಂಗಳೂರು, ಸೆ.8: ರಾಜ್ಯದ ಲಿಂಗಾಯತ ಸಮುದಾಯಕ್ಕೆ ಮೀಸಲಾತಿ ನೀಡುವುದಾಗಿ ಬೆಂಗಳೂರಿನ ವಿಧಾನಸೌಧ ಅಧಿವೇಶನದಲ್ಲಿ ಕೊಟ್ಟಿದ್ದ ಮಾತನ್ನು ಉಳಿಸಿಕೊಳ್ಳುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪ್ರಥಮ ಜಗದ್ಗುರು ಶ್ರೀ ಬಸವ ಜಯ ಮತ್ಯುಂಜಯ ಸ್ವಾಮೀಜಿ ತಿಳಿಸಿದ್ದಾರೆ.

ಮಲೈ ಮಹದೇಶ್ವರ ಬೆಟ್ಟದ ಶಕ್ತಿ ಪೀಠದಿಂದ ಮೈಸೂರು- ಕಿತ್ತೂರು ಕರ್ನಾಟಕ- ಕಲ್ಯಾಣ ಕರ್ನಾಟಕ ಮೂಲಕ ಬೆಂಗಳೂರಿನ ವಿಧಾನಸೌಧದ ಆಡಳಿತ ಪೀಠದವರೆಗೆ ಆಯೋಜಿಸಿರುವ ಪ್ರತಿಜ್ಞಾ ಪಂಚಾಯತ್ ಬೃಹತ್ ರಾಜ್ಯ ಅಭಿಯಾನ ಅಂಗವಾಗಿ ಮಂಗಳೂರಿಗೆ ಆಗಮಿಸಿದ್ದ ಅವರು, ನಗರದ ಆರ್ಯ ಸಮಾಜದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಲಿಂಗಾಯತ ಪಂಚಮಸಾಲಿ, ಗೌಡ ಲಿಂಗಾಯತ, ಮಲೆಗೌಡ, ದೀಕ್ಷಾ ಲಿಂಗಾಯತರಿಗೆ 2ಎ ಮತ್ತು ಲಿಂಗಾಯತ ಎಲ್ಲ ಸಮಾಜಗಳನ್ನು ಕೇಂದ್ರ ಸರಕಾರದ ಒಬಿಸಿ ಮೀಸಲಾತಿಗೆ ಸೇರ್ಪಡೆಗೊಳಿಸುವಂತೆ ಹಕ್ಕೊತ್ತಾಯಿಸಿ ನಾಲ್ಕನೇ ಹಂತದ ಮುಂದವರಿದ ಚಳವಳಿ ನಡೆಸುತ್ತಿದ್ದೇವೆ ಎಂದು ಹೇಳಿದರು.

ಮಕ್ಕಳ ಶಿಕ್ಷಣ ಹಾಗೂ ಯುವಜನರ ಉದ್ಯೋಗಕ್ಕಾಗಿ ಮೀಸಲಾತಿ ಹೋರಾಟ ಒಂದೇ ಮಾರ್ಗವಾಗಿದೆ. ಕಳೆದ ಬಾರಿ ಐತಿಹಾಸಿಕ ಪಾದಯಾತ್ರೆ, ಮಹಾರ್ಯಾಲಿ, ಧರಣಿ ಸತ್ಯಾಗ್ರಹ, ಸಂದೇಶ ಜಾಥಾ ನಡೆಸಿದ್ದೇವೆ. ಸರಕಾರ ವಿಧಾನಸೌಧದಲ್ಲಿ ಆಗಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ಬೊಮ್ಮಾಯಿ ಅವರ ಸಮ್ಮುಖದಲ್ಲೇ ನೀಡಿದ್ದ ಭರವಸೆಯ ಗಡುವು ಸೆ.15ಕ್ಕೆ ಮುಗಿಯುತ್ತಿದೆ. ರಾಜ್ಯ ಅಭಿಯಾನದ ಬಳಿಕ ಅ.1ರಿಂದ ಧರಣಿ ನಡೆಸಿದ್ದೇವೆ ಎಂದು ಅವರು ಹೇಳಿದರು.

ಮಂಗಳೂರು ಭಾಗದಲ್ಲಿ ವೀರಶೈವರ ಸಂಖ್ಯೆ ಬಹಳ ಕಡಿಮೆ ಇದೆ. ಆದರೆ, ನಮ್ಮ ಹೋರಾಟವನ್ನು ಬೆಂಬಲಿಸುವವರು ಇದ್ದಾರೆ. ಕಿತ್ತೂರು ಚೆನ್ನಮ್ಮರಂತೆ, ರಾಣಿ ಅಬ್ಬಕ್ಕ ಇಲ್ಲಿ ಹೋರಾಡಿದವರು. ಅವರ ಕಾಲದಲ್ಲಿ ಈ ಭಾಗದಲ್ಲಿ 64 ಮಠಗಳಿದ್ದವು. ಈಗ 27 ಮಾತ್ರ ಉಳಿದಿದ್ದು, ಅವುಗಳ ಕಾಯಕಲ್ಪಕ್ಕಾಗಿ ಮುಂದೆ ಪ್ರವಾಸ ಮಾಡುತ್ತೇನೆ ಎಂದು ಸ್ವಾಮೀಜಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ದಿನಕರ ಶೆಟ್ಟಿ, ಆನಂದ ಶೆಟ್ಟಿ ಅಡ್ಯಾರ್, ಹರೀಶ್ ಮಡ್ಯಾರ್, ಶಿಪಾಲ್‌ರಾಜ್, ಧರ್ಮರಾಜ್, ಶಂಭು ಪಟೇಲ್ ಮೈಸೂರು, ಮಲ್ಲಿಕಾರ್ಜುನ ಕಟ್ರೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News