ಉಡುಪಿ: ವಾರಾಂತ್ಯ ಕರ್ಫ್ಯೂ ರದ್ದು ಕುರಿತು ಶುಕ್ರವಾರ ಅಂತಿಮ ನಿರ್ಧಾರ

Update: 2021-09-09 16:17 GMT
ಸಾಂದರ್ಭಿಕ ಚಿತ್ರ

ಉಡುಪಿ, ಸೆ.9: ರಾಜ್ಯ ಸರಕಾರದ ಸೂಚನೆಯಂತೆ ಉಡುಪಿ ಜಿಲ್ಲೆಯಲ್ಲೂ ವಾರಾಂತ್ಯ ಕರ್ಫ್ಯೂ ರದ್ದುಗೊಳಿಸುವ ಕುರಿತು ಇಂದು ಜಿಲ್ಲಾ ಕೋವಿಡ್ ನಿಯಂತ್ರಣ ತಜ್ಞರ ಸಮಿತಿ ಹಾಗೂ ಸಂಬಂಧಿತ ಇತರರ ಜೊತೆ ವ್ಯಾಪಕ ಚರ್ಚೆ ನಡೆದಿದ್ದು, ಇನ್ನಷ್ಟು ಚರ್ಚೆಯ ಬಳಿಕ ನಾಳೆ ಬೆಳಗ್ಗೆ ಈ ಬಗ್ಗೆ ಅಂತಿಮ ನಿರ್ಧಾರವನ್ನು ಜಿಲ್ಲಾಧಿಕಾರಿ ಕೂರ್ಮಾ ರಾವ್ ಎಂ.ಅವರು ಕೈಗೊಳ್ಳಲಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ತಿಳಿಸಿದ್ದಾರೆ.

ಸಭೆಯಲ್ಲಿ ತೆಗೆದುಕೊಂಡ ನಿರ್ಧಾರದ ಬಳಿಕ ಅವರನ್ನು ಪ್ರಶ್ನಿಸಿದಾಗ, ಈ ಬಗ್ಗೆ ತುಂಬಾ ಎಚ್ಚರಿಕೆಯ ಹೆಜ್ಜೆ ಇಡಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಹೀಗಾಗಿ ನಾಳೆ ಸಚಿವರು, ಶಾಸಕರೊಂದಿಗೆ ಇನ್ನಷ್ಟು ಚರ್ಚಿಸಿ ಮತ್ತೊಂದು ಸುತ್ತಿನ ಚರ್ಚೆಯ ಬಳಿಕ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದವರು ನುಡಿದರು.

ನಾಳೆ ವಾರಾಂತ್ಯ ಕರ್ಫ್ಯೂ ಬಗ್ಗೆ ಮಾತ್ರ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಈಗ ರಾತ್ರಿ 9ರಿಂದ ಇರುವ ರಾತ್ರಿ ಕರ್ಫ್ಯೂ ಹಾಗೆ ಮುಂದುವರಿಯಲಿದೆ ಎಂದು ಸದಾಶಿವ ಪ್ರಭು ತಿಳಿಸಿದರು.

ಶಾಸಕ ಭಟ್ ಒತ್ತಾಯ: ಉಡುಪಿ ಜಿಲ್ಲೆಯಲ್ಲಿ ಪಾಸಿಟಿವಿಟಿ ರೇಟ್ ಕಡಿಮೆ ಇರುವ ಕಾರಣ ಜಿಲ್ಲೆಯ ವಾರಾಂತ್ಯ ಕರ್ಫ್ಯೂವನ್ನು ತೆರವುಗೊಳಿಸು ವಂತೆ ಉಡುಪಿ ಶಾಸಕ ಕೆ.ರಘುಪತಿ ಭಟ್ ಒತ್ತಾಯಿಸಿದ್ದಾರೆ.

ರಾಜ್ಯದಲ್ಲಿ ಪಾಸಿಟಿವಿಟಿ ರೇಟ್ ಅಧಿಕವಾಗಿದ್ದಾಗ ಜಿಲ್ಲೆ ಹಾಗೂ ಗಡಿ ಜಿಲ್ಲೆಗಳಲ್ಲಿ ವಾರಾಂತ್ಯ ಕರ್ಫ್ಯೂ ವಿಧಿಸಲಾಗಿತ್ತು. ಈಗ ಪಾಸಿಟಿವಿಟಿ ರೇಟ್ ಇಳಿಮುಖವಾಗ ಹಿನ್ನೆಲೆಯಲ್ಲಿ ಈಗ ಕರ್ಫ್ಯೂ ಅಗತ್ಯವಿಲ್ಲ ಎಂದವರು ಅಭಿಪ್ರಾಯಪಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News