ಬಂಟ್ವಾಳ: ಅತ್ಯಾಚಾರ, ಹತ್ಯೆ ಖಂಡಿಸಿ ಎಸ್.ಡಿ.ಪಿ.ಐ. ಪ್ರತಿಭಟನೆ

Update: 2021-09-09 17:45 GMT

ಬಂಟ್ವಾಳ, ಸೆ.9: ದೆಹಲಿಯಲ್ಲಿ ಇತ್ತೀಚೆಗೆ ನಡೆದ ಮಹಿಳಾ ಸಿವಿಲ್ ಡಿಫನ್ಸ್ ಅಧಿಕಾರಿ ಸಬಿಯಾ ಸೈಫಿ ಅತ್ಯಾಚಾರ ಮತ್ತು ಹತ್ಯೆಯನ್ನು ಖಂಡಿಸಿ ಎಸ್.ಡಿ‌‌.ಪಿ.ಐ. ಬಂಟ್ವಾಳ ವಿಧಾನ ಸಭಾ ಕ್ಷೆತ್ರ ಸಮಿತಿಯ ವತಿಯಿಂದ ಗುರುವಾರ ಬಿ.ಸಿ.ರೋಡಿನಲ್ಲಿ ಪ್ರತಿಭಟನಾ ಸಭೆ ನಡೆಯಿತು. 

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಎಸ್.ಡಿ.ಪಿ.ಐ. ರಾಜ್ಯ ಮುಖಂಡ ಫಯಾಝ್ ದೊಡ್ಡಮನೆ, ರಾಷ್ಟ್ರ ರಾಜಧಾನಿಯಲ್ಲಿ ನಿರಂತರ ಅತ್ಯಾಚಾರ ಪ್ರಕರಣಗಳು ನಡೆಯುತ್ತಿದ್ದರೂ ದೇಶವನ್ನು ಆಳುತ್ತಿರುವವರು ಮೌನವಾಗಿದ್ದಾರೆ. ಜಾಹೀರಾತುಗಳಲ್ಲಿ ಭೇಟಿ ಬಚಾವೋ ಎಂದು ಪ್ರಚಾರ ಪಡೆದ ಮಾತ್ರಕ್ಕೆ ಹೆಣ್ಣು ಮಕ್ಕಳ ರಕ್ಷಣೆ ಆಗಲ್ಲ. ರಕ್ಷಣಾ ವಿಭಾಗದಲ್ಲಿ ಇದ್ದ ಮಹಿಳಾ ಅಧಿಕಾರಿಗೆಯೇ ರಕ್ಷಣೆ ಇಲ್ಲ ಎಂದಾದರೆ ದೇಶದಲ್ಲಿ ಸಾಮಾನ್ಯ ಮಹಿಳೆಯರ ಸ್ಥಿತಿ ಗತಿ ಏನು ಎಂದು ಪ್ರಶ್ನಿಸಿದರು. 

ಎನ್.ಆರ್.ಸಿ‌., ಎನ್.ಪಿ.ಆರ್., ಸಿ.ಎ.ಎ., ರೈತರ ಹೋರಾಟ ಹಾಗೂ ಸಾಬಿಯ ಸೈಫ್ ಅತ್ಯಾಚಾರ ಹಾಗೂ ಬರ್ಬರ ಹತ್ಯೆಯ ಬಗ್ಗೆ ದೆಹಲಿ ಮುಖ್ಯಮಂತ್ರಿಯ ಮೌನ ತೀವ್ರ ಅಪಾಯಕಾರಿಯಾಗಿದೆ. ಇದರಿಂದಾಗಿ ಜಾತ್ಯತೀತ ತತ್ವದ ಮೇಲೆ ಜನರು ನಂಬಿಕೆ ಕಳಕೊಂಡಿದ್ದಾರೆ ಎಂದು ಅಭಿಪ್ರಾಯಪಟ್ಟರು.

ವಿಮೆನ್ಸ್ ಇಂಡಿಯಾ ಮೂಮೆಂಟ್ ರಾಜ್ಯಾಧ್ಯಕ್ಷೆ ಶಾಹಿದ ತಸ್ನಿಮ್ ಮಾತನಾಡಿ, ಅತ್ಯಾಚಾರಿಗಳನ್ನು ಗಲ್ಲಿಗೇರಿಸಿ ಸಂತ್ರಸ್ತೆಗೆ ನ್ಯಾಯ ಕೊಡಿಸಬೇಕು. ಮಹಿಳೆಯರು ಸ್ವಯಂ ರಕ್ಷಣೆಗೆ ಆತ್ಮರಕ್ಷಣೆಯ ಕಲೆಯನ್ನು ಕರಗತ ಮಾಡಬೇಕು ಎಂದರು.

ಪ್ರತಿಭಟನೆಯಲ್ಲಿ ಎಸ್.ಡಿ‌.ಪಿ.ಐ. ಜಿಲ್ಲಾ ಉಪಾಧ್ಯಕ್ಷ ಇಕ್ಬಾಲ್ ಐ.ಎಂ.ಆರ್., ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಾಹುಲ್ ಹಮೀದ್ ಎಸ್.ಎಚ್., ಬಂಟ್ವಾಳ ಕ್ಷೇತ್ರ ಸಮಿತಿ ಅಧ್ಯಕ್ಷ ಯೂಸುಫ್ ಆಲಡ್ಕ, ಉಪಾಧ್ಯಕ್ಷ ಉಬೈದ್ ಬಂಟ್ವಾಳ, ಕಾರ್ಯದರ್ಶಿ ಖಲಂದರ್ ಪರ್ತಿಪ್ಪಾಡಿ, ಬಂಟ್ವಾಳ ಪುರಸಭಾ ಸಮಿತಿ ಅಧ್ಯಕ್ಷ ಶರೀಫ್ ವಳವೂರು, ಪುರಸಭಾ ಸದಸ್ಯರಾದ ಮುನೀಶ್ ಅಲಿ, ಇದ್ರಿಶ್ ಪಿ.ಜೆ. ಉಪಸ್ಥಿತರಿದ್ದರು. 

ಕ್ಷೇತ್ರ ಸಮಿತಿ ಸದಸ್ಯರಾದ ಮಲಿಕ್ ಕೊಳಕೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News