ಸೆ.13ರಿಂದ ಕೈ ಉತ್ಪನ್ನಗಳ ಪ್ರದರ್ಶನ- ಕಾರ್ಯಾಗಾರ

Update: 2021-09-11 13:35 GMT

ಉಡುಪಿ, ಸೆ.11: ಶಿವಮೊಗ್ಗ ಚರಕ ಮಹಿಳಾ ವಿವಿಧೋದ್ದೇಶ ಕೈಗಾರಿಕಾ ಸಹಕಾರ ಸಂಘದ ವತಿಯಿಂದ ಪವಿತ್ರ ವಸ್ತ್ರ ಅಭಿಯಾನದ ಅಂಗವಾಗಿ ಕೈ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ, ಪಡಿಯಚ್ಚು ಮುದ್ರಣ ಹಾಗೂ ಶಿಬೋರಿ ಬಣ್ಣಗಾರಿಕೆಯ ಕಾರ್ಯಾಗಾರವನ್ನು ಸೆ.13ರಿಂದ 16ರವರೆಗೆ ಬೆಳಗ್ಗೆ 10ರಿಂದ ರಾತ್ರಿ 8ಗಂಟೆ ವರೆಗೆ ಉಡುಪಿಯ ಎಂಜಿಎಂ ಕಾಲೇಜಿನಲ್ಲಿ ಆಯೋಜಿಸಲಾಗಿದೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಭಿಯಾನದ ಮಾರುಕಟ್ಟೆ ವ್ಯವಸ್ಥಾಪಕಿ ಪದ್ಮಶ್ರೀ, ಬೆಳಗ್ಗೆ 10ಗಂಟೆಗೆ ನಡೆಯುವ ಉದ್ಘಾಟನಾ ಸಮಾರಂಭದ ಬಳಿಕ ರಂಗಕರ್ಮಿ ಪ್ರಸನ್ನ ಅವರಿಂದ ದಿ.ಮುರಾರಿ ಬಲ್ಲಾಳ್ ನೆನಪಿನ ಸ್ವರಾಜ್ಯ ಹಾಗೂ ಗ್ರಾಮೋದ್ಯೋಗ ಕುರಿತು ಉಪನ್ಯಾಸ ನಡೆಯಲಿದೆ ಎಂದು ತಿಳಿಸಿದರು.

ಈ ಪ್ರದರ್ಶದಲ್ಲಿ ನೈಸರ್ಗಿಕ ಬಣ್ಣ, ಪರಿಶುದ್ಧ ಹತ್ತಿಯ ಕೈಮಗ್ಗದ ಬಟ್ಟೆ, ಬ್ಯಾಗ್, ಬುಟ್ಟಿ, ಪರಿಸರ ಸ್ನೇಹಿ ಹಾಗೂ ಕೈ ಉತ್ಪನ್ನಗಳು ಲಭ್ಯ ಇರುತ್ತವೆ. ಕೋವಿಡ್‌ನಿಂದ ಕುಶಕರ್ಮಿಗಳು, ಕಾರ್ಮಿಕರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದು, ಮಗ್ಗಗಳು, ಸಣ್ಣ ಕಾರ್ಖಾನೆಗಳು ನಿಂತು ಹೋಗಿವೆ. ಇದರಿಂದ ಬಟ್ಟೆ, ಸೀರೆ, ಚಾಪೆ, ಮಡಕೆಗಳು ಮಾರಾಟವಾಗದೆ ಉಳಿದುಕೊಂಡಿವೆ. ಆದರೆ ಸರಕಾರಗಳು ಯಾವುದೇ ನೆರವು ನೀಡುತ್ತಿಲ್ಲ. ಆದುದರಿಂದ ಗ್ರಾಹಕರೇ ಈ ಪರಂಪರೆಯನ್ನು ಉಳಿಸಬೇಕೆಂಬ ಉದ್ದೇಶದಿಂದ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಇದೇ ಅವಧಿಯಲ್ಲಿ ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿಯೂ ಈ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಅದೇ ರೀತಿ ಸೆ.16ರಂದು ಬೆಳಗ್ಗೆ 10ರಿಂದ 6ಗಂಟೆಯವರೆಗೆ ಕಾರ್ಕಳ ಮಾಳ ತಾಲೂಕಿನ ರಾಮ ಮಂದಿರದಲ್ಲಿ ಈ ಪ್ರದರ್ಶನವನ್ನು ಆಯೋಜಿಸಲಾಗಿದೆ ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಚರಕದ ಅಧ್ಯಕ್ಷೆ ಗೌರಮ್ಮ, ಚೈತ್ರಾ, ಎಂಜಿಎಂ ಕಾಲೇಜಿನ ಉಪನ್ಯಾಸಕರಾದ ಮಂಜುನಾಥ್ ಕಾಮತ್, ಸುಚಿತ್ ಕೋಟ್ಯಾನ್ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News