ಕುಕ್ಕುಂದೂರು ನಕ್ರೆ ಬಳಿ ಮತಾಂತರ ಆರೋಪ: ಪ್ರಾರ್ಥನಾ ಕೇಂದ್ರಕ್ಕೆ ಹಿಂಜಾವೇ ಕಾರ್ಯಕರ್ತರ ದಾಳಿ

Update: 2021-09-11 14:40 GMT

ಕಾರ್ಕಳ, ಸೆ.11: ಮತಾಂತರ ಆರೋಪಿಸಿ ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತರು ಸೆ.10ರಂದು ಬೆಳಗ್ಗೆ 11ಗಂಟೆ ಸುಮಾರಿಗೆ ಕುಕ್ಕುಂದೂರು ಗ್ರಾಮದ ನಕ್ರೆ ಬಳಿಯ ಪ್ರಾರ್ಥನಾ ಸ್ಥಳಕ್ಕೆ ದಾಳಿ ನಡೆಸಿ ಪ್ರಾರ್ಥನಾನಿರತರ ಮೇಲೆ ಹಲ್ಲೆ ನಡೆಸಿರುವ ಬಗ್ಗೆ ವರದಿಯಾಗಿದೆ.

ಮಂಗಳೂರು ಕೆಎಸಿಇಎಸ್ ಎಂಬ ಸಂಸ್ಥೆ ವತಿಯಿಂದ ನಡೆಸುವ ನಕ್ರೆಯ ಪ್ರಗತಿ ಟ್ರಸ್ಟ್ ನಲ್ಲಿ ಪ್ರಾರ್ಥನೆ ನಡೆಸುತ್ತಿರುವ ಸಂದರ್ಭ ಸುಮಾರು 25 ರಿಂದ 30 ಮಂದಿ ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತರು ಪ್ರಾರ್ಥನೆ ನಡೆಸುತ್ತಿದ್ದ ಕಟ್ಟಡಕ್ಕೆ ಪ್ರವೇಶಿಸಿ ಏಕಾಏಕಿ ದಾಳಿ ನಡೆಸಿದರೆಂದು ದೂರಲಾಗಿದೆ. ಈ ವೇಳೆ ಹಿಂಜಾವೇ ಕಾರ್ಯಕರ್ತರು ಹಾಗೂ ಪ್ರಾರ್ಥನ ನಿರತ ಮಹಿಳೆಯರ ಮಧ್ಯೆ ವಾಗ್ವಾದ, ಜಟಾಪಟಿ ನಡೆಯಿತು.

ಬಳಿಕ ಕಾರ್ಯಕರ್ತರು ಪ್ರಾರ್ಥನೆ ನಡೆಸುತ್ತಿದ್ದ ಮಹಿಳೆ, ಪುರುಷರು ಮತ್ತು ಮಕ್ಕಳಿಗೆ ಅವಾಚ್ಯ ಶಬ್ದಗಳಿಂದ ಬೈಯ್ದು, ಹಲ್ಲೆ ನಡೆಸಿದಾರೆ ಮತ್ತು ಓರ್ವ ಮಹಿಳೆಯ ಕೈಯನ್ನು ಹಿಡಿದು ಎಳೆದಿದ್ದಾರೆ ಎಂದು ದೂರಲಾಗಿದೆ. ಇದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಯಿತು. ಪ್ರಾರ್ಥನೆ ನಡೆಸುತ್ತಿದ್ದ ಬೆನಡಿಕ್ಟ್ ವಾರ್ತಿಕ್ ಮತ್ತು ಇತರರಿಗೆ ಹಿಂಜಾವೇ ಕಾರ್ಯಕರ್ತರು ಜೀವ ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

ಬಳಿಕ ಸ್ಥಳಕ್ಕೆ ಆಗಮಿಸಿದ ಕಾರ್ಕಳ ನಗರ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿ, ಪ್ರಾರ್ಥನೆಯನ್ನು ಸ್ಥಗಿತಗೊಳಿಸಿದರು. ಈ ಬಗ್ಗೆ ಹಿಂಜಾವೇ ಕಾರ್ಯಕರ್ತರ ವಿರುದ್ಧ ಬೆನಡಿಕ್ಟ್ ನೀಡಿದ ದೂರಿನಂತೆ ಕಾರ್ಕಳ ನಗರ ಪೋಲಿಸ್ ಠಾಣೆಯಲ್ಲಿ ಕಲಂ: 143, 147, 323, 354, 448, 504, 506 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.

ಅದೇ ರೀತಿ ಕುಂಟಲ್ಪಾಡಿಯ ಸುನೀಲ್ ನೀಡಿದ ದೂರಿನಲ್ಲಿ ‘ಬೆನಡಿಕ್ಟ್ ಹಾಗೂ ಇತರರು ಮನೆಗೆ ಬಂದು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಗೊಂಡರೆ, ಎಲ್ಲಾ ಕಷ್ಟಗಳು ಪರಿಹಾರವಾಗುತ್ತದೆ ಎಂದು ಹೇಳಿ, ಹಿಂದೂ ಧರ್ಮ ಮತ್ತು ದೇವರು ಗಳ ಬಗ್ಗೆ ಅಪಹಾಸ್ಯ ಮತ್ತು ನಿಂದನೆ ಮಾಡಿದ್ದಾರೆ. ನಕ್ರೆಯಲ್ಲಿ ಬೆನಡಿಕ್ಟ್ 50-60 ಜನರನ್ನು ಸೇರಿಸಿ, ಹಿಂದೂ ಧರ್ಮ ಮತ್ತು ದೇವರ ಬಗ್ಗೆ ತುಚ್ಛವಾಗಿ ಮಾತನಾಡಿದ್ದಾರೆ ಎಂದು ತಿಳಿಸಲಾಗಿದೆ. ಅದರಂತೆ ಕಾರ್ಕಳ ನಗರ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ.

‘ನಂಬಿಕೆಯಿಂದ ಬರುತ್ತಿದ್ದೇನೆ’

‘ನಾನು 10 ವರ್ಷಗಳಿಂದ ಅನಾರೋಗ್ಯದಿಂದ ಮನೆಯಲ್ಲಿಯೇ ಇದ್ದೆ. ಎಲ್ಲ ದೇವಸ್ಥಾನಗಳಿಗೆ ಹೋಗಿ ಪೂಜೆ ಮಾಡಿಸಿದ್ದೆ ಮತ್ತು ಆಸ್ಪತ್ರೆಗೂ ಹೋಗಿ ಚಿಕಿತ್ಸೆ ಪಡೆದಿದ್ದೆ. ಎಲ್ಲೂ ಗುಣ ಆಗಿರಲಿಲ್ಲ. ಇಲ್ಲಿಗೆ ಬಂದು ಪ್ರಾರ್ಥನೆ ಮಾಡಿದ ಒಂದು ವಾರದಲ್ಲಿ ನಾನು ಗುಣಮುಖನಾದೆ. ಹಾಗೆ ನನ್ನ ಆ ನಂಬಿಕೆಯಿಂದ ನಾನು ಇಲ್ಲಿಗೆ ಬರುತ್ತಿದ್ದೇನೆ. ಇಲ್ಲಿ ಪ್ರಾರ್ಥನೆ ಬಿಟ್ಟು ಬೇರೆ ಏನು ಮಾಡುವುದಿಲ್ಲ’ ಎಂದು ಪ್ರಾಥನಾರ್ನಿರತ ಮಹಿಳೆ ಕವಿತಾ ತಿಳಿಸಿದ್ದಾರೆ. 

‘ಮೊದಲು ಕಾರ್ಕಳ ದೂಪದಕಟ್ಟೆಯಲ್ಲಿ ಪ್ರಾರ್ಥನೆ ಮಾಡಲಾಗುತ್ತಿತ್ತು. ಅಲ್ಲಿ ಗಲಾಟೆ ಮಾಡಿ ಗ್ರಾಪಂ, ಪೊಲೀಸರಿಗೆ ಒತ್ತಡ ಹಾಕಿ ಪ್ರಾರ್ಥನೆ ಮಾಡದಂತೆ ಮಾಡಿದರು. ಇದೀಗ ಇಲ್ಲಿ ಮಂಗಳೂರಿನ ಕ್ರೈಸ್ತ ಸಂಸ್ಥೆಯ ಕಟ್ಟಡದಲ್ಲಿ ಅವರಿಂದ ಅನುಮತಿ ಪಡೆದು ಪ್ರಾರ್ಥನೆ ಮಾಡುತ್ತಿದ್ದೇವೆ. ಇಲ್ಲಿಗೆ ಏಕಾಏಕಿ ದಾಳಿ ಮಾಡಿದ ಹಿಂಜಾವೇ ಕಾರ್ಯಕರ್ತರು ಮಹಿಳೆಯರಿಗೆ ಕೆಟ್ಟ ಕೆಟ್ಟ ಭಾಷೆಯಿಂದ ಅವಾಚ್ಯವಾಗಿ ಬೈದರು’ ಎಂದು ಬೆನಡಿಕ್ಟ್ ವಾರ್ತಿಕ್ ಆರೋಪಿಸಿದರು.

‘ಬಲವಂತದ ಮತಾಂತರ ನಡೆಯುತ್ತಿರುವ ಬಗ್ಗೆ ಸೂಕ್ತ ಮಾಹಿತಿ ಪಡೆದು ಕೊಂಡು ಹಿಂಜಾವೇ ಕಾರ್ಯಕರ್ತರು ಪೊಲೀಸ್ ಇಲಾಖೆ ಜೊತೆ ಸೇರಿ ಮತಾಂತರ ಕೇಂದ್ರಕ್ಕೆ ದಾಳಿ ಮಾಡಿದ್ದಾರೆ. ಅಲ್ಲಿ ಆಮಿಷಗಳನ್ನು ಒಡ್ಡಿ ಹಿಂದುಗಳನ್ನು ಮತಾಂತರ ಕೇಂದ್ರಕ್ಕೆ ಕರೆದುಕೊಂಡು ಬರಲಾಗಿದೆ. ಇಲ್ಲಿ ಪ್ರಾರ್ಥನೆ ಮಾಡಲು ಯಾವುದೇ ಅನುಮತಿ ಇಲ್ಲ. ಕಾರ್ಕಳದ ಅನೇಕ ಭಾಗದಲ್ಲಿ ಹಿಂದುಗಳನ್ನು ಮತಾಂತರ ಮಾಡುವ ಮತಾಂತರ ಕೇಂದ್ರಗಳಿವೆ. ಪೊಲೀಸರು ಇವುಗಳ ವಿರುದ್ಧವೂ ಕೂಡಲೇ ಕ್ರಮ ತೆಗೆದುಕೊಳ್ಳಬೇಕು’ ಎಂದು ಹಿಂಜಾವೇ ಮುಖಂಡ ಪ್ರಕಾಶ್ ಕುಕ್ಕೆಹಳ್ಳಿ ಒತ್ತಾಯಿಸಿದ್ದಾರೆ.

'ನಾವು ಇಲ್ಲಿ ಪ್ರಾರ್ಥನೆ ಮಾಡುವುದು ಬಿಟ್ಟರೆ ಬೇರೆ ಏನು ಮಾಡುವುದಿಲ್ಲ. ಅನ್ಯಧರ್ಮಿಯರು ಕೂಡ ಈಗ ಕೆಲ ಸಮಯದಿಂದ ಪ್ರಾರ್ಥನೆಗೆ ಬರುತ್ತಿದ್ದಾರೆ. ಅವರು ಪ್ರಾರ್ಥನೆ ಮಾಡಿ ಹೋಗುತ್ತಾರೆ. ನಾವು ಧರ್ಮ ಬೋಧನೆ ಮಾಡುತ್ತಿದ್ದೇವೆ ಹೊರತು ಮತಾಂತರ ಮಾಡುವ ಕೆಲಸ ಮಾಡುತ್ತಿಲ್ಲ. ಇಲ್ಲಿ ಬಲವಂತದಿಂದ ಆಮಿಷವೊಡ್ಡಿ ನಾವು ಯಾರನ್ನು ಮತಾಂತರ ಮಾಡಿಲ್ಲ’
-ಬೆನಡಿಕ್ಟ್ ವಾರ್ತಿಕ್

‘ನಮಗೆ ಯಾರು ಕೂಡ ಪ್ರಾರ್ಥನೆಗೆ ಬರುವಂತೆ ಒತ್ತಾಯ ಮಾಡಿಲ್ಲ. ನಮ್ಮ ವಸ್ತ್ರಗಳು ಬದಲಾಗಿಲ್ಲ. ಹಿಂದೂ ಪದ್ಧತಿ ಬದಲಾಗಿಲ್ಲ. ನಾವೇ ಪ್ರಾರ್ಥನೆಗೆ ಬರುತ್ತಿದ್ದೇವೆ. ಯಾರೂ ಕೂಡ ನಮಗೆ ಬಲವಂತ ಮಾಡುತ್ತಿಲ್ಲ. ನಾವು ಪ್ರಾರ್ಥನೆಗೆ ಹೋಗದಿದ್ದರೆ ಅವರಿಗೆ ಯಾವುದೇ ಲಾಭವೂ ಇಲ್ಲ, ನಷ್ಟವೂ ಇಲ್ಲ. ಅವರು ನಮಗೆ ಏನು ಕೊಡುವುದೂ ಇಲ್ಲ, ನಮ್ಮಿಂದ ಏನನ್ನು ತೆಗೆದು ಕೊಳ್ಳುತ್ತಿಲ್ಲ’
-ಕವಿತಾ, ಪ್ರಾರ್ಥನನಿರತ ಮಹಿಳೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News