ಉಡುಪಿ: ಕೋವಿಡ್‌ನಿಂದ ಸಾವನ್ನಪ್ಪಿದವರ ಬಿಪಿಎಲ್ ಕುಟುಂಬಕ್ಕೆ ಪರಿಹಾರ

Update: 2021-09-14 15:11 GMT

ಉಡುಪಿ, ಸೆ.14: ಸರಕಾರದ ಆದೇಶದಂತೆ ಕೋವಿಡ್-19 ವೈರಾಣು ಸೋಂಕಿನಿಂದಾಗಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬದ ದುಡಿಯುವ ಸದಸ್ಯ ಮೃತಪಟ್ಟ ಸಂದರ್ಭದಲ್ಲಿ ಮೃತರ ಕಾನೂನುಬದ್ದ ವಾರಸುದಾರರ/ಕುಟುಂಬದ ಓರ್ವ ಸದಸ್ಯರಿಗೆ ಒಂದು ಲಕ್ಷ ರೂ.ಗಳ ಆರ್ಥಿಕ ನೆರವನ್ನು ನೀಡಲಾಗುತ್ತಿದೆ.

ಬಡತನ ರೇಖೆಗಿಂತ ಕೆಳಗಿರುವ ಕುಟುಂಬದಲ್ಲಿ ಒಂದಕ್ಕಿಂತ ಹೆಚ್ಚು ಸದಸ್ಯರು ಕೋವಿಡ್-19 ಸಾಂಕ್ರಾಮಿಕ ಸೋಂಕಿನಿಂದ ಮರಣ ಹೊಂದಿದ್ದರೂ ಸಹ ಒಬ್ಬ ಸದಸ್ಯರಿಗೆ ಮಾತ್ರ ಒಂದು ಲಕ್ಷ ರೂ.ಗಳ ಪರಿಹಾರ ಪಾವತಿಸಲಾಗುತ್ತದೆ. ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ನಿರ್ದೇಶನಾಲಯದಿಂದ ಆರ್‌ಟಿಜಿಎಸ್/ನೆಫ್ಟ್ ಮೂಲಕ ನೇರವಾಗಿ ಕೋವಿಡ್ ಸೋಂಕಿನಿಂದ ಮೃತಪಟ್ಟ ಬಿಪಿಎಲ್ ಕುಟುಂಬದ ವ್ಯಕ್ತಿಯ ವಾರಸುದಾರರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ಕೋವಿಡ್-19 ಸೋಂಕಿನಿಂದ ಮೃತಪಟ್ಟ ಬಡತನ ರೇಖೆಗಿಂತ ಕೆಳಗಿರುವ ಕುಟುಂಬದ ವ್ಯಕ್ತಿಗಳ ವಾರಸುದಾರರಿಗೆ ಪರಿಹಾರ ಪಾವತಿಸುವಂತಹ ಎಲ್ಲಾ ಪ್ರಕ್ರಿಯೆಗಳನ್ನು ಅಂತರ್ಜಾಲದ ಮೂಲಕವೇ ನಿರ್ವಹಿಸಲಾಗುವುದು.

ಅರ್ಜಿದಾರರು ಪರಿಹಾರವನ್ನು ಪಡೆಯಲು ತಮ್ಮ ವ್ಯಾಪ್ತಿಯ ತಾಲೂಕು ಕಚೇರಿಯನ್ನು ಸಂಪರ್ಕಿಸಿ ಅರ್ಜಿ ನಮೂನೆ 1ರಲ್ಲಿ ಮಾಹಿತಿ ಹಾಗೂ ನಮೂನೆ -2ರಲ್ಲಿ ಸ್ವಯಂ ಘೋಷಣಾ ಪತ್ರವನ್ನು ಮತ್ತು ನಮೂನೆ-3ರಲ್ಲಿ ನಿರಾಪೇಕ್ಷಣಾ ಪತ್ರವನ್ನು ಭರ್ತಿ ಮಾಡಿ ಈ ಕೆಳಕಂಡ ದಾಖಲಾತಿಗಳೊಂದಿಗೆ ತಾಲೂಕು ಕಛೇರಿಗೆ ಸಲ್ಲಿಸಬೇಕು.

ಕೋವಿಡ್-19 ವೈರಾಣು ಸೋಂಕಿನಿಂದ ಮೃತಪಟ್ಟಿದ್ದಕ್ಕೆ ಸಂಬಂಧಿಸಿದಂತೆ: ಕೋವಿಡ್-19 ಪಾಸಿಟಿವ್ ರಿಪೋರ್ಟ್ (ಅಧಿಕೃತವಾಗಿ ಗುರುತಿಸಿದ ಪ್ರಯೋಗಾಲಯದಿಂದ ಪಡೆದಿರುವ), ಪಿ. ನಂಬರ್ (ಕೋವಿಡ್ ದೃಢಪಟ್ಟ ರೋಗಿ ಸಂಖ್ಯೆ)ನ ದಾಖಲೆಗಳನ್ನು ಅರ್ಹತೆ ಪಡೆದ ವೈದ್ಯರಿಂದ ಧೃಢೀಕರಿಸಿ ಸಲ್ಲಿಸಬೇಕು.
ಅಥವಾ ರೋಗ ಲಕ್ಷಣಗಳ ಆಧಾರದ ಮೇಲೆ ಚಿಕಿತ್ಸೆ ಪಡೆದವರು (ಕೋವಿಡ್-19 ನೆಗೆಟಿವ್ ಇದ್ದವರು) ಕ್ಲಿನಿಕಲ್ ರೇಡಿಯಾಲಜಿ ಮತ್ತು ಇತರೆ ಸಂಬಂಧಿಸಿದ ಪ್ರಯೋಗಾಲಯ ವರದಿ ಪಿ.ನಂಬರ್ (ರೋಗಿಯ ಸಂಖ್ಯೆ) ದಾಖಲೆಗಳನ್ನು ಅರ್ಹತೆ ಪಡೆದ ವೈದ್ಯರಿಂದ ಧೃಢೀಕರಿಸಿ ಸಲ್ಲಿಸಬೇಕು.

ಮೃತಪಟ್ಟವರ ಆಧಾರ್ ಕಾರ್ಡ್ ಪ್ರತಿ, ಮರಣ ಪ್ರಮಾಣ ಪತ್ರದ ಪ್ರತಿ, ಅರ್ಜಿದಾರರ ಪಡಿತರ ಚೀಟಿ ಪ್ರತಿ, ಅರ್ಜಿದಾರರ ಆಧಾರ್ ಕಾರ್ಡ್ ಪ್ರತಿ, ಬ್ಯಾಂಕ್ ಪಾಸ್‌ಬುಕ್ ಪ್ರತಿ, ಅರ್ಜಿದಾರರಿಂದ ಸ್ವಯಂ ಘೋಷಣಾ ಪತ್ರ (ನಮೂನೆ -2), ಕುಟುಂಬದ ಸದಸ್ಯರ ನಿರಾಪೇಕ್ಷಣಾ ಪತ್ರ (ನಮೂನೆ -3) ಗಳನ್ನು ಸಲ್ಲಿಸಬೇಕು.

ಅರ್ಜಿ ನಮೂನೆಗಳನ್ನು ವೆಬ್‌ಸೈಟ್ -www.udupi.nic.in -ಮೂಲಕ ಹಾಗೂ ಸಂಬಂಧಿಸಿದ ತಾಲೂಕು ಕಛೇರಿಯಿಂದ ಪಡೆಯಬಹುದು ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News