ಉಡುಪಿ: ದೆಹಲಿ ಮಹಿಳಾ ಪೊಲೀಸ್ ಅಧಿಕಾರಿ ಅತ್ಯಾಚಾರ-ಹತ್ಯೆ ಖಂಡಿಸಿ ಎಸ್‌ಡಿಪಿಐಯಿಂದ ಪ್ರತಿಭಟನೆ

Update: 2021-09-14 15:51 GMT

ಉಡುಪಿ, ಸೆ.14: ದೆಹಲಿಯಲ್ಲಿ ನಡೆದ ಸಿವಿಲ್ ಡಿಫೆನ್ಸ್ನ ಮಹಿಳಾ ಪೊಲೀಸ್ ಅಧಿಕಾರಿ ಮೇಲಿನ ಅತ್ಯಾಚಾರ ಮತ್ತು ಬರ್ಬರ ಹತ್ಯೆಯನ್ನು ಖಂಡಿಸಿ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಉಡುಪಿ ಜಿಲ್ಲೆಯ ವತಿಯಿಂದ ಜಾಥಾ ಹಾಗೂ ಪ್ರತಿಭಟನಾ ಸಭೆಯನ್ನು ಮಂಗಳವಾರ ಉಡುಪಿಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಉಡುಪಿ ಬೋರ್ಡ್ ಹೈಸ್ಕೂಲ್ ಮುಂಭಾಗದಿಂದ ಹೊರಟ ಪ್ರತಿಭಟನಾ ಜಾಥವು ಅಜ್ಜರಕಾಡು ಹುತಾತ್ಮ ಯೋಧರ ಸ್ಮಾರಕ ಭವನದ ಎದುರು ಸಮಾಪ್ತಿಗೊಂಡಿತು. ಜಾಥದಲ್ಲಿ ನೂರಾರು ಮಂದಿ ಭಾಗವಹಿಸಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿ ವಿಶೇಷ ತನಿಖಾ ತಂಡವನ್ನು ನೇಮಿಸಿ ಆರೋಪಿಗಳಿಗೆ ಕಠಿಣ ಶಿಕ್ಷೆಯನ್ನು ವಿಧಿಸುವಂತೆ ಒತ್ತಾಯಿಸಿದರು.

ಅಜ್ಜರಕಾಡಿನಲ್ಲಿ ನಡೆದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಎಸ್‌ಡಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ತುಂಬೆ ಮಾತನಾಡಿ, ರಾಷ್ಟ್ರೀಯ ಅಪರಾಧ ವರದಿ ಪ್ರಕಾರ ಭಾರತದಲ್ಲಿ 2019ರಲ್ಲಿ 323000 ಅತ್ಯಾಚಾರ ಪ್ರಕರಣಗಳು ನಡೆದಿವೆ. ದೇಶದಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿದ್ದರೂ ಕಿವಿ ಕೇಳದ ಹಾಗೂ ಕಣ್ಣು ಕಾಣದ ಸರಕಾರ ಮಾತ್ರ ಸಂತ್ರಸ್ತೆಯರಿಗೆ ನ್ಯಾಯ ಒದಗಿಸುವ ಕಾರ್ಯ ಮಾಡುತ್ತಿಲ್ಲ ಎಂದು ಆರೋಪಿಸಿದರು.

ಪ್ರತಿಭಟನೆಯಲ್ಲಿ ಧರ್ಮಗುರು ವಿಲಿಯಂ ಮಾರ್ಟಿಸ್, ಇಮಾಮ್ ಕೌನ್ಸಿಲ್‌ನ ರಾಜ್ಯ ಕಾರ್ಯದರ್ಶಿ ಮೋಝಂ ಮೌಲಾನ, ಎಸ್‌ಡಿಪಿಐ ಉಡುಪಿ ಜಿಲ್ಲಾಧ್ಯಕ್ಷ ಇಲ್ಯಾಸ್ ಸಾಸ್ತಾನ, ಮುಖಂಡ ಶಾಹಿದ್ ಅಲಿ, ನಮ್ಮ ನಾಡು ಒಕ್ಕೂಟದ ರಾಜ್ಯ ಕಾರ್ಯದರ್ಶಿ ಝಮೀರ್ ಅಹ್ಮದ್ ರಶದಿ, ದಸಂಸ ಮುಖಂಡ ಉಮಾನಾಥ್ ಕೋಟ್ಯಾನ್, ಎನ್‌ಡಬ್ಲುಎಫ್ ನಾಯಕಿ ನಸೀಮಾ, ಹನೀಫ್ ಮುಳೂರು ಮೊದಲಾದವರು ಉಪಸ್ಥಿರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News