ಉಡುಪಿಯಲ್ಲಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚಳ!
ಲಾಕ್ ಡೌನ್ ಅನಂ(ವಾಂ)ತರ..!
ಉಡುಪಿ: ಕೋವಿಡ್ ಒಂದನೇ ಮತ್ತು ಎರಡನೇ ಅಲೆಯ ಅವಧಿಯಲ್ಲಿ ವಿಧಿಸಿರುವ ಲಾಕ್‌ಡೌನ್‌ನಿಂದ ಎದುರಾಗಿರುವ ಆರ್ಥಿಕ ಸಂಕಷ್ಟ, ಉದ್ಯೋಗ ಕಡಿತ, ಸಾಲ, ಒಂಟಿತನವು ಬಹುತೇಕ ಮಂದಿಯ ಮಾನಸಿಕ ನೆಮ್ಮದಿಗೆ ಹೊಡೆತ ನೀಡಿದೆ. ಇದರಿಂದ ಮಾನಸಿಕ ಒತ್ತಡ, ಖಿನ್ನತೆಗೆ ಒಳಗಾಗಿ ಆತ್ಮಹತ್ಯೆಗೆ ಶರಣಾಗುತಿ್ತರುವವರ ಸಂಖ್ಯೆ ಹೆಚ್ಚಾಗುತ್ತಿದೆ.
ಉಡುಪಿ ಜಿಲ್ಲೆಯಲ್ಲೂ ಲಾಕ್‌ಡೌನ್ ಪರಿಣಾಮವಾಗಿ ಕಳೆದ ಎರಡು ಮೂರು ವರ್ಷಗಳಲ್ಲಿ ಅಧಿಕ ಮಂದಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಬಗ್ಗೆ ವರದಿ ಯಾಗುತ್ತಿದೆ. ಸುಶಿಕ್ಷಿತರ ಜಿಲ್ಲೆ ಎನಿಸಿರುವ ಉಡುಪಿಯಲ್ಲಿ ಸಣ್ಣ ಸಣ್ಣ ಕಾರಣ ಗಳನ್ನು ಎದುರಿಸಲಾಗದೆ ಮಾನಸಿಕ ಒತ್ತಡಕ್ಕೆ ಒಳಗಾಗಿ ಪ್ರಜ್ಞಾವಂತರು, ಉಪನ್ಯಾಸಕರು, ವೈದ್ಯರು, ಅಧಿಕಾರ ವರ್ಗದವರು ಕೂಡ ಆತ್ಮಹತ್ಯೆ ಮಾಡಿಕೊಳ್ಳುತ್ತಿ ರುವುದು ಆತಂಕಕಾರಿ ಬೆಳವಣಿಗೆಯಾಗಿದೆ.
9 ತಿಂಗಳಲ್ಲಿ 312 ಆತ್ಮಹತ್ಯೆ: ಈ ಹಿಂದಿನ 2 ವರ್ಷಗಳಿಗೆ ಹೋಲಿಕೆ ಮಾಡಿದರೆ 2021ರಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವವರ ಸಂಖ್ಯೆ ಹೆಚ್ಚಾಗಿರುವ ಬಗ್ಗೆ ಪೊಲೀಸ್ ಇಲಾಖೆಯ ವರದಿಯಿಂದ ತಿಳಿದುಬರುತ್ತದೆ.
2021(ಸೆ.28ರವರೆಗೆ)ರಲ್ಲಿ 312, 2020ರಲ್ಲಿ 370 ಹಾಗೂ 2019ರಲ್ಲಿ 368 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ವರ್ಷದ ಸೆಪ್ಟೆಂಬರ್ ತಿಂಗಳ ಕೇವಲ 27 ದಿನಗಳಲ್ಲಿ 28 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2019 ಮತ್ತು 2020ರಲ್ಲಿ ಸರಾಸರಿ ಪ್ರತಿದಿನ ಒಬ್ಬರು ಆತ್ಮಹತ್ಯೆ ಮಾಡಿಕೊಂಡರೆ 2021ರ ಸೆಪ್ಟಂಬರ್‌ವರೆಗೆ ಪ್ರತಿ ತಿಂಗಳು ಸರಸಾರಿ 34 ಮಂದಿ ಆತ್ಮಹತ್ಯೆ ಾಡಿಕೊಂಡಿರು ವುದು ಕಂಡುಬಂದಿದೆ.
ಆತ್ಮಹತ್ಯೆ ಹೆಚ್ಚಳಕ್ಕೆ ಕಾರಣ: ಕೊರೋನ ಲಾಕ್‌ಡೌನ್ ಬಳಿಕ ಇಷ್ಟು ಪ್ರಮಾಣದಲ್ಲಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗಲು ಕೊರೋನ ವೈರಸ್ ಭಯ, ಲಾಕ್‌ಡೌನ್‌ನ ಆರ್ಥಿಕ ಹೊಡೆತ, ಒಂಟಿತನವೇ ಕಾರಣ ಎಂಬುದು ಮಾನಸಿಕ ತಜ್ಞರ ಅಭಿಪ್ರಾಯ.
ವ್ಯಾಪಾರಸ್ಥರು, ಹೊಟೇಲ್ ಉದ್ಯಮಿಗಳು ಆರ್ಥಿಕ ಸಮಸ್ಯೆಗೆ ತುತ್ತಾದರೆ, ಇದರ ಪರಿಣಾಮ ಕೆಲಸ ಕಳೆದುಕೊಂಡವರು ಬಹಳಷ್ಟು ಮಂದಿ ಇದ್ದಾರೆ. ಹೀಗೆ ಕೆಲಸ ಕಳೆದುಕೊಂಡವರು ತಾವು ಮಾಡಿದ ಸಾಲವನ್ನು ತೀರಿಸಲಾಗದೆ ಮಾನಸಿಕ ಖಿನ್ನೆತೆ ಒಳಗಾಗು ತ್ತಿದ್ದಾರೆ. ಅಲ್ಲದೆ ಕೆಲವು ಮಂದಿ ವ್ಯವಹಾರ ನಷ್ಟದಿಂದ ತಮ್ಮ ಬದಲಾದ ಜೀವನ ಶೈಲಿಯಿಂದ ಸಮಾಜವನ್ನು ಎದುರಿಸಲಾಗದೆ ಮಾನಸಿಕವಾಗಿ ನೊಂದುಕೊಳ್ಳುತ್ತಿದ್ದಾರೆ.
ಅದೇ ರೀತಿ ಈಗಾಗಲೇ ಮನೆಯಲ್ಲಿ ಯಾರು ಇಲ್ಲದೆ ಒಂಟಿಯಾಗಿ ಬದುಕುತ್ತಿದ್ದ ಹಿರಿಯ ನಾಗರಿಕರು, ಲಾಕ್‌ಡೌನ್, ಕೊರೋನ ಭಯದಿಂದ ಹೊರಗಡೆ ಹೋಗಲಾರದೆ, ಬೇರೆ ಯವರೊಂದಿಗೆ ನೋವು ಹಂಚಿಕೊಳ್ಳಲಾರದೆ, ಜನರೊಂದಿಗೆ ಬೆರೆ ಯಲಾಗದೆ ಇನ್ನಷ್ಟು ಒಂಟಿತನಕ್ಕೆ ಒಳಗಾಗಿ ಮಾನಸಿಕ ಖಿನ್ನತೆಗೆ ತುತ್ತಾ ಗುತ್ತಿದ್ದಾರೆ. ಅದೇ ರೀತಿ ಸಾಲ ಹಾಗೂ ಉದ್ಯೋಗ ಇಲ್ಲದೆ ಕೌಟುಂಬಿಕ ಕಲಹಗಳು ಹೆಚ್ಚಾಗುತ್ತಿರುವುದು ಕಂಡುಬರುತ್ತಿದೆ. ಇದೆಲ್ಲದರ ಪರಿಣಾಮ ಅರಾಜಕತೆ ಸೃಷ್ಠಿಯಾಗಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಮಾನಸಿಕ ತಜ್ಞ ಡಾ.ಪಿ.ವಿ.ಭಂಡಾರಿ ಅಭಿಪ್ರಾಯ ಪಡುತ್ತಾರೆ.
ಆತ್ಮಹತ್ಯೆ ಪ್ರಕರಣಗಳನ್ನು ನಿಯಂತ್ರಿಸುವಲ್ಲಿ ಸರಕಾರದ ಪಾತ್ರ ಬಹಳ ಮುಖ್ಯವಾಗಿದೆ. ಈ ಬಗ್ಗೆ ರಾಷ್ಟ್ರೀಯ ಆತ್ಮಹತ್ಯೆ ತಡೆಗಟ್ಟುವ ನೀತಿಯನ್ನು ಸರಕಾರ ತರಬೇಕಾಗಿದೆ. ಅದೇರೀತಿ ನಾವು ಇನ್ನೊಬ್ಬರ ಸಮಸ್ಯೆಯನ್ನು ಕೇಳಿ ಅದಕ್ಕೆ ಪರಿಹಾರ ಕಂಡುಕೊಳ್ಳುವ ಕೆಲಸ ಮಾಡಬೇಕು. ಆತ್ಮಹತ್ಯೆ ಯತ್ನ ಮಾಡಿದವರನ್ನು ತಕ್ಷಣ ಮನೋವೈದ್ಯರ ಬಳಿ ಕರೆದುಕೊಂಡು ಹೋಗಬೇಕು. ಮಾಧ್ಯಮಗಳು ಆತ್ಮಹತ್ಯೆಗೆ ಸಂಬಂಧಿಸಿದ ವರದಿ ಮಾಡುವಾಗ ಪ್ರೆಸ್ ಕೌನ್ಸಿಲ್ ನಿಯಮ ಪಾಲಿಸಬೇಕು. ಇಲ್ಲದಿದ್ದರೆ ಕಾಪಿಕ್ಯಾಟ್ ಸುಸೈಡ್‌ಗಳ ಸಂಖ್ಯೆ ಹೆಚ್ಚಾಗುತ್ತದೆ.
ಡಾ.ಪಿ.ವಿ.ಭಂಡಾರಿ, ಮನೋವೈದ್ಯ, ಉಡುಪಿ
ಜಿಲ್ಲೆಯಲ್ಲಿ ಖಿನ್ನತೆ, ಸಾಲಬಾಧೆ, ಪ್ರೇಮ ವೈಫಲ್ಯ, ನಿರುದ್ಯೋಗ ಸಮಸ್ಯೆ ಮೊದಲಾದ ಕಾರಣಗಳಿಂದ ಆತ್ಮಹತ್ಯೆ ಪ್ರಕರಣಗಳು ನಡೆಯುತ್ತಿರುವುದು ಕಂಡುಬರುತ್ತಿದೆ. ಹದಿ ಹರೆಯದವರು, ಹಿರಿಯ ನಾಗರಿಕರು, ವಿದ್ಯಾವಂತರು, ಅಧಿಕಾರಿವರ್ಗದವರು ಕೂಡ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇದೇ ರೀತಿ ಮುಂದುವರಿದರೆ ಉಡುಪಿ ಆತ್ಮಹತ್ಯೆ ಮಾಡಿಕೊಳ್ಳುವರ ಜಿಲ್ಲೆ ಆಗುತ್ತ ದೆಯೇ ಎಂಬ ಆಂತಕ ಎದುರಾಗಿದೆ. ಈ ಬಗ್ಗೆ ಜಿಲ್ಲಾಡಳಿತ- ಪೋಲಿಸ್ ಇಲಾಖೆಯು ತಜ್ಞ ಮನೋವೈದ್ಯರ ನೆರವು ಪಡೆದು, ಆತ್ಮಹತ್ಯೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಬೇಕು.
ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು, ಸಾಮಾಜಿಕ ಕಾರ್ಯಕರ್ತರು
ಆರೋಗ್ಯ ಇಲಾಖೆಯಲ್ಲಿರುವ ಮಾನಸಿಕ ಆರೋಗ್ಯ ವಿಭಾಗವನ್ನು ಇನ್ನಷ್ಟು ಬಲಯುತವನ್ನಾಗಿ ಮಾಡಬೇಕಾಗಿದೆ. ಸಮಾಲೋಚನೆ, ಜಾಗೃತಿ ಮೂಡಿಸುವ ಕಾರ್ಯ ಹೆಚ್ಚು ಬಗ್ಗೆ ಮಾಡಬೇಕಾಗಿದೆ. ಸಮಸ್ಯೆ ಎಂಬುದು ಎಲ್ಲರಿಗೂ ಇರುತ್ತದೆ. ಅದನ್ನು ಹಂಚಿಕೊಂಡು ಒತ್ತಡ ಕಡಿಮೆ ಮಾಡಲು ಅವಕಾಶ ಮಾಡಿ ಕೊಡಬೇಕಾಗಿದೆ. ಈ ಬಗ್ಗೆ ಹೆಚ್ಚು ಪ್ರಚಾರ ಮಾಡಿ ಜನರ ಭಾಗಹಿಸುವಿಕೆ ಯನ್ನು ಹೆಚ್ಚಿಸಬೇಕಾಗಿದೆ.
ಕುರ್ಮಾರಾವ್, ಜಿಲ್ಲಾಧಿಕಾರಿ, ಉಡುಪಿ
ಮಾನಸಿಕ ರೋಗಿಗಳ ಸಂಖ್ಯೆಯಲ್ಲಿ ಏರಿಕೆ
ಲಾಕ್‌ಡೌನ್ ನಂತರ ಸಮಾಜದಲ್ಲಿ ಸೃಷ್ಠಿಯಾಗಿರುವ ಅರಾಜಕತೆಯಿಂದ ಉಡುಪಿಯಲ್ಲಿ ಒತ್ತಡ, ಖಿನ್ನತೆ ಸೇರಿದಂತೆ ವಿವಿಧ ಮಾನಸಿಕ ಕಾಯಿಲೆಗಳಿಗೆ ಒಳಗಾಗುತ್ತಿರುವರ ಸಂಖ್ಯೆಯಲ್ಲಿ ಶೇ.20ರಷ್ಟು ಏರಿಕೆ ಕಂಡುಬಂದಿದೆ ಎನ್ನುತ್ತಾರೆ ಜಿಲ್ಲೆಯ ಮನೋ ವೈದ್ಯರು.
ಈ ತಿಂಗಳು ಕೇವಲ 15 ದಿನಗಳಲ್ಲಿ ಕಾರ್ಕಳದ ಮೂವರು ಉಪನ್ಯಾಸಕರು ಆತ್ಮಹತ್ಯೆಗೆ ಶರಣಾಗಿದ್ದರು. ಅದೇ ರೀತಿ ಬ್ರಹ್ಮಾವರದಲ್ಲಿ ನಿವೃತ್ತ ಆರೋಗ್ಯಾಧಿಕಾರಿಯೊಬ್ಬರು ಕೂಡ ಎರಡು ದಿನಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಇವರೆಲ್ಲ ಮಾನಸಿಕ ಖಿನ್ನೆತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡವರು. ಜಿಲ್ಲೆಯಲ್ಲಿ ಸಾಲಬಾಧೆ ಹಾಗೂ ವ್ಯವಹಾರ ನಷ್ಟದಲ್ಲಿ ಮನನೊಂದು ಆತ್ಮಹತ್ಯೆ ಮಾಡಿಕೊಂಡವರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ.