ಮುನಿಯಾಲು: ಗೋಧಾಮದಲ್ಲಿ ದೀಪಾವಳಿ ಗೋಪೂಜೆ ಸಂಭ್ರಮ

Update: 2021-11-06 14:41 GMT

ಹೆಬ್ರಿ, ನ.6: ಇಲ್ಲಿಗೆ ಸಮೀಪದ ಮುನಿಯಾಲು ಸಂಜೀವಿನಿ ಫಾರ್ಮ್ ಮತ್ತು ಡೇರಿ ಗೋಧಾಮದಲ್ಲಿ ದೇಶಿಯ ತಳಿ ಹಸುಗಳಿಗೆ ಸಾಮೂಹಿಕ ಗೋ ಪೂಜೆ ಕಾರ್ಯಕ್ರಮ ಶುಕ್ರವಾರ ನಡೆಯಿತು.

ಸಾಂಕೇತಿಕವಾಗಿ ಗೋವುಗಳಿಗೆ ಆರತಿ ಬೆಳಗಿಸಿ ಪ್ರಸಾದ ತಿನ್ನಿಸುವ ಮೂಲಕ, ಮೂಡಬಿದಿರೆ ಜೈನ ಮಠದ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯ ಸ್ವಾಮೀಜಿ ಕಾರ್ಯಕ್ರಮದ ಸಮಾರಂಭವನ್ನು ಉದ್ಘಾಟಿಸಿ ಬಳಿಕ ಆಶೀರ್ವಚನ ನೀಡಿದರು.

ಸರಕಾರ ಗೋವುಗಳನ್ನು ಸಾಕುವ ವ್ಯಕ್ತಿಗಳನ್ನು ಗುರುತಿಸಿ, ಗೋವುಗಳನ್ನು ತರುವ ಸಂದರ್ಭ ಕೆಲವು ಸಂಘಟನೆ ಮತ್ತು ಆರಕ್ಷಕ ಇಲಾಖೆಯಿಂದ ಉಂಟಾಗುವ ಸಮಸ್ಯೆಗಳಿಂದ ಪಾರಾಗಲು ನಿಜವಾದ ಗೋವುಗಳನ್ನು ಸಾಕುವ ವ್ಯಕ್ತಿಗಳಿಗೆ ವಿಶೇಷವಾದ ಗುರುತು ಪತ್ರಗಳನ್ನು ನೀಡಬೇಕೆಂದು ಈ ಸಂದರ್ಭ ಮುಖ್ಯಮಂತ್ರಿ ಹಾಗೂ ಸಚಿವ ಸುನೀಲ್ ಕುಮಾರ್‌ಗೆ ಮನವಿ ಮಾಡಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಉಡುಪಿ ಜಿಲ್ಲಾ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಮಾತನಾಡಿ ಮುನಿಯಾಲನಂತಹ ಪ್ರದೇಶವನ್ನು ನಂದನವನ ದಂತೆ ಪರಿವರ್ತಿಸಿದ ರಾಮಕೃಷ್ಣ ಆಚಾರ್ ದಂಪತಿಯನ್ನು ಅಭಿನಂದಿಸಿದರು. ಪಾಂಡೇಶ್ವರ ಯೋಗ ಗುರುಕುಲದ ಡಾ.ವಿಜಯ ಮಂಜರ ಅಧ್ಯಕ್ಷತೆ ವಹಿಸಿದ್ದರು.

ಗೋಧಾಮ ಟ್ರಸ್ಟ್ನ ಆಡಳಿತ ನಿರ್ದೇಶಕ ಜಿ.ರಾಮಕೃಷ್ಣ ಆಚಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಭಾರತದ ಗೋವಿನ ವಿವಿಧ ತಳಿಗಳನ್ನು ಅಭಿವೃದ್ಧಿ ಮಾಡುವುದರೊಂದಿಗೆ, ಸ್ವದೇಶಿ ತಳಿಗಳನ್ನು ಸಂರಕ್ಷಿಸಿ ಅವುಗಳನ್ನು ಅಭಿವೃದ್ಧಿ ಪಡಿಸುವುದು ನಮ್ಮ ಮೂಲ ಉದ್ದೇಶವಾಗಿದೆ. ಜೊತೆಗೆ ನೆಲ ಜಲವನ್ನು ಸಂರಕ್ಷಿಸುವುದು. ಮುಂದಿನ ಪೀಳಿಗೆಗೆ ಗ್ರಾಮೀಣ ಬದುಕನ್ನು ಪರಿಚಯಿ ಸುವುದು, ಯುವ ಜನತೆಯನ್ನು ಹೈನುಗಾರಿಕೆಗೆ ಪ್ರೇರೇಪಿಸುವುದು ನಮ್ಮ ಕನಸಾಗಿದೆ ಎಂದರು.

ಇಲ್ಲಿ ಗಿರ್, ಕಾಂಕ್ರಿಜ್, ಸಾಯಿವಾಲದಂತಹ ಹಲವು ಜಾತಿಯ ದೇಶಿಯ ತಳಿಗಳನ್ನು ಸಾಕುತ್ತಿದ್ದೇವೆ. ಇಂದಿನ ಹಲವು ರೋಗಗಳಿಗೆ ರಾಸಾಯನಿಕ ಮಿಶ್ರಿತ ಹಾಲುಗಳೇ ಕಾರಣವಾಗಿರುವುದರಿಂದ ರೋಗ ಮುಕ್ತ ಸಮಾಜಕ್ಕೆ ಪ್ರಯತ್ನಿಸುವುದು ಕೂಡ ನಮ್ಮ ಕರ್ತವ್ಯವಾಗಿದೆ. ಇಲ್ಲಿ ಆಸಕ್ತರಿಗೆ ತಿಂಗಳ ಪ್ರತಿ ಆದಿತ್ಯವಾರ ದಂದು ಗೋಪೂಜೆ, ಗೋಗ್ರಾಸ ಸೇವೆ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದರು.

ಕಾರ್ಕಳದ ಉಪನ್ಯಾಸಕ ಅಕ್ಷಯ ಗೋಖಲೆ ಗೋಸ್ಮರಣೆ ಮಾಡಿದರು. ಟ್ರಸ್ಟಿ ಸವಿತಾ ರಾಮಕೃಷ್ಣ ಆಚಾರ್ ಸ್ವಾಗತಿಸಿ ಅತಿಥಿಗಳ ಪರಿಚಯಿಸಿದರೆ ಡಾ.ಜಯಪ್ರಕಾಶ ಮಾವಿನಕುಳಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News