ಕಳತ್ತೂರಿನ ಯೋಧ ಜಾರ್ಖಂಡ್‌ನಲ್ಲಿ ಹೃದಯಾಘಾತದಿಂದ ಮೃತ್ಯು

Update: 2021-11-07 14:14 GMT

ಕಾಪು, ನ.7: ಜಾರ್ಖಂಡ್ ರಾಜ್ಯದ ಸಿಐಎಸ್‌ಎಫ್‌ನಲ್ಲಿ ಕರ್ತವ್ಯ ನಿರ್ವ ಹಿಸುತ್ತಿದ್ದ ಯೋಧ, ಕಳತ್ತೂರು ಗ್ರಾಮದ ಕನ್ನಡರಬೆಟ್ಟು ನಿವಾಸಿ ವಿಲ್ಸನ್ ನವೀನ್ ಕುಮಾರ ಕರ್ಕಡ(50) ಎಂಬವರು ನ.6ರಂದು ಕರ್ತವ್ಯದಲ್ಲಿರುವಾಗಲೇ ಹೃದಯಾಘಾತದಿಂದ ಮೃತಪಟ್ಟ ಬಗ್ಗೆ ವರದಿಯಾಗಿದೆ.

ಕಳೆದ 29 ವರ್ಷಗಳಿಂದ ಸೇನಾ ಕರ್ತವ್ಯ ನಿರತರಾಗಿದ್ದ ಇವರು ಮುಂದಿನ ವರ್ಷ ಕರ್ತವ್ಯದಿಂದ ನಿವೃತ್ತಿ ಹೊಂದುವವರಿದ್ದರು. ಬಿಹಾರ, ರಾಂಚಿ, ದೆಹಲಿ, ಮೈಸೂರು, ನಾಗ್ಪುರ ಸಹಿತ ದೇಶದ ವಿವಿಧೆಡೆಗಳ ಸೇನಾ ನೆಲೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದರು.

ಇವರ ಪಾರ್ಥಿವ ಶರೀರವನ್ನು ಜಾರ್ಖಂಡ್ ಸೇನಾ ನೆಲೆಯಿಂದ, ಕೊಲ್ಕತ್ತಾ, ಮುಂಬೈ ಮಾರ್ಗದ ಮೂಲಕವಾಗಿ ಮಂಗಳೂರು ವಿಮಾನ ನಿಲ್ದಾಣಕ್ಕೆ ತರಲಾಯಿತು. ಅಲ್ಲಿಂದ ಮನೆಗೆ ತಂದು ಕುಟುಂಬದವರಿಗೆ ಹಾಗೂ ಸಾರ್ವ ಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು.

ಸಂಜೆ ಪಾದೂರು ಇಮಾನ್ಯೂಲ್ ಸಿಎಸ್‌ಐ ಚರ್ಚನಲ್ಲಿ ಅಂತ್ಯಕ್ರಿಯೆಯನ್ನು ನೆರವೇರಿಸಲಾಯಿತು. ಮೃತರು ಪತ್ನಿ, ಇಬ್ಬರು ಪುತ್ರರು, ಇಬ್ಬರು ಸಹೋದರರು ಮತ್ತು ಸಹೋದರಿಯರನ್ನು ಅಗಲಿದ್ದಾರೆ.

ಇವರ ನಿಧನಕ್ಕೆ ಕಾಪು ಶಾಸಕ ಲಾಲಾಜಿ ಆರ್. ಮೆಂಡನ್, ಮಾಜಿ ಸಚಿವ ವಿನಯಕುಮಾರ್ ಸೊರಕೆ, ಸಮಾಜ ಸೇವಕ ಸುರೇಶ್ ಪಿ.ಶೆಟ್ಟಿ ಗುರ್ಮೆ ಸಹಿತ ಹಲವು ಗಣ್ಯರು, ಜನಪ್ರತಿನಿಧಿಗಳು, ಅಧಿಕಾರಿಗಳು, ಸ್ಥಳೀಯಾಡಳಿತ ಸಂಸ್ಥೆಯ ಪ್ರತಿನಿಧಿಗಳು ಸಂತಾಪ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News