ಪಡುಬಿದ್ರಿಯ ಹೆದ್ದಾರಿಯ 40 ಮೀ. ಒಳಗಿರುವ ಕಟ್ಟಡಗಳ ನೆಲಸಮ ಆದೇಶ; ಹೋರಾಟಕ್ಕೆ ಸಿದ್ಧತೆ

Update: 2021-11-08 15:50 GMT

ಪಡುಬಿದ್ರಿ: ಪಡುಬಿದ್ರಿಯ ರಾಷ್ಟ್ರೀಯ ಹೆದ್ದಾರಿ 66ರ ಮಧ್ಯಭಾಗದಿಂದ ಎರಡೂ ಬದಿಯಲ್ಲಿ ತಲಾ 40 ಮೀ.ಒಳಗಿರುವ ಕಟ್ಟಡಗಳನ್ನು ತಕ್ಷಣ ತೆರವುಗೊಳಿಸಬೇಕೆಂಬ ರಾಜ್ಯ ಉಚ್ಛ ನ್ಯಾಯಾಲಯದ ನಿರ್ದೇಶನದಿಂದ ಕಂಗಾಲಾಗಿರುವ ಕಟ್ಟಡ ಮಾಲೀಕರು ಮತ್ತು  ವರ್ತಕರು ನಿರ್ಣಾಯಕ ಹೋರಾಟಕ್ಕೆ ಸಿದ್ಧತೆ ನಡೆಸಿದ್ದಾರೆ.

ಸೋಮವಾರ ಪಡುಬಿದ್ರಿ ವರ್ತಕರ ಸಂಘದ ನೇತೃತ್ವದಲ್ಲಿ ಸೋಮವಾರ ಪಡುಬಿದ್ರಿಯ ಬಿಲ್ಲವ ಸಮಾಜ ಸಂಘದ ಸಭಾಂಗಣದಲ್ಲಿ ತುರ್ತು ಸಭೆ ನಡೆಸಿ ಈ ಬಗ್ಗೆ ತೀರ್ಮಾಣ ಕೈಗೊಂಡರು.

ಕಟ್ಟಡವೊಂದರ ತೆರವಿಗಾಗಿ ಹೈಕೋರ್ಟಿಗೆ ವ್ಯಕ್ತಿಯೊಬ್ಬರು ದಾವೆ ಹೂಡಿದ್ದರು. ಆದರೆ ಸೂಕ್ತ ಸಾಕ್ಷ್ಯವಿಲ್ಲದೆ ಅದು ಬಿದ್ದು ಹೋಗಿತ್ತು. ಈ ಬಗ್ಗೆ ಹೈಕೋರ್ಟ್ ಸುಮೊಟೋ ಮೂಲಕ ಸ್ವಯಂಪ್ರೇರಣೆಯಿಂದ ಪ್ರಕರಣವನ್ನು ಕೈಗೆತ್ತಿಕೊಂಡು ರಾಜ್ಯ ಸರಕಾರ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಗಳ ವಿಚಾರಣೆ ನಡೆಸಿ 5 ರಾಜ್ಯಗಳಲ್ಲಿ ಹಾದುಹೋಗುವ ಪನ್ವೇಲ್-ಕನ್ಯಾಕುಮಾರಿ ಹೆದ್ದಾರಿ 66ರ ಎರಡೂ ಬದಿಯ ತಲಾ 40 ಮೀಟರ್ ಒಳಭಾಗದ ಕಟ್ಟಡಗಳ ತೆರವಿಗೆ ಆದೇಶ ನೀಡಿ ಗಡುವು ನೀಡಿತ್ತು.

ಈ ಹಿನ್ನೆಲೆಯಲ್ಲಿ ಪಡುಬಿದ್ರಿಯಲ್ಲಿ ಪಕ್ಷಾತೀತ ನೆಲೆಯಲ್ಲಿ ಸಮಾಲೋಚನೆ ನಡೆಸಲಾಗಿದ್ದು, ತಕ್ಷಣದಿಂದ ಹೆದ್ದಾರಿ ಹಾದುಹೋಗುವ ಗ್ರಾಮಗಳಲ್ಲಿ ಸಮಾಲೋಚನಾ ಸಭೆ ನಡೆಸಿ ಸಮಿತಿ ರಚನೆಯ ಬಳಿಕ ಮುಂದುವರಿಯಲು ನಿರ್ಧರಿಸಲಾಗಿದ್ದು, ಅದಕ್ಕೆ ಮುನ್ನ ಪರಿಣಾಮಕಾರಿ ಹೋರಾಟಕ್ಕೆ ಬೆಂಬಲವಾಗಿ ಸ್ಥಳೀಯ ಸಂಸದರು, ಶಾಸಕರನ್ನು ಭೇಟಿಯಾಗಿ ಅವರ ಬೆಂಬಲ ಪಡೆಯಲೂ ನಿರ್ಧರಿಸಲಾಯಿತು. ಮುಖ್ಯವಾಗಿ ಸಂಸದರು ಮಧ್ಯ ಪ್ರವೇಶಿಸಿ ಸಮಸ್ಯೆಯ ಬಗ್ಗೆ ಸಮಗ್ರ ಅರಿತು ಸಂಸತ್ತಿನಲ್ಲಿ ಮನನ ಮಾಡಿದಲ್ಲಿ ಸಮಸ್ಯೆ ಬಗೆಹರಿಯಬಹುದೆಂದು ಸಭೆಯಲ್ಲಿ ತಿಳಿಸಲಾಯಿತು.

ಮಾಜಿ ಸಚಿವ ವಿನಯಕುಮಾರ್ ಸೊರಕೆ ಮಾತನಾಡಿ, ಸಮಸ್ಯೆ ಗಂಭೀರವಾಗಿದ್ದು, ಕೇವಲ ರಾಹೆ 66ಕ್ಕೆ ಮಾತ್ರ ಅದೇಶ ಸೀಮಿತವಾಗಿಲ್ಲ. ಮುಂದೆ ದೇಶದ ಎಲ್ಲಾ ರಸ್ತೆಗಳಿಗೂ ಅದೇಶ ಅನ್ವಯವಾಗಲಿದೆ. ಈಗಾಗಲೇ ಮೂಲ್ಕಿ-ಹಳೆಯಂಗಡಿ ಭಾಗದ ಕಟ್ಟಡ ತೆರವಿಗೆ ಮಾರ್ಕಿಂಗ್ ಪ್ರಾರಂಭಿಸಿದ್ದಾರೆ. ಹಾಗಾಗಿ ತಕ್ಷಣದ ಪರಿಣಾಮಕಾರಿ ಹೋರಾಟಕ್ಕೆ ಎಲ್ಲರೂ ಸಜ್ಜಾಗಬೇಕು. ಪರಿಹಾರ ತನಕ ನಮ್ಮ ಹೋರಾಟ ಮುಂದುವರಿಯಬೇಕು. ಅಧಿಕಾರಿಗಳ ತಪ್ಪಿನಿಂದಲೇ ಇಂತಹ ಆದೇಶ ಜಾರಿಯಾಗಿದೆ. ಹೋರಾಟಕ್ಕೆ ತಾನು ಸಂಪೂರ್ಣ ತೊಡಗಿಸಿಕೋಳ್ಳುತ್ತೇನೆ ಎಂದರು.

ಮಂಗಳೂರಿನ ಖ್ಯಾತ ನ್ಯಾಯವಾದಿ ಮರಿಯಮ್ಮ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ 66ರ ಎರಡೂ ಬದಿಗಳಲ್ಲಿ ತಲಾ 22.5 ಮೀ.ಜಾಗವನ್ನಷ್ಟೇ ಭೂಸ್ವಾಧೀನಗೊಳಿಸಿ ಭೂಪರಿಹಾರ ನೀಡಿದ್ದಾರೆ. ಆದರೆ ಇದೀಗ ಭೂಸ್ವಾಧೀನ ಪಡಿಸದೆ, ಯಾವುದೇ ಪರಿಹಾರ ನೀಡದೆ ಇದೀಗ ತೆರವಿನ ಆದೇಶ ಸರಿಯಲ್ಲ. ಈ ಬಗ್ಗೆ ಸ್ಥಳೀಯಾಡಳಿತ ನಿರ್ಣಯ ಕೈಗೊಂಡು ಸರಕಾರಕ್ಕೆ ಸಲ್ಲಿಸಬೇಕು. ಒಗ್ಗಟ್ಟಾಗಿ ಹೋರಾಟ ನಡೆಸೋಣ. ಖಂಡಿತ ಸಮಸ್ಯೆ ಬಗೆಹರಿಯಲಿದೆ ಎಂದರು.

ಅಖಿಲ ಭಾರತ ಮಹಿಳಾ ಸಂಘದ ಅಧ್ಯಕ್ಷೆ ಸುಮಲತಾ ಸುವರ್ಣ ಮಾತನಾಡಿ, ಇದು ಒಬ್ಬಿಬ್ಬರ ಸಮಸ್ಯೆಯಲ್ಲ. 5 ರಾಜ್ಯಗಳಲ್ಲಿ ಹಾದುಹೋಗುವ ಹೆದ್ದಾರಿ ಪಕ್ಕದ ಕೋಟ್ಯಂತರ ಮಂದಿಯ ಸಮಸ್ಯೆಯಾಗಿದೆ. ನ್ಯಾಯಾಲಯದ ಆದೇಶದಂತೆ ನಮಗೆ ಹೆಚ್ಚು ಸಮಯಾವಕಾಶವಿಲ್ಲ. ತಕ್ಷಣದ ಪ್ರತಿಕ್ರಿಯೆಯ ತುರ್ತು ಅಗತ್ಯವಿದೆ. ಕೋಟ್ಯಂತರ ಮಂದಿ ಬೀದಿಗೆ ಬೀಳುತ್ತಾರೆ ಎಂಬುದನ್ನು ತಕ್ಷಣ ಸರಕಾರಕ್ಕೆ ಮನದಟ್ಟು ಮಾಡಬೇಕಿದೆ ಎಂದರು.

ಪಡುಬಿದ್ರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರವಿ ಶೆಟ್ಟಿ, ಹೆದ್ದಾರಿ ಹೋರಾಟ ಸಮಿತಿಯ ಅಧ್ಯಕ್ಷ ಶೇಖರ್ ಹೆಜ್ಮಾಡಿ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ನವೀನ್‍ಚಂದ್ರ ಜೆ.ಶೆಟ್ಟಿ, ಬಿಜೆಪಿ ಮಾಜಿ ಕ್ಷೇತ್ರಾಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಉದ್ಯಮಿ ಮಿಥುನ್ ಆರ್.ಹೆಗ್ಡೆ, ಪಲಿಮಾರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಜಿತೇಂದ್ರ ಫುರ್ಟಾಡೋ, ಮಂಗಳೂರು ಹೆದ್ದಾರಿ ಹೋರಾಟ ಸಮಿತಿಯ ಅಧ್ಯಕ್ಷ ಪ್ರಕಾಶ್‍ಚಂದ್ರ ಉಪಸ್ಥಿತರಿದ್ದು ಬೆಂಬಲವಾಗಿ ಮಾತನಾಡಿದರು.

ಪಡುಬಿದ್ರಿ ವರ್ತಕರ ಸಂಘದ ಅಧ್ಯಕ್ಷ ಡಾ.ಎನ್.ಟಿ.ಅಂಚನ್ ಅಧ್ಯಕ್ಷತೆ ವಹಿಸಿದ್ದರು. ವೈ.ಸುಕುಮಾರ್ ಸ್ವಾಗತಿಸಿ ಪ್ರಸ್ತಾವಿಕ ಮಾತನಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News