ಲಸಿಕೆಯ ಎರಡನೇ ಡೋಸ್ ನೀಡಲು ಆದ್ಯತೆ: ಉಡುಪಿ ಜಿಲ್ಲಾಧಿಕಾರಿ

Update: 2021-11-09 15:36 GMT

ಉಡುಪಿ : ಜಿಲ್ಲೆಯಲ್ಲಿ ಕೋವಿಡ್-19 ಲಸಿಕೆಯ ಎರಡನೇ ಡೋಸ್ ನೀಡುವುದಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಶೀಘ್ರವೇ ಮನೆ ಮನೆಗೆ ತೆರಳಿ ಲಸಿಕೆ ನೀಡುವ ಅಭಿಯಾನಕ್ಕೆ ಅಧಿಕೃತ ಚಾಲನೆ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ.ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಈಗಾಗಲೇ 9.20ಲಕ್ಷ ಮಂದಿಗೆ ಮೊದಲ ಡೋಸ್‌ನ್ನು ನೀಡಲಾಗಿದ್ದು, ಇವರಲ್ಲಿ 5.46 ಲಕ್ಷ ಮಂದಿ ಎರಡನೇ ಡೋಸ್‌ನ್ನು ಪಡೆದುಕೊಂಡಿದ್ದಾರೆ. ವಿವಿಧ ಕಾರಣಗಳಿಂದ ಎರಡನೇ ಡೋಸ್ ಲಸಿಕೆ ಪಡೆಯಲು ಮುಂದೆ ಬಾರದವರಿದ್ದರೆ ಅವರನ್ನು ಹುಡುಕಿ ಲಸಿಕೆಯನ್ನು ನೀಡ ಲಾಗುವುದು ಎಂದರು.

ನಮ್ಮ ಈಗಿನ ಅಂದಾಜಿನಂತೆ ಜಿಲ್ಲೆಯಲ್ಲಿ 5ರಿಂದ 6ಸಾವಿರ ಮಂದಿ ಮಾತ್ರ ಈವರೆಗೆ ಲಸಿಕೆಯನ್ನು ಪಡೆಯಲು ಮುಂದೆ ಬಂದಿಲ್ಲ. ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ಆಶಾ ಕಾರ್ಯಕರ್ತೆಯರ ಮೂಲಕ ಇಂಥವರನ್ನು ಗುರುತಿಸಿ ಲಸಿಕೆ ನೀಡಲಾಗುತ್ತದೆ. ಇವರಲ್ಲಿ ವಯಸ್ಸಾದ ಹಿರಿಯ ನಾಗರಿಕರು, ಅನಾರೋಗ್ಯಕ್ಕೆ ತುತ್ತಾದವರು ಅಧಿಕವಿದ್ದು, ಇವರನ್ನು ಗುರುತಿಸಿ ಮನೆಗೆ ತೆರಳಿ ಲಸಿಕೆ ನೀಡಲಾಗುವುದು ಎಂದರು.

ಜಿಲ್ಲೆಯಲ್ಲಿ ಈಗಾಗಲೇ ಮನೆಮನೆಗೆ ತೆರಳಿ ಲಸಿಕೆ ನೀಡುವ ಪ್ರಕ್ರಿಯೆ ಚಾಲನೆ ಯಲ್ಲಿದೆ. ಆದರೆ ‘ಹರ್ ಘರ್ ದಸ್ತಕ್’ ಅಭಿಯಾನ ನಡೆಸಲು ಸರಕಾರ ಸೂಚನೆ ನೀಡಿದ್ದು, ಅದರಂತೆ ಈ ಕಾರ್ಯಕ್ರಮವನ್ನು ಅಧಿಕೃತವಾಗಿ ಪ್ರಾರಂಭಿಸಲಾಗುವುದು ಎಂದು ಜಿಲ್ಲಾಧಿಕಾರಿ ಇಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಬೈಂದೂರು ಮತ್ತು ಕುಂದಾಪುರ ತಾಲೂಕುಗಳಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿರುವ ಬಗ್ಗೆ ಪ್ರಶ್ನಿಸಿದಾಗ, ಅಕ್ರಮ ಮರಳುಗಾರಿಕೆ ಬಗ್ಗೆ ಪರಿಶೀಲಿಸಲು ಜಿಲ್ಲೆಯ ಏಳು ಮಂದಿಯ ಮರಳು ಸಮಿತಿ ಉಪಸಮಿತಿಯನ್ನು ರಚಿಸಿದೆ. ಜಿಲ್ಲೆಯಲ್ಲಿ ಅಕ್ರಮಗಳು ಕಂಡುಂದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

ಜಿಲ್ಲೆಯಲ್ಲಿ ಭತ್ತ ಬೆಳೆದ ರೈತರು ಬೆಂಬಲ ಬೆಲೆಯಲ್ಲಿ ಭತ್ತದ ಖರೀದಿಗೆ ಒತ್ತಾಯಿಸುತ್ತಿರುವ ಬಗ್ಗೆ ಕೇಳಿದಾಗ, ಈಗಾಗಲೇ ಸರಕಾರಕ್ಕೆ ಈ ಬಗ್ಗೆ ವರದಿ ಕಳುಹಿಸಿದ್ದೇವೆ. ಅವರು ಇದನ್ನು ಪರಿಶೀಲಿಸುತಿದ್ದಾರೆ. ಅವರಿಂದ ಸೂಚನೆಗಳನ್ನು ನಿರೀಕ್ಷಿಸಿದ್ದೇವೆ. ಕೆಂಪು ಕುಚ್ಚಲು ಅಕ್ಕಿಗೆ ಬೆಂಬಲ ಬೆಲೆ ವ್ಯಾಪ್ತಿಗೆ ತರುವುದು ಸರಕಾರದ ತಾಂತ್ರಿಕ ಸಮಿತಿಯ ಪರಿಶೀಲನೆಯಲ್ಲಿದೆ ಎಂದರು.

ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News