ಲೋಕಾಯುಕ್ತಕ್ಕೆ ಸಂಬಂಧಿಸಿದ ಬಾಕಿ ಪ್ರಕರಣಗಳನ್ನು ಪರಿಶೀಲಿಸಿ ವರದಿ ಸಲ್ಲಿಸಲು ದ.ಕ.ಜಿಲ್ಲಾಧಿಕಾರಿ ಸೂಚನೆ

Update: 2021-11-10 13:52 GMT

ಮಂಗಳೂರು, ನ.10: ಲೋಕಾಯುಕ್ತಕ್ಕೆ ಸಂಬಂಧಿಸಿದಂತೆ ವಿವಿಧ ಇಲಾಖೆಗಳಲ್ಲಿ ಬಾಕಿ ಉಳಿದ ಪ್ರಕರಣಗಳನ್ನು ಕೂಡಲೇ ಪರಿಶೀಲಿಸಿ ತನಿಖಾ ವರದಿಯನ್ನು ಸಲ್ಲಿಸುವಂತೆ ದ.ಕ. ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಲೋಕಾಯುಕ್ತಕ್ಕೆ ಸಂಬಂಧಿಸಿದಂತೆ ವಿವಿಧ ಇಲಾಖೆಗಳಲ್ಲಿ ಬಾಕಿ ಉಳಿದಿರುವ ಪ್ರಕರಣಗಳ ಪ್ರಸಕ್ತ ಹಂತದ ವಿವರಗಳ ಬಗ್ಗೆ ಬುಧವಾರ ಗೂಗಲ್ ಮೀಟ್ ಮೂಲಕ ಹಮ್ಮಿಕೊಳ್ಳಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.

ಕರ್ನಾಟಕ ಲೋಕಾಯುಕ್ತ ಪಿ.ವಿಶ್ವನಾಥ ಶೆಟ್ಟಿ ನ.15ರಂದು ಜಿಲ್ಲೆಗೆ ಭೇಟಿ ನೀಡುತ್ತಿದ್ದು, ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ. ಸಭೆಗೆ ಸಂಬಂಧಿಸಿದ ಅಧಿಕಾರಿಗಳು ಸಂಪೂರ್ಣ ಮಾಹಿತಿಯೊಂದಿಗೆ ಕಡ್ಡಾಯವಾಗಿ ಹಾಜರಾಗಬೇಕು ಎಂದು ಅವರು ಸೂಚಿಸಿದರು.

ಲೋಕಾಯುಕ್ತರು ಅಂಗನವಾಡಿ ಕೇಂದ್ರಗಳು, ಶಾಲೆಗಳು ಹಾಗೂ ಕೋವಿಡ್ ಲಸಿಕಾ ಕೇಂದ್ರಗಳಿಗೆ ಭೇಟಿ ನೀಡಿ, ಅಲ್ಲಿನ ಸ್ಥಿತಿಗತಿಗಳನ್ನು ಪರಿಶೀಲಿಸಲಿದ್ದಾರೆ. ಸ್ಥಳದಲ್ಲಿ ಅಧಿಕಾರಿಗಳು ಸೂಕ್ತ ವ್ಯವಸ್ಥೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ತಿಳಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಮಾಣಿಕ್ಯ, ಉಪವಿಭಾಗಾಧಿಕಾರಿ ಮದನ್ ಮೋಹನ್, ತಹಶೀಲ್ದಾರರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News