ಹವಾಮಾನ ಬದಲಾವಣೆ ವಿಷಯದಲ್ಲಿ ಯುವಕರು ಮುಂದಾಳತ್ವ ವಹಿಸಿ: ಡಾ. ರಘು ಮುರ್ತುಗುಡ್ಡೆ

Update: 2021-11-10 15:59 GMT

ಮಣಿಪಾಲ, ನ.10: ಜಗತ್ತಿನ ಹವಾಮಾನ ಬದಲಾವಣೆಗೆ ಸಂಬಂಧಿಸಿದ ವಿಷಯಗಳಲ್ಲಿ ಯುವಜನತೆ ಮುಂದಾಳತ್ವ ವಹಿಸಬೇಕಾಗಿದೆ. ಈ ಸಂಬಂಧ ಇತ್ತೀಚೆಗೆ ಗ್ಲಾಸ್ಗೋದಲ್ಲಿ ನಡೆದ ಶೃಂಗಸಭೆಯ ಬೆಳವಣಿಗೆಗಳು ಮತ್ತು ಅದರ ನಿರ್ಣಯಗಳ ಅನುಷ್ಠಾನದ ಬಗ್ಗೆ ವಿದ್ಯಾರ್ಥಿಗಳು ಮತ್ತು ಯುವಜನರು ಗಮನ ಹರಿಸಬೇಕು ಎಂದು ಅಮೆರಿಕೆಯ ಮೇರಿಲ್ಯಾಂಡ್ ವಿಶ್ವವಿದ್ಯಾಲಯದ ವಾತಾವರಮ, ಸಾಗರ ವಿಜ್ಞಾನ ಹಾಗೂ ಭೂವಿಜ್ಞಾನ ವಿಭಾಗದ ಪ್ರಾಧ್ಯಾಪಕ ಡಾ.ರಘು ಮುರ್ತುಗುಡ್ಡೆ ಕರೆ ನೀಡಿದ್ದಾರೆ.

ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಆ್ಯಂಡ್ ಸಾಯನ್ಸ್‌ನ ವಿದ್ಯಾರ್ಥಿಗಳು ಆಯೋಜಿಸಿದ್ದ ‘ಎಕೋಸ್ಪಾಟ್’ ಆನ್‌ಲೈನ್ ಕಾರ್ಯಕ್ರಮದಲ್ಲಿ ಭಾಗವಹಿಸಿ, ‘ಹವಾಮಾನ ಬದಲಾವಣೆ ಮತ್ತು ನಾವು ಮಾಡಬಹುದಾದದ್ದೇನು?’ ಎಂಬ ವಿಷಯದ ಕುರಿತು ಅವರು ಮಾತನಾಡಿದರು.

ಸುಸ್ಥಿರ ಜೀವನ ಶೈಲಿಯ ಹಲವಾರು ಉದಾಹರಣೆಗಳನ್ನು ಉಲ್ಲೇಖಿಸಿದ ಅವರು, ಆ ಮೂಲಕ ನಾವು ಒಟ್ಟಾರೆಯಾಗಿ ಇಂಗಾಲದ ಹೆಜ್ಜೆ ಗುರುತನ್ನು ಕಡಿಮೆ ಮಾಡಬಹುದು ಎಂದರು. ಇತ್ತೀಚಿನ ದಿನಗಳಲ್ಲಿ ಹವಾಮಾನ ಬದಲಾವಣೆಯ ವಿಷಯಗಳಲ್ಲಿ ಯುವಕರು ಹೆಚ್ಚು ಹೆಚ್ಚು ಆಸಕ್ತಿ ತೋರಿಸು ತ್ತಿರುವ ಬಗ್ಗೆ ಸಂತಸ ವ್ಯಕ್ತಪಡಿಸಿ ಹವಾಮಾನ ಒಪ್ಪಂದಗಳ ಮೇಲೆ ಜಾಗರೂಕರಾಗಿರಿ ಮತ್ತು ಸಂಬಂಧಿತರ ಮೇಲೆ ಒತ್ತಡವನ್ನು ಹೇರುವಂತೆ ಕೇಳಿಕೊಂಡರು.

ಇದರಿಂದ ಸಾಮೂಹಿಕವಾಗಿ ನಾವು ಬದಲಾವಣೆಯನ್ನು ಮಾಡಬಹುದು. ಹವಾಮಾನ ವೈಪರೀತ್ಯದ ಪರಿಹಾರ ತಕ್ಷಣವೇ ದೊರಕದು. ಬದಲಾಗಿ ಪ್ರತಿಯೊಬ್ಬರೂ ಸತತವಾಗಿ ಬಹುಕಾಲ ಪ್ರಯತ್ನಿಸುವುದರಿಂದ ಮಾತ್ರವೇ ಪರಿಹಾರವನ್ನು ಕಂಡುಕೊಳ್ಳಲು ಸಾಧ್ಯ ಎಂದು ಡಾ.ರಘು ವಿವರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಸಿಪಿಎಎಸ್‌ನ ನಿರ್ದೇಶಕ ಪ್ರೊ. ವರದೇಶ್ ಹಿರೇಗಂಗೆ, ವಿಜ್ಞಾನಿಗಳು, ಪರಿಸರ ಶಾಸ್ತ್ರಜ್ಞರು ಮತ್ತು ಹವಾಮಾನ ಬದಲಾವಣೆಯಿಂದ ನೇರ ಪರಿಣಾಮಕ್ಕೊಳಗಾದವರ ನಡುವೆ ಸಂವಾದ ನಡೆಯಬೇಕು. ಇದರಲ್ಲಿ ಕೆಲವು ಭಿನ್ನಾಭಿಪ್ರಾಯಗಳು ಮೂಡಬಹುದು, ಆದರೆ ವೈಜ್ಞಾನಿಕ ದೃಷ್ಟಿಕೋನವು ಈ ವಿಷಯದಲ್ಲಿ ಅತೀ ಮಹತ್ವವಾದದ್ದು ಎಂದರು.

ಸಂಸ್ಥೆಯ ಶ್ರವಣ್ ಬಾಸ್ರಿ ಕಾರ್ಯಕ್ರಮ ನಿರೂಪಿಸಿದರು. ಚಿನ್ಮಯಿ ಬಾಳ್ಕರ್ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ಆಲಿಸ್ ಚೌಹಾಣ್ ಇಕೋಸ್ಪಾಟ್ ಕುರಿತು ಮಾಹಿತಿ ನೀಡಿದರು. ಮನಸ್ವಿನಿ ಶ್ರೀರಂಗಂ ವಂದಿಸಿದರು. ಸಂಸ್ಥೆಯ ಬಿಎ- ಏಸ್ತೆಟಿಕ್ಸ್ ಆ್ಯಂಡ್ ಪೀಸ್ ಸ್ಟಡೀಸ್‌ನ ವಿದ್ಯಾರ್ಥಿಗಳು ತಮ್ಮ ’ಇಕೋಸ್ಪಾಟ್’ ಸರಣಿ ಭಾಗವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಿದ್ದರು.

ಶೇ.1ರಷ್ಟು ಜನತೆ ಶೇ.74 ಇಂಗಾಲ ಉತ್ಪತ್ತಿಗೆ ಕಾರಣ

ಜಗತ್ತಿನಲ್ಲಿ ಅಧಿಕ ಆದಾಯ ಹೊಂದಿರುವ ಕೇವಲ ಶೇ.1ರಷ್ಟಿರುವ ಜನಸಂಖ್ಯೆ ಸರಿಸುಮಾರು ಶೇ.74ರಷ್ಟು ವಾರ್ಷಿಕ ಇಂಗಾಲದ ಉತ್ಪತ್ತಿಗೆ ಕಾರಣವಾಗಿದ್ದಾರೆ ಎಂದು ಮೇರಿಲ್ಯಾಂಡ್ ವಿವಿಯ ಹವಾಮಾನ ತಜ್ಞ ಡಾ.ರಘು ಮುರ್ತುಗುಡ್ಡೆ ತಿಳಿಸಿದರು.

ಇದರಿಂದಾಗಿ ಕಡಿಮೆ ಆದಾಯ ಹೊಂದಿರುವ ಹಾಗೂ ಬಡತನದ ರೇಖೆಗೆ ಕೆಳಗಿರುವ ಶೇ.50ಕ್ಕೂ ಅಧಿಕ ಜನಸಂಖ್ಯೆ ಈ ಮೂಲಕ ಉಂಟಾಗುವ ಹವಾಮಾನ ವೈಪರೀತ್ಯದ ಪರಿಣಾಮಗನ್ನು ಅನುಭವಿಸುತಿದ್ದಾರೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News