ನ.13 ರಂದು 'ತುಳುನಾಡಿನ ನೆಲದಲ್ಲಿ ಕನ್ನಡ ವೃಕ್ಷದ ಬೇರು- ಚಿಗುರುಗಳು' ಕುರಿತು ವಿಚಾರ ಸಂಕಿರಣ

Update: 2021-11-11 13:40 GMT

ಕಾರ್ಕಳ,:ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಪ್ರಾಯೋಜಕತ್ವದಲ್ಲಿ ಕನ್ನಡ ಕಾಯಕ ವರ್ಷಾಚರಣೆಯ ಪ್ರಯುಕ್ತ ಶ್ರೀ ಭುವನೇಂದ್ರ ಕಾಲೇಜು ಮತ್ತು ನಮ ತುಳುವೆರ್ ಕಲಾ ಸಂಘಟನೆ (ರಿ) ಮುದ್ರಾಡಿ ಇವುಗಳ ಜಂಟಿ ಆಶ್ರಯದಲ್ಲಿ ‘ತುಳು ನಾಡಿನ ನೆಲದಲ್ಲಿ ಕನ್ನಡ ವೃಕ್ಷದ ಬೇರು-ಚಿಗುರುಗಳು' ಎನ್ನುವ ಶೀರ್ಷಿಕೆಯಲ್ಲಿ ಒಂದು ದಿನದ ವಿಚಾರ ಸಂಕಿರಣವು ನ.13 ರಂದು ಶ್ರೀ ಭುವನೇಂದ್ರ ಕಾಲೇಜಿನ ಸಭಾಂಗಣದಲ್ಲಿ ನಡೆಯಲಿದೆ.

ಈ ವಿಚಾರ ಸಂಕಿರಣನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಮೋಹನ್ ಆಳ್ವ ಅವರು ಉದ್ಘಾಟಿಸಲಿದ್ದಾರೆ. ಭುವನೇಂದ್ರ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷರಾದ ಸಿಎ ಶಿವಾನಂದ ಪೈ ಅಧ್ಯಕ್ಷತೆಯನ್ನು ವಹಿಸಲಿದ್ದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಯವರಾದ ಡಾ. ಸಂತೋಷ ಹಾನಗಲ್ಲ ಹಾಗೂ ಮಂಗಳೂರು ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕರಾದ ಡಾ. ಮಾಧವ ಮೂಡುಕೋಣಾಜೆ ಅತಿಥಿಗಳಾಗಿರುತ್ತಾರೆ ಎಂದು ಶ್ರೀ ಭುವನೇಂದ್ರ ಕಾಲೇಜಿನ ಪ್ರಾಚಾರ್ಯ ಡಾ. ಮಂಜುನಾಥ ಕೋಟ್ಯಾನ್ ತಿಳಿಸಿದರು.

ಅವರು ಗುರುವಾರ ಶ್ರೀ ಭುವನೇಂದ್ರ ಕಾಲೇಜಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.

‘ಕಾಲ,ದೇಶ, ಜನ, ಜಾತಿಗಳನ್ನು ಅಪ್ಪಿ  ಕನ್ನಡದ ಕಂಪನ್ನು ಉಳಿಸಿ ಬೆಳೆಸಿದ ಯಕ್ಷಗಾನ ಕಲೆ’ ಎಂಬ ವಿಷಯದ ಕುರಿತು ಮೊದಲ ಗೋಷ್ಠಿ ನಡೆಯಲಿದ್ದು  ಖ್ಯಾತ ಕಲಾವಿದ ಮತ್ತು  ವಾಗ್ಮಿಅಶೋಕ್ ಭಟ್ ಉಜಿರೆಯವರು ಮಾತನಾಡಲಿರುವರು.

ಪೂರ್ವಾಹ್ನದ ಎರಡನೆಯ ಗೋಷ್ಠಿಯು ‘ತುಳುನಾಡಲ್ಲಿ  ಕನ್ನಡ ಓದುಗರ ಲೋಕವನ್ನು ವಿಸ್ತರಿಸಿ ಬೆಳೆಸುವಲ್ಲಿ ಪತ್ರಿಕೋದ್ಯಮದ ಪಾತ್ರ’ ಕುರಿತಾಗಿದ್ದು ಉದಯವಾಣಿ ಪತ್ರಿಕೆಯ ನಿವೃತ್ತ ಹಿರಿಯ ಉಪಸಂಪಾದಕ  ನಿತ್ಯಾನಂದ  ಪಡ್ರೆಯವರು ಉಪನ್ಯಾಸ ನೀಡಲಿರುವರು.

ಅಪರಾಹ್ನದ ಗೋಷ್ಠಿಯಲ್ಲಿ ಖ್ಯಾತ ಸಂಶೋಧಕ ಮತ್ತು ಪ್ರಾಧ್ಯಾಪಕ ಡಾ. ಅರುಣ್ ಕುಮಾರ್ ಎಸ್ ಆರ್ ಅವರು ‘ಕರಾವಳಿಯಲ್ಲಿ ಕನ್ನಡಕ್ಕೆ ಕಣ್ಣು-ಕಂಠವಾದ ರಂಗಭೂಮಿ'  ಎನ್ನುವ ವಿಷಯದಲ್ಲಿ ಮಾತನಾಡಲಿದ್ದಾರೆ. ಸಮಾರೋಪ ಸಮಾರಂಭದಲ್ಲಿ  ಖ್ಯಾತ ವಿದ್ವಾಂಸ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಮುನಿರಾಜ ರೆಂಜಾಳ ಅವರು ಶಿಖರೋಪನ್ಯಾಸ ನೀಡಲಿದ್ದಾರೆ.

ಶ್ರೀ ಭುವನೇಂದ್ರ ಕಾಲೇಜಿನ ಪ್ರಾಚಾರ್ಯರಾದ ಡಾ. ಮಂಜುನಾಥ ಕೋಟ್ಯಾನ್ ಅವರು ಅಧ್ಯಕ್ಷತೆಯನ್ನು ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ನಮ ತುಳುವೆರ್ ಕಲಾ ಸಂಘಟನೆಯ ಸಾಂಸ್ಕೃತಿಕ ಕಾರ್ಯದರ್ಶಿ ಜಗದೀಶ ಜಾಲ, ಬೆಂಗಳೂರು ಉಪಸ್ಥಿತರಿರುವರು.

ಇದೇ ಸಂದರ್ಭದಲ್ಲಿ ಗುರುರಾಜ ಮಾರ್ಪಳ್ಳಿ ಅವರು ರಚಿಸಿ ನಿರ್ದೇಶಿಸಿದ ‘ಅವ್ವ ನನ್ನವ್ವ ನಾಟಕದ 50ನೇ ಪ್ರದರ್ಶನವು ನಡೆಯುವುದು. ಕನ್ನಡಾಭಿಮಾನಿಗಳು, ಕಲಾಭಿಮಾನಿಗಳು ಮತ್ತು ಸಾಹಿತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಅವರು ವಿನಂತಿಸಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News