ಮಹಿಳಾ ರಕ್ಷಣೆಯ ಕಾನೂನುಗಳ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಿ: ನ್ಯಾ.ಮುರಲಿಧರ ಪೈ ಕರೆ

Update: 2021-11-11 15:07 GMT

ಮಂಗಳೂರು, ನ.11: ಮಹಿಳೆಯರ ಸುರಕ್ಷತೆ ಹಾಗೂ ರಕ್ಷಣೆಗಾಗಿ ಜಾರಿಗೊಳಿಸಲಾಗಿರುವ ಕಾನೂನುಗಳ ಬಗ್ಗೆ ಮಹಿಳೆಯರಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವಂತೆ ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ನ್ಯಾ.ಮುರಲಿಧರ ಪೈ.ಬಿ ಅವರು ಕರೆ ನೀಡಿದರು.

ನಗರದ ಜಿಲ್ಲಾ ಪಂಚಾಯತ್‌ನ ನೇತ್ರಾವತಿ ಸಭಾಂಗಣದಲ್ಲಿ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ, ರಾಷ್ಟ್ರೀಯ ಮಹಿಳಾ ಆಯೋಗ, ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ದ.ಕ. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಮಂಗಳೂರು ವಕೀಲರ ಸಂಘದ ಸಂಯುಕ್ತಾಶ್ರಯದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ‘‘ಮಹಿಳೆಯರಿಗೆ ಕಾನೂನು ಅರಿವು’’ ಕುರಿತು ಒಂದು ದಿನದ ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಮಹಿಳೆಯರು ಇಂದು ಎಲ್ಲಾ ಕ್ಷೇತ್ರಗಳಲ್ಲಿಯೂ ತಮ್ಮ ಕಾರ್ಯಕ್ಷಮತೆ ಹಾಗೂ ಬದ್ಧತೆಯನ್ನು ಪ್ರದರ್ಶಿಸಿಸುತ್ತಿದ್ದಾರೆ. ಮಹಿಳೆಯರ ಮೇಲೆ ಕಿರುಕುಳ, ಲೈಂಗಿಕ ದೌರ್ಜನ್ಯಗಳು ಆದಾಗ ಕಾನೂನು ರೀತಿಯ ಕ್ರಮಗಳನ್ನು ಕೈಗೊಳ್ಳಬೇಕು. ಮಹಿಳೆಯರು ಕೀಳರಿಮೆ ಬಿಟ್ಟು ಹೊರಬರಬೇಕು. ತಾವು ದೌರ್ಜನ್ಯಕ್ಕೊಳಗಾದಾಗ ಯಾವುದೇ ಮುಜುಗರಕ್ಕೆ ಒಳಗಾಗದೆ ಕಾನೂನಿನ ನೆರವು ಪಡೆಯಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಹೊಸದಿಲ್ಲಿಯ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಶ್ಯಾಮಲಾ ಎಸ್. ಕುಂದರ್ ಮಾತನಾಡಿ, ಕಾನೂನುಗಳು ಒಳಿತಿಗಾಗಿ ಇರುವಂತವು, ಅವು ಪ್ರತಿಯೊಬ್ಬರಿಗೂ ಸುರಕ್ಷತೆ ಹಾಗೂ ಭದ್ರತೆಯನ್ನು ಒದಗಿಸುತ್ತವೆ. ಇಂತಹ ಕಾನೂನುಗಳ ಅರಿವು ಪಡೆದು ಅವುಗಳಿಂದ ಅಗತ್ಯ ನೆರವು ಪಡೆದುಕೊಳ್ಳಬೇಕು ಎಂದು ಹೇಳಿದರು.

ಮಹಿಳೆಯರು ಇತ್ತೀಚಿಗೆ ಎಲ್ಲ ಕ್ಷೇತ್ರಗಳಲ್ಲೂ ತೊಡಗಿಸಿಕೊಳ್ಳುತ್ತಿದ್ದಾರೆ. ಅವರು ಆರ್ಥಿಕ ಸಬಲೀಕರಣಗೊಳ್ಳುತ್ತಿದ್ದರೂ ಸಮಾಜದಲ್ಲಿ ಹಲವು ಶೋಷಣೆಗೆ ಒಳಗಾಗುತ್ತಿದ್ದಾರೆ. ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಕಾನೂನು ಅರಿವಿನ ಅಗತ್ಯವಿದೆ ಎಂದರು.

ನೊಂದ ಹಾಗೂ ದೌರ್ಜನ್ಯಕ್ಕೆ ಒಳಗಾದ ಸಂತ್ರೆಸ್ತೆಯರಿಗೆ ಉಚಿತ ಕಾನೂನು ನೆರವು ನೀಡಲಾಗುತ್ತಿದೆ. ಪ್ರತಿ ನ್ಯಾಯಾಲಯದಲ್ಲಿ ಇದಕ್ಕಾಗಿ ಸೂಕ್ತ ವ್ಯವಸ್ಥೆಯಿದ್ದು ನೊಂದ ಮಹಿಳೆಯರು ಇದರ ಸದುಪಯೋಗ ಪಡೆಯುವಂತೆ ಸಲಹೆ ನೀಡಿದರು.

ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಪೃಥ್ವೀರಾಜ್ ವರ್ಣೇಕರ್ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಟಿ. ಪಾಪ ಬೋವಿ, ಹಿರಿಯ ವಕೀಲರಾದ ಗೌರಿ ಕೆ.ಎಸ್., ಎಸ್.ಪಿ. ಚೆಂಗಪ್ಪ ಉಪಸ್ಥಿತರಿದ್ದರು.

ಅಂಗನವಾಡಿ ಕಾರ್ಯಕರ್ತರು, ಸ್ತೀ ಶಕ್ತಿ ಸ್ವಸಹಾಯ ಸಂಘದ ಸದಸ್ಯರು, ಸ್ವಯಂ ಸೇವಾ ಸಂಸ್ಥೆಗಳ ಸದಸ್ಯರುಗಳು ಕಾರ್ಯಗಾರದಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News