ಮಂಗಳೂರು: 'ಮತೀಯ ಗೂಂಡಾಗಿರಿಯಿಂದ ದ್ವೇಷದ ಅಪರಾಧದವರೆಗೆ' - ಸತ್ಯಶೋಧನಾ ವರದಿ ಬಿಡುಗಡೆ

Update: 2021-11-13 14:29 GMT

ಮಂಗಳೂರು, ನ.13: ದ.ಕ.ಜಿಲ್ಲೆಯಲ್ಲಿ 2021ರ ಜನವರಿಯಿಂದ ಸೆಪ್ಟಂಬರ್‌ವರೆಗೆ ನಡೆದ ಅಹಿತಕರ ಘಟನೆಗೆ ಸಂಬಂಧಿಸಿ ಪಿಯುಸಿಎಲ್ ಕರ್ನಾಟಕ, ಆಲ್ ಇಂಡಿಯಾ ಲಾಯರ್ಸ್‌ ಅಸೋಸಿಯೇಶನ್ ಫಾರ್ ಜಸ್ಟೀಸ್, ಅಖಿಲ ಭಾರತ ಪ್ರಜಾ ವೇದಿಕೆ, ಗೌರಿ ಲಂಕೇಶ್ ನ್ಯೂಸ್ ಡಾಟ್ ಕಾಮ್ ಜಂಟಿಯಾಗಿ ತಯಾರಿಸಿದ 'ಮತೀಯ ಗೂಂಡಾಗಿರಿಯಿಂದ ದ್ವೇಷದ ಅಪರಾಧದವರೆಗೆ-ಅಂಬೇಡ್ಕರ್‌ರ ಕನಸಿನ ಭ್ರಾತೃತ್ವದ ಮೇಲೆ ದಾಳಿ' - ಸತ್ಯಶೋಧನಾ ವರದಿಯನ್ನು ನಗರದ ರೋಶನಿ ನಿಲಯದ ಸಭಾಂಗಣದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಬಿಡುಗಡೆಗೊಳಿಸಲಾಯಿತು.

ವರದಿ ತಯಾರಿಯ ವೇಳೆ ಆದ ಅನುಭವದ ಬಗ್ಗೆ ಮಾತನಾಡಿದ ಆಲ್ ಇಂಡಿಯಾ ಲಾಯರ್ಸ್‌ ಅಸೋಸಿಯೇಶನ್ ಫಾರ್ ಜಸ್ಟೀಸ್‌ನ ಮುಖ್ಯಸ್ಥೆ ಮೈತ್ರಿ ಕೃಷ್ಣನ್ ದ.ಕ.ಜಿಲ್ಲೆಯಲ್ಲಿ ಅನೈತಿಕ ಪೊಲೀಸ್‌ಗಿರಿ ಹೆಸರಿನಲ್ಲಿ ಈ ಹಿಂದೆ ನಡೆದ ಘಟನೆಗೆ ಸಂಬಂಧಿಸಿ 2008 ಮತ್ತು 2012ರಲ್ಲಿ ಪಿಯುಸಿಎಲ್ ವರದಿ ಪ್ರಕಟಿಸಿತ್ತು. ಇದು ಮೂರನೆಯ ವರದಿಯಾಗಿದೆ. ವರದಿ ತಯಾರಿಯ ವೇಳೆ ಸಾಮಾಜಿಕ ಅಂತರ ಸೃಷ್ಟಿಸಿರುವುದು, ಅಂತರ್‌ಧರ್ಮೀಯ ಪ್ರೀತಿಗೆ ಕಡಿವಾಣ ಹಾಕಿರುವುದು, ಕೋವಿಡ್‌ನಂತಹ ಕಾಲಘಟ್ಟದಲ್ಲೂ ಅಲ್ಪಸಂಖ್ಯಾತ ಸಮುದಾಯಕ್ಕೆ ಸಾಮಾಜಿಕವಾಗಿ ಬಹಿಷ್ಕಾರ ಹಾಕಿರುವುದು, ಗೋವಿನ ಹೆಸರಿನಲ್ಲಿ ದೌರ್ಜನ್ಯ ಎಸಗಿರುವುದು, ಧಾರ್ಮಿಕ ಸ್ವಾತಂತ್ರವನ್ನು ಹತ್ತಿಕ್ಕಿರುವುದು, ದ್ವೇಷದ ಭಾಷಣ ಮಾಡಿರುವುದು ಇತ್ಯಾದಿ ಅಂಶಗಳನ್ನು ಪರಿಗಣಿಸಲಾಗಿದೆ. ಮತೀಯ ಗೂಂಡಾಗಿರಿ, ದ್ವೇಷದ ಅಪರಾಧಕ್ಕೆ ಸಂಬಂಧಿಸಿ ಸರಕಾರದ ಪಾತ್ರವೇನು? ಪೊಲೀಸ್ ಇಲಾಖೆ ಏನು ಮಾಡಬೇಕಾಗುತ್ತದೆ? ಎಂಬುದನ್ನು ಗಮನಿಸುವುದರ ಜೊತೆಗೆ ಭ್ರಾತೃತ್ವದ ಮೇಲೆ, ಅಲ್ಪಸಂಖ್ಯಾತರ ಮೇಲೆ ನಡೆಸಲಾಗುವ ಈ ಎಲ್ಲಾ ದಾಳಿಗಳು ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೇಲೆ ನಡೆಸಲಾಗುವ ದಾಳಿ ಎಂದು ಪರಿಗಣಿಸಬೇಕಿದೆ, ಇದರ ವಿರುದ್ಧ ಹೋರಾಟ ಮಾಡುವುದು ಎಲ್ಲರ ಜವಾಬ್ದಾರಿಯೂ ಆಗಿದೆ ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಂಶೋಧಕ ಡಾ. ಎಂ.ಚಂದ್ರಪೂಜಾರಿ ಮಾತನಾಡಿ ಹಿಂದೂ-ಮುಸ್ಲಿಂ, ಅಲ್ಪಸಂಖ್ಯಾತರು - ಬಹುಸಂಖ್ಯಾತರು ಎಂಬ ಧ್ರುವೀಕರಣದ ಹಿಂದೆ ರಾಜಕೀಯ ಲಾಭದ ಉದ್ದೇಶವಿದೆ. ಇದರ ಹೊಡೆತವು ಶೇ.70ರಷ್ಟಿರುವ ತಳಮಟ್ಟದ ಜನರ ಮೇಲಾಗಿದೆ. ಇದನ್ನು ಅರ್ಥ ಮಾಡಿಕೊಳ್ಳದಿದ್ದರೆ ಪರಿಣಾಮ ಮತ್ತಷ್ಟು ಹದಗೆಡುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟರು.

ಸಾಮಾಜಿಕ ಕಾರ್ಯಕರ್ತೆ ಲೊರೆಟ್ಟ ಪಿಂಟೋ ಮಾತನಾಡಿ ಕಳೆದ 9 ತಿಂಗಳಲ್ಲಿ ದ.ಕ.ಜಿಲ್ಲೆಯಲ್ಲಿ 71 ಅಹಿತಕರ ಘಟನೆಗಳು ಬೆಳಕಿಗೆ ಬಂದಿದೆ. ಇನ್ನೂ ಬೆಳಕಿಗೆ ಬಾರದ ಅದೆಷ್ಟೋ ಘಟನೆಗಳಿರಬಹುದು. ಪ್ರತಿಯೊಂದು ಘಟನೆ ನಡೆದಾಗಲೂ ಸಂತ್ರಸ್ತರ ಪರ ನಿಲ್ಲಬೇಕಿದೆ ಎಂದರು.

ಅನುಪಮ ಪತ್ರಿಕೆಯ ಸಂಪಾದಕಿ ಶಹನಾಝ್ ಎಂ. ಮಾತನಾಡಿ 40 ವರ್ಷದ ಹಿಂದಿನ ಭ್ರಾತೃತ್ವದ ಸಂಬಂಧ ಈಗ ಇಲ್ಲ. ಜನರ ಬದುಕಿನ ಮೇಲೆ ನಿಯಂತ್ರಿಸುವ ಪರಿಪಾಠ ಮುಂದುವರಿದಿದೆ. ಮತೀಯ ಶಕ್ತಿಗಳು ಪೊಲೀಸ್ ಇಲಾಖೆ ಸಹಿತ ಆಡಳಿತ ವ್ಯವಸ್ಥೆಯನ್ನು ಕಪಿಮುಷ್ಠಿಯಲ್ಲಿಡುವ ಮೂಲಕ ಭೀತಿ ಸೃಷ್ಟಿಯಾಗಿದೆ. ಸಮಾಜದಲ್ಲಿ ಒಡಕು ಸೃಷ್ಟಿಸುವ ಬದಲು ಜನಸಾಮಾನ್ಯರು ನೆಮ್ಮದಿಯಿಂದ ಬದುಕುವ ವಾತಾವರಣ ಸೃಷ್ಟಿಸಬೇಕಿದೆ ಎಂದರು.

ಸಾಮಾಜಿಕ ಕಾರ್ಯಕರ್ತೆ ವಿದ್ಯಾದಿನಕರ್ ಮಾತನಾಡಿದರು. ಸಾಮಾಜಿಕ ಕಾರ್ಯಕರ್ತ ಶಬ್ಬೀರ್ ಅಹ್ಮದ್ ಕಾರ್ಯಕ್ರಮ ನಿರೂಪಿಸಿದರು.

*ಮುಂದಿನ ಹೆಜ್ಜೆಯ ಬಗ್ಗೆ ಮಾತನಾಡಿದ 'ವಾರ್ತಾಭಾರತಿ' ದೈನಿಕದ ಪ್ರಧಾನ ಸಂಪಾದಕ ಅಬ್ದುಸ್ಸಲಾಂ ಪುತ್ತಿಗೆ ಮನುವಾದ ಮತ್ತು ಬಂಡವಾಳಶಾಹಿತ್ವ ದೇಶದ ಪಾಲಿನ ವಿಷವಾಗಿದೆ. ಅವೆರಡೂ ಒಂದಕ್ಕೊಂದು ಹೊಂದಿಕೊಂಡು ಸಾಗುತ್ತಿದೆ. ಇದರಿಂದ ಕೇವಲ ಅಲ್ಪಸಂಖ್ಯಾತರು ಮಾತ್ರವಲ್ಲ ಈ ದೇಶದ ಕಾರ್ಮಿಕ ವರ್ಗ, ರೈತರು, ಮಹಿಳೆಯರು, ಮಕ್ಕಳು ಬಲಿಪಶುಗಳಾಗುತ್ತಿದ್ದಾರೆ. ಹಾಗಾಗಿ ಮನುವಾದ ಮತ್ತು ಬಂಡವಾಳಶಾಹಿತ್ವದ ವಿರುದ್ಧ ಹೋರಾಟ ಮಾಡದಿದ್ದರೆ ಸಮಸ್ಯೆಗೆ ಪರಿಹಾರ ಸಿಗದು ಎಂದು ಅಭಿಪ್ರಾಯಪಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News