ಕಾಪು, ಕಾರ್ಕಳದಲ್ಲಿ ಭಾರೀ ಮಳೆ

Update: 2021-11-15 14:05 GMT

ಉಡುಪಿ, ನ.15: ಜಿಲ್ಲೆಯ ಕಾಪು ಹಾಗೂ ಕಾರ್ಕಳ ತಾಲೂಕಿನಾದ್ಯಂತ ಕಳೆದ 24 ಗಂಟೆಗಳಲ್ಲಿ ಭಾರೀ ಮಳೆ ಸುರಿದಿದೆ. ಇಂದು ಬೆಳಗ್ಗೆ 8:30ಕ್ಕೆ ಮುಕ್ತಾಯಗೊಂಡಂತೆ ಹಿಂದಿನ 24 ಗಂಟೆಗಳಲ್ಲಿ ಕಾಪುವಿನಲ್ಲಿ 10.7 ಸೆ.ಮಿ. ಹಾಗೂ ಕಾರ್ಕಳದಲ್ಲಿ 10.9ಸೆ.ಮೀ. ಮಳೆ ಸುರಿದಿದೆ ಎಂದು ವರದಿಯಾಗಿದೆ.

ಹವಾಮಾನ ವೈಫರೀತ್ಯದಿಂದಾಗಿ ಕಳೆದ ಕೆಲವು ದಿನಗಳಿಂದ ಭಾರೀ ಮಳೆ ಸುರಿಯುತಿದ್ದು, ಜಿಲ್ಲೆಯಲ್ಲಿ ಸರಾಸರಿ 47.5 ಮಿ.ಮಿ. ಮಳೆಯಾಗಿದೆ. ಉಡುಪಿಯಲ್ಲಿ 30.7ಮಿ.ಮೀ., ಬ್ರಹ್ಮಾವರದಲ್ಲಿ 24.4ಮಿ.ಮೀ., ಕುಂದಾಪುರ 26.7, ಬೈಂದೂರು 16.4 ಹಾಗೂ ಹೆಬ್ರಿಯಲ್ಲಿ 28.6 ಮಿ.ಮೀ. ಮಳೆಯಾದ ಬಗ್ಗೆ ವರದಿಯಾಗಿದೆ.

ಇಂದು ಸಹ ಅಪರಾಹ್ನದ ಬಳಿಕ ದಟ್ಟ ಮೋಡ ಕವಿದ ವಾತಾವರಣವಿದ್ದು, ಆಗಾಗ ಜೋರಾಗಿ ಮಳೆ ಸುರಿಯುತ್ತಿದೆ. ಹವಾಮಾನ ತಂಪಾಗಿದ್ದು, ಚಳಿಯ ಅನುಭವವಾಗುತ್ತಿದೆ. ಸಂಜೆ ಐದು ಗಂಟೆಯ ಸುಮಾರಿಗೆ ಕಪ್ಪು ಕತ್ತಲೆ ಆವರಿಸುತಿದೆ. ರಾತ್ರಿ ಸಹ ಜಿಲ್ಲೆಯಾದ್ಯಂತ ಹಲವೆಡೆ ಭಾರೀ ಮಳೆಯಾಗಿರುವ ಬಗ್ಗೆ ವರದಿಯಾಗಿದೆ.

ಕಾರ್ಕಳ ತಾಲೂಕು ಕಾಂತಾರವರ ಗ್ರಾಮದ ಬಾಲಕೃಷ್ಣ ಶೆಟ್ಟಿ ಎಂಬವರ ಮನೆಗೆ ಸಿಡಿಲು ಬಡಿದು ಭಾಗಶ: ಹಾನಿಯಾಗಿದ್ದು 50ಸಾವಿರ ರೂ.ನಷ್ಟ ಉಂಟಾಗಿದೆ. ಉಡುಪಿ ತಾಲೂಕಿನ ಪಡುತೋನ್ಸೆ ಗ್ರಾಮದ ಜಿ.ಶಾಬುದ್ದೀನ್ ಇವರ ಪಕ್ಕಾಮನೆ ಗಾಳಿ-ಮಳೆಯಿಂದ ತೀವ್ರವಾಗಿ ಹಾನಿಗೊಂಡಿದ್ದು, ಒಂದು ಲಕ್ಷ ರೂ.ನಷ್ಟದ ಅಂದಾಜು ಮಾಡಲಾಗಿದೆ.

ಕರಾವಳಿ ಜಿಲ್ಲೆಯ ಮಟ್ಟಿಗೆ ಇಂಥ ಹವಾಮಾನ ಹಿಂದೆಂದೂ ಕಾಣಿಸಿಕೊಂಡಿಲ್ಲ ಎಂದು ಊರಿನ ಹಿರಿಯರು ಅಭಿಪ್ರಾಯ ಪಡುತ್ತಾರೆ. ನವೆಂಬರ್ ತಿಂಗಳಲ್ಲಿ ಈ ಪ್ರಮಾಣದ ಮಳೆ ಸುರಿಯುತ್ತಿರುವುದು ಕಳೆದ ಎಳೆಂಟು ದಶಕಗಳ ತಮ್ಮ ಜೀವಿತಾವಧಿ ಯಲ್ಲಿ ಕಂಡ ನೆನಪಿಲ್ಲ ಎಂಬುದು ಅವರ ಅಭಿಪ್ರಾಯವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News