ಮಂಗಳೂರು: ಕಸ್ಟಮರ್ ಕೇರ್‌ನಿಂದ ಕಾಲ್ ಮಾಡುವುದಾಗಿ ನಂಬಿಸಿ ವ್ಯಕ್ತಿಗೆ ವಂಚನೆ

Update: 2021-11-16 16:46 GMT

ಮಂಗಳೂರು, ನ.16: ಡಿಎಚ್‌ಎಲ್ ಕಸ್ಟಮರ್ ಕೇರ್‌ನಿಂದ ಕಾಲ್ ಮಾಡುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಂದ ಸಾವಿರಾರು ರೂ. ವಂಚಿಸಿದ ಬಗ್ಗೆ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೋಸ ಹೋಗಿರುವ ವ್ಯಕ್ತಿಯು ನ.13ರಂದು ಬೆಳಗ್ಗೆ 10:17ರ ಸುಮಾರಿಗೆ ಡಿಎಚ್‌ಎಲ್ ಕಸ್ಟಮರ್ ಕೇರ್‌ಗೆ ಕಾಲ್ ಮಾಡಿದ್ದರು. ಬಳಿಕ ಅಪರಿಚಿತ ವ್ಯಕ್ತಿಯೋರ್ವರು ಕರೆ ಮಾಡಿ ಡಿಎಚ್‌ಎಲ್ ಕಸ್ಟಮರ್ ಕೇರ್‌ನಿಂದ ಕಾಲ್ ಮಾಡುತ್ತಿರುವುದಾಗಿ ತಿಳಿಸಿದ್ದಾನೆ. ಅಲ್ಲದೆ ಒಂದು ಆ್ಯಪ್‌ನ್ನು ಡೌನ್‌ಲೋಡ್ ಮಾಡುವಂತೆ ಹೇಳಿ ಮೊಬೈಲ್‌ಗೆ ಒಂದು ಲಿಂಕ್ ಒಂದನ್ನು ಕಳುಹಿಸಿರುತ್ತಾನೆ.

ಆತ ಕಳುಹಿಸಿದ ಲಿಂಕ್‌ನ್ನು ಓಪನ್ ಮಾಡಿ ತಮ್ಮ ಬ್ಯಾಂಕ್ ಖಾತೆ ನಂಬ್ರ ಹಾಗೂ ಒಟಿಪಿಯನ್ನು ದೂರುದಾರರು ನಮೂದಿಸಿದ್ದು, ತಕ್ಷಣ ತಮ್ಮ ಬ್ಯಾಂಕ್ ಖಾತೆಯಿಂದ 24,999 ರೂ. ಕಡಿತಗೊಂಡಿರುತ್ತದೆ. ಅಲ್ಲದೆ ಈ ಬಗ್ಗೆ ತನ್ನ ಮೊಬೈಲ್‌ಗೆ ಸಂದೇಶ ಬಂದಿರುತ್ತದೆ. ಬಳಿಕ ಇನ್ನೊಂದು ಒಟಿಪಿಯನ್ನು ನಮೂದಿಸಿದ್ದು, ಈ ಸಂದರ್ಭ ಮತ್ತೆ 24,999ರೂ. ಬ್ಯಾಂಕ್ ಖಾತೆಯಿಂದ ಕಡಿತಗೊಂಡಿರುತ್ತದೆ. ನಂತರ ತಮ್ಮ ಬ್ಯಾಂಕ್ ಖಾತೆಯನ್ನು ಸ್ಥಗಿತಗೊಳಿಸಿದ್ದಾರೆ. ಅಪರಿಚಿತ ವ್ಯಕ್ತಿ ಹಂತ ಹಂತವಾಗಿ ಒಟ್ಟು ರೂ 49,998 ರೂ. ಹಣವನ್ನು ತಮ್ಮ ಖಾತೆಯಿಂದ ವರ್ಗಾಯಿಸಿ ಮೋಸ ಮಾಡಿರುವುದಾಗಿ ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News