ಅಜೆಕಾರು ದೇವಸ್ಯ ಶಿವರಾಮ ಶೆಟ್ಟಿಗೆ ಹುಟ್ಟೂರ ಅಭಿನಂದನಾ ಕಾರ್ಯಕ್ರಮ

Update: 2021-11-16 17:33 GMT

ಕಾರ್ಕಳ: ನಮ್ಮ ಜೀವನದಲ್ಲಿ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಯಾವುದೇ ಫಲಾಪೇಕ್ಷೆಯಿಲ್ಲದೇ ಸಮಾಜಕ್ಕೆ ಪೂರಕವಾದ ಕೆಲಸಗಳನ್ನು ಮಾಡಿದಾಗ ಸಮಾಜವು ನಮ್ಮನ್ನು ಗುರುತಿಸಿ ಗೌರವಿಸುತ್ತದೆ ಎಂದು ಅಜೆಕಾರು ಪದ್ಮಗೋಪಾಲ ಎಜ್ಯುಕೇಶನ್ ಟ್ರಸ್ಟ್  ಅಧ್ಯಕ್ಷರಾದ ಡಾ ಸುಧಾಕರ ಶೆಟ್ಟಿ ಹೇಳಿದರು.

ಅಜೆಕಾರು ವಿಷ್ನುಮೂರ್ತಿ ದೇವಸ್ಥಾನದ ಸಭಾಂಗಣದಲ್ಲಿ ಉದ್ಯಮಿಗಳು, ಧಾರ್ಮಿಕ ಮುಖಂಡರು ಹಾಗೂ ದಾನಿಗಳಾದ ಅಜೆಕಾರು ದೇವಸ್ಯ ಶಿವರಾಮ ಶೆಟ್ಟಿ ದಂಪತಿಗೆ ಗ್ರಾಮಸ್ಥರ ವತಿಯಿಂದ ಮಂಗಳವಾರ ನಡೆದ ಹುಟ್ಟೂರ ಅಭಿನಂದನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಡಾ. ಸುಧಾಕರ ಶೆಟ್ಟಿ ಮಾತನಾಡಿ, ನಾವು ಎಷ್ಟು ಗಳಿಸಿದ್ದೇವೆ ಎನ್ನುವುದಕ್ಕಿಂತ ಸಮಾಜಕ್ಕೆ ಎಷ್ಟು ಕೊಟ್ಟಿದ್ದೇವೆ ಎನ್ನುವುದು ಮುಖ್ಯ, ಬಡತನದಲ್ಲಿ ಹುಟ್ಟಿಬೆಳೆದ ಶಿವರಾಮ ಶೆಟ್ಟಿಯವರು ಮುಂಬೈನಲ್ಲಿ ಕಷ್ಟಪಟ್ಟುದುಡಿದು ಹೋಟೇಲ್ ಉದ್ಯಮದ ಮೂಲಕ ಸಾವಿರಾರು ಜನರಿಗೆ ಉದ್ಯೋಗ ನೀಡಿದ್ದಾರೆ ಮಾತ್ರವಲ್ಲದೇ ತನ್ನ ಗಳಿಕೆಯ ಪಾಲಿನಲ್ಲಿ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಚಟುವಟಿಕೆಗಳಿಗೆ ಉದಾರ ಕೊಡುಗೆ ನೀಡುವ ಮೂಲಕ ಅವರ ಸಮಾಜಮುಖಿ ಸೇವೆಗೆ ಹುಟ್ಟೂರ ನಾಗರಿಕರು ಗುರುತಿಸಿ ಗೌರವಿಸಿರುವುದು ಅಭಿನಂದನೀಯ ಎಂದರು.

ವಿಷ್ನುಮೂರ್ತಿ ದೇವಳದ ತಂತ್ರಿಗಳಾದ ವಾದಿರಾಜ ತಂತ್ರಿಗಳು ಮಾತನಾಡಿ, ನಿಸ್ವಾರ್ಥ ಮನನಸ್ಸಿನಿಂದ ಮಾಡುವ ಕಾಯಕಕ್ಕೆ ದೇವರ ಪ್ರತಿಫಲವಿದೆ ಇಂತಹ ಅರ್ಥಪೂರ್ಣ ಕಾರ್ಯಕ್ರಮವು ದೇವರ ಸನ್ನಿಧಾನದಲ್ಲಿ ನಡೆದಿರುವುದು ದೇವರ ಅನುಗ್ರಹ ಸದಾ ಇರುತ್ತದೆ ಎಂದು ಆಶೀರ್ವಚಿಸಿದರು.

ಈ ಸಂದರ್ಭದಲ್ಲಿ ಶಿವರಾಮ ಶೆಟ್ಟಿಯವರು ಹುಟ್ಟೂರ ನಾಗರಿಕರ ಹಾಗೂ ವಿವಿಧ ಸಂಘಸಂಸ್ಥೆಗಳ ವತಿಯಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಮಾನವ ಜನ್ಮದಲ್ಲಿ ನಾವು ತಂದೆತಾಯಿ ಸೇವೆ ಮಾಡಬೇಕು ಇದರ ಜತೆಗೆ ಭಗವಂತನ ಸೇವೆ ಹಾಗೂ ಸಮಾಜ ಸೇವೆ ಮಾಡಿದಾಗ ನಮ್ಮ ಜೀವನ ಸಾರ್ಥಕವಾಗುತ್ತದೆ, ನನಗೆ ಸಾಕಷ್ಟು ಕಡೆಗಳಲ್ಲಿ ಸನ್ಮಾನ ಸಿಕ್ಕಿದೆ ಆದರೆ ನನ್ನ ಹುಟ್ಟೂರಿನ ಸನ್ಮಾನ ಅತ್ಯಂತ ಖುಷಿ ತಂದಿದೆ ಎಂದು ಭಾವಪರವಶರಾದರು. ಶಿವರಾಮ ಶೆಟ್ಟಿ ಹಾಗೂ ಪುಷ್ಪಾ ಶೆಟ್ಟಿ ದಂಪತಿಗಳು ಪರಸ್ಪರ ಹಾರ ಬದಲಾಯಿಸಿ ಅವರಿಗೆ ಮಹಿಳೆಯರು ಆರತಿ ಬೆಳಗುವ ಮೂಲಕ ಸನ್ಮಾನಕ್ಕೆ ವಿಶಿಷ್ಟ ಮರೆಗು ನೀಡಿದರು.

ಈ ಸಂದರ್ಭ ಮಣಿಪಾಲ ಪ್ರಸನ್ನ ಗಣಪತಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಹರಿಪ್ರಸಾದ್ ರೈ, ರೋಹಿತ್‍ ಕುಮಾರ್ ಹೆಗ್ಡೆ ಎರ್ಮಾಳು, ದೇವಳದ ಅರ್ಚಕರಾದ ರಂಗನಾಥ ಭಟ್, ಅಂಡಾರು ಮಹಾವೀರ್ ಹೆಗ್ಡೆ, ಉದ್ಯಮಿಗಳಾದ ವಿಜಯ ಶೆಟ್ಟಿ, ಸುಜಯ ಶೆಟ್ಟಿ, ಪ್ರಶಾಂತ್ ಶೆಟ್ಟಿ, ಯಶೋಧಾ ಶೆಟ್ಟಿ, ಉಪಸ್ಥಿತರಿದ್ದರು.

ಮಾಜಿ ಸಚಿವ ಅಭಯಚಂದ್ರ ಜೈನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಂದಕುಮಾರ್ ಹೆಗ್ಡೆ ಸ್ವಾಗತಿಸಿ, ಹರೀಶ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು. ನಿವೃತ್ತ ಶಿಕ್ಷಕರಾದ ಭಾಸ್ಕರ ಶೆಟ್ಟಿ ವಂದಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News