ದ.ಕ. ಜಿಲ್ಲಾ ಕಸಾಪ ಅಧ್ಯಕ್ಷನಾದರೆ ಕನ್ನಡ ಭವನ ನಿರ್ಮಾಣಕ್ಕೆ ಯತ್ನ: ಎಂ.ಆರ್. ವಾಸುದೇವ್

Update: 2021-11-17 10:59 GMT

ಮಂಗಳೂರು, ನ.17: ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಚುನಾವಣೆಗೆ ನಾನು ಸ್ಪರ್ಧಿಸುತ್ತಿದ್ದು, ಅಧ್ಯಕ್ಷನಾಗಿ ಚುನಾಯಿತನಾದರೆ ಕನ್ನಡ ಭವನ ನಿರ್ಮಾಣಕ್ಕೆ ಪ್ರಯತ್ನ ಪಡುವುದಾಗಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಿವೃತ್ತ ನಿರ್ದೇಶಕ ಎಂ.ಆರ್. ವಾಸುದೇವ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಪಂಡಿತರು ಪಾಮರರತ್ತ ಚಲಿಸುವಂತ ಹಾಗೂ ಗ್ರಾಮಗಳೇ ಅಂತಹ ಕಾರ್ಯಕ್ರಮಗಳನ್ನು ರೂಪಿಸುವಂತೆ ಕಾರ್ಯಕ್ರಮ ರೂಪಿಸುವುದಾಗಿ ಅವರು ಹೇಳಿದರು.

ಕನ್ನಡ ಶಾಲೆಗಳು ಮುಚ್ಚದಂತೆ ಸರಕಾರವನ್ನು ಹಾಗೂ ಸಾರ್ವಜನಿಕರನ್ನು ರಾಜ್ಯ ಮಟ್ಟದ ಅಧ್ಯಕ್ಷರೊಂದಿಗೆ ಸೇರಿ ಪ್ರೇರೇಪಿಸುತ್ತೇನೆ. ನಾನು ಮಂಗಳೂರು ವಿಮಾನ ನಿಲ್ದಾಣದಲ್ಲಿ 15 ವರ್ಷಕ್ಕೂ ಹೆಚ್ಚಿನ ಕಾಲ ನಿರ್ದೇಶಕನಾಗಿ ಕೆಲಸ ನಿರ್ವಹಿಸಿದ್ದೇನೆ. 14 ವರ್ಷಕ್ಕೂ ಮಿಕ್ಕಿ ತಡೆಯಲ್ಪಟ್ಟಿದ್ದ ವಿಮಾನ ನಿಲ್ದಾಣ ಹಾಗೂ ರನ್‌ವೇ ಅಭಿವೃದ್ಧಿಯನ್ನು ನನ್ನ ಅವಧಿಯಲ್ಲಿ ಕೇವಲ ಮೂರು ವರ್ಷಗಳ ಅವಧಿಯಲ್ಲಿ ಭೂಸ್ವಾಧೀನ ಹಾಗೂ ರನ್ ವೇ ವಿಸ್ತರಣೆ ಮಾಡಿ ಎಲ್ಲಾ ಸೌಲಭ್ಯಗಳನ್ನು ಕೊಡಿಸಿದ್ದೇನೆ ಎಂದರು.

ವಿಮಾನ ನಿಲ್ದಾಣದಲ್ಲಿ ತ್ರಿ ಭಾಷಾ ಸೂತ್ರದ ಅಡಿಯಲ್ಲಿ ಕನ್ನಡ ಸ್ಥಾನವನ್ನು ದೊರಕಿಸಲು ಪ್ರಯತ್ನ ಪಟ್ಟು ಯಶಸ್ವಿಯಾಗಿದ್ದೇನೆ. ನಾಮಫಲಕಗಳು ಕನ್ನಡದಲ್ಲಿರುವಂತೆ ನೋಡಿಕೊಂಡಿದ್ದೇನೆ. ಪ್ರಯಾಣಿಕರಿಗೆ ಅನುಕೂಲವಾಗುವಂತೆ ಕನ್ನಡ ಭಾಷೆಯಲ್ಲಿ ಘೋಷಣೆ ಮಾಡುವಂತೆ ನಿರ್ದೇಶಿಸಿದ್ದೇನೆ. ನಾನು ನಿವೃತ್ತನಾದ ಮೇಲೂ ಕರಾವಳಿ ಪ್ರದೇಶದ ಸಾಂಸ್ಕೃತಿಕ ಸಂಘಟನೆಗಳಲ್ಲಿ ಹಲವಾರು ಜವಾಬ್ದಾರಿಯನ್ನು ಹೊತ್ತು ನನ್ನ ಪಾತ್ರವನ್ನು ತಕ್ಕಮಟ್ಟಿಗೆ ನಿರ್ವಹಿಸಿದ್ದೇನೆ. ದೇವಸ್ಥಾನಗಳ ಜೀರ್ಣೋದ್ಧಾರ, ಯಕ್ಷಗಾನ ಸಮಿತಿಗಳು, ಸಂಗೀತ ಪರಿಷತ್ತು ಮತ್ತು ಸಂಸ್ಕೃತ ಭಾರತೀಗಳ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದೇನೆ. ಕನ್ನಡ ಬಳಗ ಎಂಬ ಸಂಸ್ಥೆಯನ್ನು ಹುಟ್ಟು ಹಾಕಿ ಕನ್ನಡ ಉಪನ್ಯಾಸಗಳನ್ನು ಏರ್ಪಡಿಸಿದ್ದೇನೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಹರಿಕೃಷ್ಣ ಪುನರೂರು, ಕೆ. ಮಹಾಬಲ ಶೆಟ್ಟಿ, ಯು. ರಾಮ ರಾವ್, ಕೆ.ಮಹಾಲಿಂಗ ಪಾಟಾಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News