ಉಡುಪಿ: ಬೂಟ್‌ಪಾಲಿಷ್ ಮಾಡಿ ಧರಣಿ ನಿರತರ ಪ್ರತಿಭಟನೆ

Update: 2021-11-17 13:03 GMT

ಉಡುಪಿ, ನ.17: ರಾಜ್ಯದ 23 ಜಿಲ್ಲೆಗಳ 122 ಸರಕಾರಿ ಆಸ್ಪತ್ರೆಯ ಡಯಾ ಲಿಸೀಸ್ ಘಟಕಗಳಲ್ಲಿ ಇರುವ ಅವ್ಯವಸ್ಥೆಗಳನ್ನು ಕೂಡಲೇ ಸರಿಪಡಿಸುವಂತೆ ಹಾಗೂ ಸಿಬ್ಬಂದಿಗಳಿಗೆ ಬಾಕಿ ಇರುವ ವೇತನವನ್ನು ಕೂಡಲೇ ಪಾವತಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣ ಹಾಗೂ ಯುವಶಕ್ತಿ ಕರ್ನಾಟಕ ಉಡುಪಿಯ ಅಜ್ಜರಕಾಡು ಜಿಲ್ಲಾಸ್ಪತ್ರೆಯ ಆವರಣದಲ್ಲಿ ನಡೆಸಿರುವ ಅನಿರ್ದಿಷ್ಟಾವಧಿ ಹಾಗೂ ಅಹೋರಾತ್ರಿ ಧರಣಿಯ ಎರಡನೇ ದಿನವಾದ ಇಂದು ಧರಣಿ ನಿರತರು ಬೂಟ್ ಪಾಲಿಷ್ ನಡೆಸುವ ಮೂಲಕ ಪ್ರತಿಭಟಿಸಿದರು.

ಬುಧವಾರ ಪ್ರತಿಭಟನಕಾರರು ಬೂಟ್ ಪಾಲಿಷ್ ಮಾಡಿ ಹಣ ಸಂಗ್ರಹಿ ಸಿದ್ದು, ಅದನ್ನು ಸರಕಾರಕ್ಕೆ ದೇಣಿಗೆಯ ರೂಪದಲ್ಲಿ ನೀಡುವುದಾಗಿ ಪ್ರಕಟಿಸಿದರು. ಬೂಟ್‌ಪಾಲಿಷ್‌ಗೆ ಸಂಘಟನೆಯ ಪದಾಧಿಕಾರಿಯೊಬ್ಬರು ಮೊದಲಾಗಿ ಮುಂದೆ ಬಂದರು. ಶೂ ಪಾಲಿಷ್‌ಗೆ ಅವರು 50ರೂ. ಪಾವತಿಸಿದರು. ಸರಕಾರಿ ಆಸ್ಪತ್ರೆಗೆ ಚಪ್ಪಲಿ ತೊಟ್ಟ ಬಡವರೇ ಹೆಚ್ಚು ಬರುತ್ತಿರುವುದರಿಂದ ಅವರಿಂದ ಚಪ್ಪಲಿಯನ್ನು ಪಡೆದು ಸಾಂಕೇತಿಕವಾಗಿ ಬಟ್ಟೆಯಿಂದ ಒರೆಸಲಾಯಿತು.

ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಅನ್ಸಾರ್ ಅಹಮ್ಮದ್ ಮಾತನಾಡಿ, ರಾಜ್ಯ ಸರಕಾರ ಸರಕಾರಿ ಆಸ್ಪತ್ರೆಗಳ ಡಯಾಲಿಸಿಸ್ ವ್ಯವಸ್ಥೆಯ ಸುಧಾರಣೆಗೆ ಗಮನ ಹರಿಸದೆ ನಿರ್ಲಕ್ಷ್ಯ ವಹಿಸಿದೆ, ಬೊಕ್ಕಸದಲ್ಲಿ ದುಡ್ಡಿಲ್ಲ. ಹೀಗಾಗಿ ಬೂಟ್ ಪಾಲಿಷ್ ಮಾಡಿ ಸಂಗ್ರಹಿಸಿದ ಜನರ ದುಡ್ಡನ್ನು ರಾಜ್ಯ ಸರಕಾರಕ್ಕೆ ಅರ್ಪಿಸಲಿದ್ದೇವೆ ಎಂದರು.

ಯುವಶಕ್ತಿ ರಾಜ್ಯಾಧ್ಯಕ್ಷ ಪ್ರಮೋದ್ ಉಚ್ಚಿಲ ಮಾತನಾಡಿ, ತೆರಿಗೆ ಹಣದಿಂದ ಜನರ ಆರೋಗ್ಯ ರಕ್ಷಣೆ ಸರಕಾರಕ್ಕೆ ಸಾಧ್ಯವಾಗದಿರುವ ದುರ್ಗತಿ ನಾಚಿಕೆಗೇಡು. ಬೇಡಿಕೆ ಈಡೇರುವ ತನಕ ಧರಣಿ ಮುಂದುವರಿಯಲಿದೆ. ನ. 18ರಂದು ಬೆಳಗ್ಗೆ 10:30ಕ್ಕೆ ಇಬ್ಬರ ಕೇಶಮುಂಡನ ಮಾಡಿ ಸರಕಾರಕ್ಕೆ ಕೂದಲು ಕಳುಹಿಸಲಾಗುವುದು ಎಂದರು.

23 ಜಿಲ್ಲೆಗಳ ಸರಕಾರಿ ಆಸ್ಪತ್ರೆಗಳ ಡಯಾಲಿಸೀಸ್ ಘಟಕದ ಸೇವೆಯ ಗುತ್ತಿಗೆ ಯನ್ನು ಬಿಆರ್‌ಎಸ್ ಕಂಪೆನಿ ವಹಿಸಿಕೊಂಡಿದೆ. ನಷ್ಟದಲ್ಲಿರುವ ಬಿಆರ್‌ಎಸ್ ಕಂಪೆನಿಯು ಘಟಕದ ಸಾವಿರಾರು ಸಿಬ್ಬಂದಿಗಳಿಗೆ ಕಳೆದ ಐದು ತಿಂಗಳುಗಳಿಂದ ವೇತನ ಪಾವತಿ ಮಾಡಿಲ್ಲ. ಅಲ್ಲದೆ ಕೇಂದ್ರಗಳಿಗೆ ಅಗತ್ಯ ಇರುವ ಸಾಮಗ್ರಿಗಳು ಖಾಲಿಯಾಗಿವೆ. ಇದರಿಂದ ಈ ಘಟಕಗಳನ್ನು ನಂಬಿರುವ ಬಡವರು ತೀವ್ರ ತೊಂದರೆ ಅನುಭವಿಸುವಂತಾಗಿದೆ ಎಂದು ಕರವೇ ಜಿಲ್ಲಾಧ್ಯಕ್ಷ ಅನ್ಸಾರ್ ಅಹ್ಮದ್ ಆರೋಪಿಸಿದರು.

ಸಂಘಟನೆ ಪ್ರಮುಖರಾದ ಯೋಗೀಶ್ ಕುತ್ಪಾಡಿ, ಸುಧೀರ್ ಪೂಜಾರಿ, ನಾಸಿರ್, ಶಾಹಿಲ್ ರಹಮತುಲ್ಲಾ, ಗಣೇಶ್ ಕುಮಾರ್, ಮೊಹಮ್ಮದ್, ಹನೀಫ್, ಖಲೀಲ್ ಉಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News