ಶುಕ್ರವಾರ ಕಾಣಿಸಲಿದೆ ಶತಮಾನದ ಸುದೀರ್ಘ ಅವಧಿಯ ಪಾರ್ಶ್ವ ಚಂದ್ರಗ್ರಹಣ

Update: 2021-11-18 15:56 GMT

 ಉಡುಪಿ, ನ.18: ಈಗಾಗಲೇ ಘಟಿಸಿರುವ ಹಲವಾರು ಖಗೋಳ ವಿದ್ಯಮಾನಗಳನ್ನು ಹವ್ಯಾಸಿ ಖಗೋಳ ವೀಕ್ಷಕರು 2021ರಲ್ಲಿ ಕಂಡಿದ್ದಾರೆ. ಇದರೊಂದಿಗೆ ನಾಳೆ (ನ.19 ಶುಕ್ರವಾರ) ಚಂದ್ರನು ಭೂಮಿಯ ಹಿಂದಿನಿಂದ ಚಲಿಸುವುದರಿಂದ, ಬೆಳಗ್ಗೆ 11:32ರಿಂದ ಸಂಜೆ 05:33ರವರೆಗೆ ಸುದೀರ್ಘ ಅವಧಿಯ ಚಂದ್ರ ಗ್ರಹಣ ಸಂಭಸಲಿದೆ. ಇದು ಈ ವಷರ್ದ ಕೊನೆಯ ಚಂದ್ರ ಗ್ರಹಣ ವಾಗಿ್ದು, ಅತೀ ವಿಶೇಷ ವಿದ್ಯಮಾನವಾಗಿದೆ.

ಚಂದ್ರನು ಪ್ರತಿ ತಿಂಗಳು ಭೂಮಿಯ ಹಿಂದೆ ಹಾದುಹೋಗುತ್ತಾನೆ. ಮತ್ತು ಈ ಸಮಯದಲ್ಲಿ, ಭೂಮಿಯ ಕತ್ತಲಿನ ಭಾಗದಲ್ಲಿ ಸೂರ್ಯನ ಬೆಳಕಿನಿಂದ ಸಂಪೂರ್ಣವಾಗಿ ಪ್ರಕಾಶಿಸಲ್ಪಟ್ಟ ಚಂದ್ರನನ್ನು ನೋಡಬಹುದು. ಇದನ್ನೇ ನಾವು ಹುಣ್ಣಿಮೆ ಎನ್ನುತ್ತೇವೆ. ಇಂತಹ ಹುಣ್ಣಿಮೆ ಪ್ರತೀ ತಿಂಗಳು ಸಂಭವಿಸಿದರೂ ಸಹ ಪ್ರತೀ ಹುಣ್ಣಿಮೆಯಂದು ಗ್ರಹಣವಾಗುವುದಿಲ್ಲ.

ಆಗಸದಲ್ಲಿ ಸೂರ್ಯನ ಚಲನೆಯನ್ನು ವೃತ್ತಾಕಾರದಲ್ಲಿ ಊಹಿಸಿದರೆ, ಚಂದ್ರನ ಚಲನೆಯನ್ನು ಇದೇ ರೀತಿ ಕಲ್ಪಿಸಿಕೊಳ್ಳಬಹುದು. ಈ ವೃತ್ತಗಳು (ಸೂರ್ಯ ಹಾಗೂ ಚಂದ್ರರ ಚಲನೆಯ ಪಥ) ಭೂುಯನ್ನು ಕೇಂದ್ರವಾಗಿರಿಸಿಕೊಂಡು ಸಮತಲಗಳನ್ನು ಸ್ಟೃಷ್ಟಿಸಿವೆ. ಸೂರ್ಯನ ಸಮತಲಕ್ಕೆ ಹೋಲಿಸಿದರೆ ಚಂದ್ರನ ಸಮತಲವು 5 ಡಿಗ್ರಿ ಕೋನದಲ್ಲಿ ಓರೆಯಾಗಿದೆ. ಇಂತಹ ಸಮತಲಗಳು ಆಕಾಶದಲ್ಲಿ ಎರಡು ಬಿಂದುಗಳಲ್ಲಿ ಸಂಧಿಸುತ್ತವೆ ಮತ್ತು ನಾವು ಅವುಗಳನ್ನು ಖಗೋಳಶಾಸ್ತ್ರದಲ್ಲಿ ನೋಡ್ಸ್ ಎಂದು ಕರೆಯುತ್ತೇವೆ. ಪ್ರಾಚೀನ ಭಾರತೀಯ ಖಗೋಳಶಾಸ್ತ್ರದಲ್ಲಿ ಈ ಬಿಂದುಗಳನ್ನು ರಾಹು ಮತ್ತು ಕೇತು ಎಂದು ಗುರುತಿಸಲಾಗಿದೆ.

ಈ ಸಮತಲಗಳು ಓರೆಯಾಗಿರುವುದರಿಂದ ಸೂರ್ಯ, ಭೂಮಿ ಹಾಗೂ ಚಂದ್ರರು ನೇರವಾದ ರೇಖೆಯಲ್ಲಿರುವುದಿಲ್ಲ. ಈ ಕಾರಣದಿಂದಲೇ ಪ್ರತೀ ಹುಣ್ಣಿಮೆಯಲ್ಲಿ ಗ್ರಹಣ ಸಂಭಸುವುದಿಲ್ಲ. ಆದರೂ, ಚಂದ್ರನು ರಾಹು ಅಥವಾ ಕೇತು ಬಿಂದುನಲ್ಲಿದ್ದಾಗ ಹುಣ್ಣಿಮೆಯಾದರೆ, ಈ ಸಮಯದಲ್ಲಿ ಸೂರ್ಯ- ಚಂದ್ರ-ಭೂಮಿ ಬಹುತೇಕ ನೇರವಾಗಿರುತ್ತಾರೆ.ಇದೇ ವೇಳೆಗೆ ಪೂರ್ಣ ಚಂದ್ರನು ಭೂಮಿಯ ನೆರಳಿನಲ್ಲಿ ಹಾದು ಹೋಗುವಾ ಚಂದ್ರ ಗ್ರಹಣ ಸಂಭವಿಸುತ್ತದೆ.

ಚಂದ್ರನು ಸಂಪೂರ್ಣವಾಗಿ ಭೂಮಿಯ ನೆರಳಿನಿಂದ ಆವೃತಗೊಳ್ಳದೆ ಕೆಲವು ಭಾಗ ಸೂರ್ಯನ ಬೆಳಕಿನಿಂದ ಪ್ರಕಾಶಿಸಲ್ಪಡುತ್ತದೆ. ಇಂತಹ ಗ್ರಹಣವನ್ನು ಪಾರ್ಶ್ವ ಚಂದ್ರ ಗ್ರಹಣ ಎನ್ನುತ್ತೇವೆ. ನ.19ರಂದು, ರಾಹುವಿನ ಸಮೀಪ ವಿರುವ ಚಂದ್ರನು ಬೆಳಿಗ್ಗೆ 11:32ಕ್ಕೆ ಭೂಮಿಯ ನೆರಳನ್ನು ಪ್ರವೇಶಿಸಿ ಅಪರಾಹ್ನ 2:42ಕ್ಕೆ ಗರಿಷ್ಠ ಗ್ರಹಣವನ್ನು ತಲುಪುತ್ತಾನೆ. ಈ ಸಮಯದಲ್ಲಿ ಭೂಮಿಯಿಂದ ಚದುರಿದ ಬೆಳಕಿನಿಂದ ಚಂದ್ರನು ಕೆಂಪು ಬಣ್ಣದಲ್ಲಿ ಕಾಣಿಸಿಕೊಳ್ಳುತ್ತಾನೆ ಹಾಗೂ ಚಂದ್ರನ ಶೇ.99ರಷ್ಟು ಭಾಗ ಭೂಮಿಯ ನೆರಳಿನಿಂದ ಆವೃತವಾಗಿರುತ್ತದೆ. ಅಂತಿಮವಾಗಿ ಚಂದ್ರ ಸಂಜೆ 5:33ಕ್ಕೆ ಭೂಮಿಯ ನೆರಳಿನಿಂದ ಮುಕ್ತನಾಗುತ್ತಾನೆ.

ಈ ಗ್ರಹಣವು ಚಂದ್ರ ಭೂಮಿಯಿಂದ ಅತೀ ದೂರದಲ್ಲಿರುವ ಅಪಭೂ ಬಿಂದುನಲ್ಲಿದ್ದಾಗ ಸಂಭವಿಸುವುದರಿಂದ ದಿನದ ಚಂದ್ರನು ಸ್ವಲ್ಪ ಸಣ್ಣದಾಗಿ ಗೋಚರಿಸುತ್ತಾನೆ. ಭೂಮಿ ಹಾಗೂ ಚಂದ್ರನ ಅಂತರದಿಂದ ಸುಮಾರು 6 ಗಂಟೆ 22 ನಿಮಿಷಗಳ ಕಾಲ ನಾಳಿನ ಗ್ರಹಣ ಗೋಚರಿಸುತ್ತದೆ. 1000 ವರ್ಷಗಳಿಗೊಮ್ಮೆ ಗೋಚರಿಸುವ ಇಂತಹ ’ದೀರ್ಘ’ ಗ್ರಹಣವನ್ನು ಇನ್ನೊಮ್ಮೆ ನೋಡಬೇಕಿದ್ದರೆ 2669ರವರೆಗೆ ಕಾಯಬೇಕಾಗುತ್ತದೆ.

ದುರದೃಷ್ಟವಶಾತ್, ಭಾರತದಲ್ಲಿ ಈ ಗ್ರಹಣ ಗೋಚರಿಸುವುದಿಲ್ಲ. ಆದರೆ ಅಮೆರಿಕ, ಪಶ್ಚಿಮ ಯುರೋಪ್ ಮತ್ತು ಪೂರ್ವ ಏಷ್ಯಾ, ಓಷಿಯಾನಿಯಾ ಪ್ರದೇಶಗಳಲ್ಲಿ ಇದು ಗೋಚರಿಸುತ್ತದೆ. ಚಂದ್ರನು ಭೂಮಿಯ ನೆರಳಿನಿಂದ ನಿರ್ಗಮಿಸುತಿದ್ದಂತೆ ಭಾರತದ ಈಶಾನ್ಯ ಭಾಗದ ರಾಜ್ಯಗಳು ಚಂದ್ರೋದಯಕ್ಕೆ ಸಾಕ್ಷಿಯಾಗುತ್ತವೆ ಎಂದು ಉಡುಪಿಯ ಪೂರ್ಣಪ್ರಜ್ಞ ಹವ್ಯಾಸಿ ಖಗೋಳ ವೀಕ್ಷಕರ ಸಂಘ ಪ್ರಕಟಣೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News