ದ.ಕ.ಜಿಲ್ಲೆಯಲ್ಲಿ ಗಗನಕ್ಕೇರಿದ ತರಕಾರಿ ಬೆಲೆ

Update: 2021-11-18 17:24 GMT

ಮಂಗಳೂರು, ನ.18: ದಿನದಿಂದ ದಿನಕ್ಕೆ ಏರುತ್ತಿರುವ ದಿನಸಿ ಸಾಮಗ್ರಿಗಳು ಮತ್ತು ಅಡುಗೆ ಅನಿಲ ದರ ಏರಿಕೆಯ ಮಧ್ಯೆ ತರಕಾರಿಗಳ ಬೆಲೆಯೂ ಗಗನಕ್ಕೇರಿದ್ದು, ಜನಸಾಮಾನ್ಯರು ಕಂಗಾಲಾಗಿದ್ದಾರೆ.

ಕಳೆದ ಒಂದು ತಿಂಗಳಿನಿಂದ ಒಂದು ಕೆ.ಜಿ. ಟೊಮೆಟೋಗೆ 55ರಿಂದ 60 ರೂ. ಇದ್ದರೆ ಗುರುವಾರ ದಿಢೀರ್ ಆಗಿ 90ರಿಂದ 100 ರೂ. ಏರಿಕೆಯಾಗಿದೆ. ಗ್ರಾಮಾಂತರ ಪ್ರದೇಶದ ಕೆಲವು ಕಡೆ ಟೊಮೆಟೋ ದರ ನೂರರ ಗಡಿ ದಾಟಿದೆ ಎಂದು ತಿಳಿದು ಬಂದಿದೆ.

ನುಗ್ಗೆ 1 ಕೆಜಿಗೆ ರಖಂ ದರ 200 ರೂ. ಇದ್ದರೆ ಚಿಲ್ಲರೆ ದರ 250 ರೂ. ಆಗಿದೆ. ಅದಲ್ಲದೆ ಕ್ಯಾರೆಟ್ 80ರಿಂದ 120 ರೂ.ಗೆ ಏರಿದೆ. ಇನ್ನು ಸೌತೆ, ಮುಳ್ಳುಸೌತೆ, ಬೀನ್ಸ್, ಬಟಾಟೆ, ಬೀಟ್‌ರೋಟ್, ಬದನೆ ಹೀಗೆ ಎಲ್ಲಾ ತರಕಾರಿಗಳ ಬೆಲೆಯೂ ನಿರೀಕ್ಷೆಗೂ ಮೀರಿ ಏರಿಕೆಯಾಗಿದೆ. ಈ ಮಧ್ಯೆ ಈರುಳ್ಳಿಯ ದರವೂ ಕಣ್ಣೀರಿಳಿಸುತ್ತಿದೆ. ಗುರುವಾರ ಟೊಮೆಟೋ ದರ 100ರ ಗಡಿ ದಾಟಿದ್ದರೆ, ಈರುಳ್ಳಿಯ ದರವು 50 ದಾಟಿದೆ. ಇದು ಸಸ್ಯಹಾರಿಗಳಿಗೆ ಮಾತ್ರವಲ್ಲ ಮಾಂಸಹಾರಿಗಳಿಗೂ ಸಮಸ್ಯೆಯಾಗಿ ಪರಿಣಮಿಸಿದೆ. ಮೊದಲೇ ಅಗತ್ಯ ವಸ್ತುಗಳ ಸಹಿತ ದಿನಬಳಕೆಯ ಎಲ್ಲಾ ಸಾಮಗ್ರಿಗಳ ಬೆಲೆ ಏರಿಕೆಯಿಂದ ತತ್ತರಿಸಿದ್ದ ಜನಸಾಮಾನ್ಯರು ಟೊಮೆಟೋ, ಈರುಳ್ಳಿ ಸಹಿತ ತರಕಾರಿ ಬೆಲೆಗಳ ಏರಿಕೆಯಿಂದ ತೀವ್ರವಾಗಿ ತತ್ತರಿಸಿದ್ದಾರೆ. ಒಂದೊಂದು ಕೆಜಿ ಪಡೆದುಕೊಳ್ಳುತ್ತಿದ್ದವರು ಕಾಲು/ಅರ್ಧ ಕೆಜಿ ತರಕಾರಿ ಪಡೆಯುವ ಸ್ಥಿತಿಗೆ ತಲುಪಿದ್ದಾರೆ.

ಅಕಾಲಿಕ ಮಳೆಯಿಂದಾಗಿ ತರಕಾರಿಗಳ ಬೆಲೆ ಏರಿಕೆಯಾಗಿದೆ ಎಂದು ಹೇಳಲಾಗುತ್ತಿದೆಯಾದರೂ ಕೂಡ ವಾಸ್ತವ ವಿಚಾರವು ಬೇರೆಯೇ ಇದೆ ಎಂದು ಮಂಗಳೂರಿನ ತರಕಾರಿ ವ್ಯಾಪಾರಿಗಳು ಅಭಿಪ್ರಾಯಪಡುತ್ತಿದ್ದಾರೆ. ತರಕಾರಿ ಸಹಿತ ಅಗತ್ಯ ಸಾಮಗ್ರಿಗಳ ಬೆಲೆ ನಿಯಂತ್ರಣವು ಎಪಿಎಂಸಿ ಕೈಯಲ್ಲಿಲ್ಲದ ಕಾರಣ ಮುಂದಿನ ದಿನಗಳಲ್ಲಿ ತರಕಾರಿ ಬೆಳೆಗಳ ದರವು ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ನಿರೀಕ್ಷಿತ ಬೆಲೆ ಸಿಗದ ಕಾರಣ ರೈತರು ತರಕಾರಿಗಳನ್ನು ಬೆಳೆಯಲು ಹೆಚ್ಚು ಆಸಕ್ತಿ ವಹಿಸುತ್ತಿಲ್ಲ. ಇದನ್ನು ಅರಿತುಕೊಂಡ ಮಧ್ಯವರ್ತಿಗಳು ತರಕಾರಿ ಸಹಿತ ಅಗತ್ಯ ವಸ್ತುಗಳನ್ನು ದಾಸ್ತಾನು ಇರಿಸಿ ಕೃತಕ ಅಭಾವ ಸೃಷ್ಟಿಸುತ್ತಾರೆ ಎನ್ನಲಾಗಿದೆ. ಹಾಗಾಗಿ ತಿಂಗಳ ಹಿಂದೆ ಏರಿಕೆಯಾಗಿದ್ದ ತರಕಾರಿ ವಸ್ತುಗಳ ಬೆಲೆಯು ಗಗನಕ್ಕೇರುತ್ತಿದೆಯೇ ವಿನಃ ಇಳಿಕೆಯಾಗುತ್ತಿಲ್ಲ. ಅದರ ನೇರ ಪರಿಣಾಮವು ಜನಸಾಮಾನ್ಯರ ಮೇಲಾಗುತ್ತಿದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.

ಹಾಸನ, ಚಿಕ್ಕಮಗಳೂರು, ಕೋಲಾರ ಜಿಲ್ಲೆಗಳಿಂದ ಮಂಗಳೂರಿಗೆ ತರಕಾರಿ ವಸ್ತುಗಳು ಬರುತ್ತಿವೆ. ಎಷ್ಟೇ ಕಷ್ಟಪಟ್ಟು ತರಕಾರಿ ಬೆಳೆದರೂ ಕೂಡ ಬೆಂಬಲ ಬೆಲೆ ಸಿಗದ ಕಾರಣ ರೈತರು ತರಕಾರಿ ಬೆಳೆಯಲು ಆಸಕ್ತಿ ವಹಿಸುತ್ತಿಲ್ಲ. ಇದರಿಂದ ಸಹಜವಾಗಿ ತರಕಾರಿಗಳ ಬೆಲೆಯು ಏರಿಕೆಯಾಗಿದೆ. ಹಾಸನ, ಚಿಕ್ಕಮಗಳೂರು ಮತ್ತಿತರ ಕಡೆಗಳಿಂದ ನಾನು ಈ ಹಿಂದೆ 15 ಕೆ.ಜಿ. ತೂಕದ ಗೋಣಿಚೀಲದಲ್ಲಿ ಟೊಮೆಟೋವನ್ನು ಕೇವಲ 30 ರೂ.ಗೆ ಖರೀದಿಸುತ್ತಿದ್ದೆ. ಇದೀಗ 1 ಕೆಜಿ ಟೊಮೆಟೋಗೆ 75ರಿಂದ 80 ರೂ. ಆಗಿದೆ. ಅಂದರೆ 1 ಗೋಣಿಚೀಲದ ಟೊಮೆಟೋ ದರ 1 ಸಾವಿರದ ಗಡಿ ದಾಟಿದೆ. ಅಷ್ಟು ಕೊಟ್ಟರೂ ಟೊಮೆಟೋ ಸಿಗದಂತಹ ಪರಿಸ್ಥಿತಿ ಇದೆ. ಮಹಾರಾಷ್ಟ್ರದ ನಾಸಿಕ್‌ನಿಂದ ಟೊಮೆಟೋವನ್ನು ಹೇರಳ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳಲಾಗುತ್ತಿದೆ. ಆದರೆ ಮಧ್ಯವರ್ತಿಗಳ ಹಾವಳಿಯಿಂದ ಗ್ರಾಹಕರಿಗೆ ಹೆಚ್ಚಿನ ದರಕ್ಕೆ ಮಾರಾಟ ಮಾಡುವ ಜಾಲ ಸಕ್ರಿಯವಾಗಿದೆ ಎಂದು ತರಕಾರಿ ವ್ಯಾಪಾರಿ ಇಸ್ಮಾಯೀಲ್ ಎಂಬವರು ಆರೋಪಿಸುತ್ತಾರೆ.

ಕೋಲಾರ, ಚಿಕ್ಕಮಗಳೂರು ಮತ್ತಿತರ ಕಡೆ ಬೆಳೆದ ಟೊಮೆಟೋ ಸಹಿತ ಉತ್ತಮ ಗುಣಮಟ್ಟದ ತರಕಾರಿಗಳನ್ನು ಉತ್ತರ ಭಾರತ ಹಾಗೂ ವಿದೇಶಕ್ಕೆ ರಫ್ತು ಮಾಡಲಾಗುತ್ತಿದೆ. ಮಂಗಳೂರಿಗೆ ಆಮದು ಮಾಡಿಕೊಳ್ಳಲಾಗುವ ಟೊಮೆಟೋ ಮತ್ತಿತರ ತರಕಾರಿಗಳು ಎರಡನೆಯ ದರ್ಜೆಯದ್ದಾಗಿದೆ. ಹಾಗಾಗಿ ಹೆಚ್ಚು ಬೆಲೆ ಕೊಟ್ಟು ಖರೀದಿಸಿದರೂ ಒಂದೆರೆಡು ದಿನದಲ್ಲಿ ಕೊಳೆತು ಹೋಗುವ ಪ್ರಮೇಯವೇ ಹೆಚ್ಚು ಎಂದು ಮಂಗಳೂರಿನ ತರಕಾರಿ ವ್ಯಾಪಾರಿಯೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

''ತರಕಾರಿ ಸಹಿತ ಅಗತ್ಯ ವಸ್ತುಗಳ ಬೆಳೆಗಳ ಮೇಲೆ ಎಪಿಎಂಸಿಗೆ ಯಾವುದೇ ನಿಯಂತ್ರಣವಿಲ್ಲ. ಮಧ್ಯವರ್ತಿಗಳ ಹಾವಳಿಯು ಮಿತಿ ಮೀರಿದೆ. ರಾಜ್ಯದಲ್ಲೀಗ ತರಕಾರಿ ವಸ್ತುಗಳ ಕೃತಕ ಅಭಾವ ಸೃಷ್ಟಿಸಲಾಗಿದೆ. ಸಹಜವಾಗಿ ಬೆಲೆಯು ಗಗನಕ್ಕೇರಿದೆ. ಬೆಲೆ ಏರಿಕೆಯನ್ನು ತಡೆಗಟ್ಟಲು ಮತ್ತು ಸ್ಥಳೀಯರ ಬೇಡಿಕೆಯನ್ನು ಈಡೇರಿಸಲು ಹೊರ ರಾಜ್ಯ ಮತ್ತು ವಿದೇಶಕ್ಕೆ ರಫ್ತಾಗುವ ತರಕಾರಿಗಳನ್ನು ನಿಲ್ಲಿಸುವುದೊಂದೇ ದಾರಿ. ಇಲ್ಲದಿದ್ದರೆ ತರಕಾರಿಗಳ ಬೆಲೆ ಮತ್ತಷ್ಟು ಏರಿಕೆಯಾಗುವುದರಲ್ಲಿ ಸಂಶಯವಿಲ್ಲ''.
- ಬಿ.ಕೆ. ಇಮ್ತಿಯಾಝ್, ಪ್ರಧಾನ ಕಾರ್ಯದರ್ಶಿ,
ಮಂಗಳೂರು ಎಪಿಎಂಸಿ ವರ್ತಕರ ಸಂಘ

Writer - ಹಂಝ ಮಲಾರ್

contributor

Editor - ಹಂಝ ಮಲಾರ್

contributor

Similar News