ಈ ವರ್ಷ ರೈತರಿಗೆ 20,810 ಕೋಟಿ ರೂ. ಸಾಲ ವಿತರಣೆ ಗುರಿ: ಸಹಕಾರಿ ಸಚಿವ ಸೋಮಶೇಖರ್

Update: 2021-11-19 16:28 GMT

ಉಡುಪಿ, ನ.19: ಈ ವರ್ಷ ರಾಜ್ಯದಲ್ಲಿ 30 ಲಕ್ಷ ರೈತರಿಗೆ ಒಟ್ಟು 20,810 ಕೋಟಿ ರೂ.ಕಡಿಮೆ ಬಡ್ಡಿಯ ಸಾಲ ವಿತರಿಸುವ ಗುರಿಯನ್ನು ಇಲಾಖೆ ವತಿಯಿಂದ ಹಾಕಿಕೊಳ್ಳಲಾಗಿದ್ದು, ಇದುವರೆಗೆ 14.39ಲಕ್ಷ ರೈತರಿಗೆ 10,591 ಕೋಟಿ ರೂ.ಸಾಲವನ್ನು ವಿತರಿಸಲಾಗಿದೆ ಎಂದು ರಾಜ್ಯ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ.

ಉಡುಪಿಯ ಪುರಭವನದಲ್ಲಿ ಶುಕ್ರವಾರ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಅಧ್ಯಕ್ಷತೆಯಲ್ಲಿ ನಡೆದ ಜನಸ್ವರಾಜ್ ಸಮಾವೇಶದಲ್ಲಿ ಅವರು ಸಭೆಯನ್ನುದ್ದೇಶಿಸಿ ಮಾತನಾಡುತಿದ್ದರು. ಜಿಲ್ಲೆಯ ಬಿಜೆಪಿಯ ಆರು ಮಂಡಲಗಳಿಂದ ಆಯ್ದ ಆರು ಮಂದಿ ಅತ್ಯಂತ ಹಿರಿಯ ಗ್ರಾಪಂ ಅಧ್ಯಕ್ಷರು ಸೇರಿ ದೀಪಬೆಳಗಿಸುವ ಮೂಲಕ ಸಮಾವೇಶವನ್ನು ಉದ್ಘಾಟಿಸಿದರು.

ಉಡುಪಿ ಜಿಲ್ಲೆಯಲ್ಲಿ ಇದುವರೆಗೆ 84,983 ರೈತರಿಗೆ 812 ಕೋಟಿ ರೂ. ಸಾಲವನ್ನು ಇಲಾಖೆ ವಿತರಿಸಿದೆ ಎಂದ ಸಚಿವರು, ರೈತರಿಗೆ ಸಕಾಲದಲ್ಲಿ ಸಾಲ ನೀಡಲು ಸಹಕಾರಿ ಸಂಸ್ಥೆಗಳು ಆದ್ಯತೆ ನೀಡಬೇಕು. ಅಲ್ಲದೇ ಇಲಾಖೆಯ ಅಧಿಕಾರಿಗಳ ವಿರುದ್ಧವೂ ವಿಳಂಬ ನೀತಿಯ ಬಗ್ಗೆ ಹಲವು ದೂರುಗಳು ಕೇಳಿಬಂದಿದ್ದು, ಇದನ್ನು ನಾವು ಎಷ್ಟು ಮಾತ್ರಕ್ಕೂ ಸಹಿಸುವುದಿಲ್ಲ ಎಂದು ಎಚ್ಚರಿಸಿದರು.

ನಾನು ಸಚಿವನಾಗಿ ಅಧಿಕಾರ ಸ್ವೀಕರಿಸಿದ ಮೇಲೆ ಇಲಾಖೆಯಲ್ಲಿ ಅನೇಕ ಬದಲಾವಣೆ ಮಾಡಿದ್ದೇನೆ. ಯುಪಿಎ ಸರಕಾರದ ಕೆಲವು ವಿವಾದಿತ ಕಾಯ್ದೆಗಳನ್ನು ಬದಲಿಸಿ, ಸಹಕಾರಿಗಳಿಗೆ ಅನುಕೂಲವಾಗುವಂತೆ ಮಾಡಿದ್ದೇನೆ ಎಂದರು.

ಮಿನಿ ಸಮರ-ಶೋಭಾ: ಡಿ.10ರ ವಿಧಾನಪರಿಷತ್ ಚುನಾವಣೆ ರಾಜ್ಯದ ಮಿನಿ ಸಮರ. ಇದರಲ್ಲಿ ವಿಧಾನ ಪರಿಷತ್ತಿನ ಸಭಾ ನಾಯಕರಾಗಿರುವ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಮತ್ತೆ ಗೆಲ್ಲಿಸಿ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಜಿಲ್ಲೆಯ 1400ಕ್ಕೂ ಅಧಿಕ ಬಿಜೆಪಿ ಗ್ರಾಪಂ ಸದಸ್ಯರು ಉಪಸ್ಥಿತರಿದ್ದ ಸಭೆಯಲ್ಲಿ ಮನವಿ ಮಾಡಿದರು.

ಸರಕಾರದ ಯಾವುದೇ ಮಸೂದೆ ಮಂಜೂರಾಗಲು ವಿಧಾನಪರಿಷತ್‌ನಲ್ಲೂ ಬಹುಮತ ಬೇಕು. ವಿಧಾನಸಭೆಯಲ್ಲಿ ಮಂಜೂರಾದ ಗೋಹತ್ಯಾ ಬಿಲ್ ವಿಧಾನಪರಿಷತ್‌ನಲ್ಲಿ ಮಂಜೂರಾಗಲು ಕಷ್ಟವಾಯಿತು. ಆದ್ದರಿಂದ ನಾವು ಹೆಚ್ಚು ಸ್ಥಾನ ಗೆಲ್ಲಬೇಕಿದೆ ಎಂದರು.

ರಾಜ್ಯ ಇಂಧನ ಮತ್ತು ಕನ್ನಡ ಹಾಗೂ ಸಂಸ್ಕೃತಿ ಸಚಿವ ವಿ.ಸುನೀಲ್‌ ಕುಮಾರ್ ಮಾತನಾಡಿ, ಡಿ.10ರಂದು 25 ವಿಧಾನಪರಿಷತ್ ಸ್ಥಾನಗಳಿಗೆ ನಡೆಯುವ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿ ನಾಲ್ಕು ತಂಡಗಳಾಗಿ ಜನಸ್ವರಾಜ್ ಪ್ರವಾಸ ಕೈಗೊಂಡಿದ್ದು, ಪರಿಷತ್‌ನಲ್ಲಿ ನಮಗೆ ಬಹುಮುಖ ಪಡೆಯುವ ಗುರಿ ಹೊಂದಿದ್ದೇವೆ ಎಂದರು. ಉಡುಪಿ-ದಕ್ಷಿಣಕನ್ನಡದಲ್ಲಿ ಈಗಾಗಲೇ ಮೂರು ಬಾರಿ ಗೆದ್ದಿರುವ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಮತ್ತೆ ಬಹುಮತದಿಂದ ಗೆಲ್ಲಿಸುವಂತೆ ಮನವಿ ಮಾಡಿದರು.

ಬಂದರು ಮತ್ತು ಮೀನುಗಾರಿಕಾ ಸಚಿವ ಎಸ್.ಅಂಗಾರ, ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಹಾಗೂ ಕೋಟ ಶ್ರೀನಿವಾಸ ಪೂಜಾರಿ ಅವರೂ ಸಭೆಯನ್ನುದ್ದೇಶಿ ಮಾತನಾಡಿ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಪ್ರಥಮ ಪ್ರಾಶಸ್ತ್ಯದ ಮತಗಳನ್ನು ಹಾಕುವಂತೆ ಮವಿ ಮಾಡಿದರು.

ಸಭೆಯಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣ, ರಾಜ್ಯ ಉಪಾಧ್ಯಕ್ಷ ಹಾಗೂ ಜನಸ್ವರಾಜ್‌ನ ಸಂಚಾಲಕ ಎಂ.ಶಂಕರಪ್ಪ, ರಾಜ್ಯ ಕಾರ್ಯದರ್ಶಿ ವಿನಯ್ ಬಿದರೆ, ಶಾಸಕರಾದ ಬಿ.ಎಂ. ಸುಕುಮಾರ ಶೆಟ್ಟಿ, ಉಮಾನಾಥ್ ಕೋಟ್ಯಾನ್, ಕೆ.ರಘುಪತಿ ಭಟ್, ಲಾಲಾಜಿ ಆರ್. ಮೆಂಡನ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಮಂಗಳೂರು ವಿಭಾಗ ಪ್ರಭಾರಿ ಉದಯ ಕುಮಾರ್ ಶೆಟ್ಟಿ, ಒಬಿಸಿ ಮೋರ್ಚಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್ಪಾಲ್ ಸುವರ್ಣ, ಉಡುಪಿ ನಗರಸಭಾ ಅಧ್ಯಕ್ಷೆ ಸುಮಿತ್ರಾ ನಾಯಕ್ ಮುಂತಾದವರು ಉಪಸ್ಥಿತರಿದ್ದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಸದಾನಂದ ಉಪ್ಪಿನಕುದ್ರು ಅತಿಥಿಗಳನ್ನು ಸ್ವಾಗತಿಸಿದರೆ, ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕುತ್ಯಾರು ನವೀ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷರ ವಜಾಕ್ಕೆ ನೋಟೀಸು

ಈಗ ಮಂಗಳೂರಿನಿಂದ ಕಾರ್ಯನಿರ್ವಹಿಸುತ್ತಿರುವ ಎಸ್‌ಡಿಸಿಸಿ ಬ್ಯಾಂಕ್‌ನ್ನು ಇಬ್ಭಾಗಿಸಿ ಉಡುಪಿಗೆ ಪ್ರತ್ಯೇಕ ಡಿಸಿಸಿ ಬ್ಯಾಂಕ್ ಬೇಕೆಂದು ಬೇಡಿಕೆ ಇದ್ದು, ಅದು ಪರಿಶೀಲನೆಯಲ್ಲಿದೆ. ವಿಧಾನಪರಿಷತ್ ಚುನಾವಣೆ ಬಳಿಕ ಎಲ್ಲಾ ಜನಪ್ರತಿನಿಧಿಗಳ ಸಲಹೆ ಪಡೆದು ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದರು.

ಅಲ್ಲದೇ ನವೋದಯ ಚಾರಿಟೇಬಲ್ ಟ್ರಸ್ಟ್ ಗೆ ಡಿಸಿಸಿ ಬ್ಯಾಂಕಿನಿಂದ 19 ಲಕ್ಷ ರೂ. ಹಣ ವರ್ಗಾವಣೆಯಾಗಿದ್ದು, ಬ್ಯಾಂಕಿನ ಶಾಖೆಯನ್ನು ಇದೇ ಟ್ರಸ್ಟಿನ ಕಟ್ಟಡದಲ್ಲಿ ನಡೆಸುವುದು ಕಾನೂನು ಬಾಹಿರವಾಗಿದ್ದು, ಇದಕ್ಕಾಗಿ 29ಸಿ ಅಡಿ ಸಹಕಾರಿ ಇಲಾಖೆ ಮಂಗಳೂರು ಡಿಸಿಸಿ ಬ್ಯಾಂಕ್ ಅಧ್ಯಕ್ಷರ ವಜಾಕ್ಕೆ ನೋಟಿಸ್ ಕೊಟ್ಟಿದ್ದೇವೆ ಎಂದರು.

ಅಲ್ಲದೇ ಡಿಸಿಸಿ ಬ್ಯಾಂಕ್ ಅಧ್ಯಕ್ಷರ ವಿರುದ್ಧ ಇನ್ನೂ ಅನೇಕ ಆರೋಪಗಳಿದ್ದು, ಅವುಗಳ ತನಿಖೆಯೂ ನಡೆಯುತ್ತಿದೆ. ವರದಿ ಬಂದ ಬಳಿಕ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಚಿವ ಸೋಮಶೇಖರ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News