ಬಿಟ್ ಕಾಯಿನ್ ಹಗರಣ; ಹಾಲಿ ನ್ಯಾಯಾಧೀಶರ ನೇತೃತ್ವದ ತನಿಖೆಯಾಗಲಿ: ರಮಾನಾಥ ರೈ

Update: 2021-11-20 09:08 GMT

ಮಂಗಳೂರು, ನ. 20: ಬಿಟ್ ಕಾಯಿನ್ ಹಗರಣಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಹಗರಣದಲ್ಲಿ ಕಾಂಗ್ರೆಸ್‌ನವರೂ ಇದ್ದಾರೆ ಎಂದು ಹೇಳುವ ಮೂಲಕ ಪ್ರಕರಣ ನಡೆದಿರುವುದನ್ನು ಒಪ್ಪಿಕೊಂಡಂತಾಗಿದೆ. ಹಾಗಾಗಿ ಪ್ರಕರಣವನ್ನು ಹಾಲಿ ನ್ಯಾಯಾಧೀಶರಿಂದ ತನಿಖೆಗೊಳಪಡಿಸಬೇಕು ಎಂದು ಮಾಜಿ ಸಚಿವ ರಮಾನಾಥ ರೈ ಆಗ್ರಹಿಸಿದ್ದಾರೆ.

ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಅಂತಾರಾಷ್ಟ್ರೀಯ ಹ್ಯಾಕರ್‌ನಿಂದ ನಡೆದಿರುವ ಗಂಭೀರ ಹಗರಣದಲ್ಲಿ ರಾಜಕಾರಣಿಗಳ ಜತೆಗೆ ಅಧಿಕಾರಿಗಳು ಶಾಮೀಲಾಗಿರುವುದಾಗಿ ಆರೋಪಿಸಲಾಗಿದೆ. ಪ್ರಕರಣದಲ್ಲಿ ಯಾರೇ ಇರಲಿ ಉನ್ನತ ಮಟ್ಟದ ತನಿಖೆಯ ಮೂಲಕ ಸತ್ಯಾಂಶ ಹೊರಬರಬೇಕು ಎಂದು ಅವರು ಹೇಳಿದರು.

ಬಿಟ್ ಕಾಯಿನ್ ಹಗರಣದ ಕುರಿತಂತೆ ಪ್ರಧಾನಿಯವರು ನಿರ್ಲಕ್ಷ್ಯ ವಹಿಸುವಂತೆ ಹೇಳಿದ್ದಾರೆಂದು ಮುಖ್ಯಮಂತ್ರಿ ಹೇಳುತ್ತಿರುವುದು ಬೀಸುವ ದೊಣ್ಣೆಯಿಂದ ಪೆಟ್ಟು ತಪ್ಪಿಸಿಕೊಳ್ಳುವ ತಂತ್ರ. ಯಾವುದೇ ಹಗರಣದ ಆರೋಪ ಎದುರಾದಾಗ ತನಿಖೆ ನಡೆಸಿದಂತಹ ಇತಿಹಾಸ ಕಾಂಗ್ರೆಸ್‌ನದ್ದು. ಕೇಂದ್ರದಲ್ಲಿ ಬಿಜೆಪಿ ಸರಕಾರವಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತದಲ್ಲಿದ್ದ ವೇಳೆ 8 ಪ್ರಕರಣಗಳನ್ನು ಸಿಬಿಐಗೆ ವಹಿಸಲಾಗಿತ್ತು. ಇದೀಗ ಬಿಟ್ ಕಾಯಿನ್ ಹಗರಣಕ್ಕೆ ಸಂಬಂಧಿಸಿ ಕೇಂದ್ರದ ಕೆಲವು ವೆಬ್‌ಸೈಟ್‌ಗಳೂ ಹ್ಯಾಕ್ ಆಗಿರುವುದು ಗಂಭೀರ ವಿಷಯ. ಜನಧನ ಖಾತೆ, ಪಿಂಚಣಿ, ಗ್ಯಾಸ್ ಸಬ್ಸಿಡಿ ಖಾತೆಗಳೂ ಹ್ಯಾಕ್ ಆಗಿರುವುದಾಗಿ ಆರೋಪಿಸಲಾಗಿದೆ. ಈ ಬಗ್ಗೆ ರಾಜ್ಯದ ಬಿಜೆಪಿ ಅಧ್ಯಕ್ಷರ ಹೆಸರು ಸುದ್ದಿಯಲ್ಲಿದ್ದರೂ ಅವರು ಈ ಬಗ್ಗೆ ಮಾತನಾಡುತ್ತಿಲ್ಲ. ಪ್ರಭಾವಿ ನಾಯಕರು ಈ ಪ್ರಕರಣದಲ್ಲಿ ಶಾಮೀಲಾಗಿದ್ದಾರೆ. ಈ ಬಗ್ಗೆ ಹಗರಣದ ಪ್ರಮುಖ ಆರೋಪಿಯಾಗಿರುವ ಶ್ರೀಕಿ ಎಲ್ಲ ವಿವರ ನೀಡಿದ್ದಾನೆ. ರಾಜ್ಯ ಮತ್ತು ಕೇಂದ್ರ ಸರಕಾರದ ಹಣ ದೋಚಿಸುವವರ ಬಗ್ಗೆಯೂ ಒಪ್ಪಿಕೊಂಡಿದ್ದಾನೆ. ಹಾಗಿರುವಾಗ ಆರೋಪದಲ್ಲಿ ಹೆಸರು ಕೇಳಿ ಬಂದವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ತನಿಖೆಗೆ ಸಹಕರಿಸಬೇಕು ಎಂದು ರಮಾನಾಥ ರೈ ಆಗ್ರಹಿಸಿದರು.

ಸಕ್ರಿಯ ಕಾರ್ಯಕರ್ತರಿಗೆ ಸ್ಪರ್ಧೆಗೆ ಅವಕಾಶವಾಗಲಿ

ವಿಧಾನ ಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸಲು ದ.ಕ. ಜಿಲ್ಲೆಯಲ್ಲಿ ಪಕ್ಷದಿಂದ ಸಕ್ರಿಯ ಕಾರ್ಯಕರ್ತರಿಗೆ ಅವಕಾಶ ನೀಡಬೇಕು ಎಂಬುದು ನನ್ನ ಆಶಯ. ಪಕ್ಷ ಯಾರಿಗೆ ಸ್ಪರ್ಧಿಸಲು ಅವಕಾಶ ನೀಡುವುದೋ ಅದಕ್ಕೆ ಸಂಪೂರ್ಣ ಸಹಮತ ಎಂದು ಸುದ್ದಿಗಾರರ ಪ್ರಶ್ನೆಗೆ ರಮಾನಾಥ ರೈ ಉತ್ತರಿಸಿದರು.

ಗೋಷ್ಠಿಯಲ್ಲಿ ಮುಖಂಡರಾದ ಶಶಿಧರ ಹೆಗ್ಡೆ, ವಿಶ್ವಾಸ್ ಕುಮಾರ್ ದಾಸ್, ಪ್ರಕಾಶ್ ಸಾಲಿಯಾನ್, ಹರಿನಾಥ್, ಲುಕ್ಮಾನ್ ಬಂಟ್ವಾಳ, ಸಲೀಂ, ಸುರಂದ್ರ ಕಾಂಬ್ಳಿ, ನೀರಜ್ ಪಾಲ್, ಸವಾದ್, ಸಾಹುಲ್ ಹಮೀದ್, ಶುಭೋದಯ ಆಳ್ವ, ಸದಾಶಿವ ಶೆಟ್ಟಿ, ನಝೀರ್ ಬಜಾಲ್, ಮುಹಮ್ಮದ್ ಕುಂಜತ್ತಬೈಲ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News