ಶುಲ್ಕ ವಿನಾಯಿತಿ ಪಾವತಿ: ಆಧಾರ್ ಸಿಡಿಂಗ್ ಕಡ್ಡಾಯ

Update: 2021-11-20 13:53 GMT

ಉಡುಪಿ, ನ.20: ಪ್ರಸ್ತುತ ಸಾಲಿನಲ್ಲಿ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೂಲಕ 2020-21ನೇ ಸಾಲಿನ ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ಶುಲ್ಕ ವಿನಾಯಿತಿ ಮೊತ್ತವನ್ನು ನೇರವಾಗಿ ಡಿಬಿಟಿ ಮೂಲಕ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ (ಕೋವಿಡ್-19 ಇದ್ದ ಪ್ರಯುಕ್ತ) ಜಮೆ ಮಾಡಲಾಗುತ್ತಿದ್ದು, ಇದುವರೆಗೆ ಜಿಲ್ಲೆಯ 15,276 ವಿದ್ಯಾರ್ಥಿಗಳಿಗೆ ಒಟ್ಟು 638.50 ಲಕ್ಷ ರೂ. ಜಮೆ ಮಾಡಲಾಗಿದೆ.

ಈ ಯೋಜನೆಯಡಿ ಮೊತ್ತವನ್ನು, ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ಜಮಾ ಮಾಡಲು ವಿದ್ಯಾರ್ಥಿಗಳ ಬ್ಯಾಂಕ್ ಖಾತೆಯು ಆಧಾರ್ ಸಂಖ್ಯೆಯೊಂದಿಗೆ ಸಿಡಿಂಗ್ (ಎನ್‌ಪಿಸಿಐ) ಆಗಿರಬೇಕು. ಹಾಗೂ ವಿದ್ಯಾರ್ಥಿಗಳ ಆಧಾರ್ ಸಂಖ್ಯೆಯಲ್ಲಿರುವ ಹೆಸರು, ಎಸೆಸೆಲ್ಸಿ ಅಂಕ ಪಟ್ಟಿಯಲ್ಲಿರುವಂತೆ ಇರಬೇಕು.

ಆದರೆ ಜಿಲ್ಲೆಯ ಕಾಲೇಜುಗಳಲ್ಲಿ ಓದುತ್ತಿರುವ ಒಟ್ಟು 1,890 ದ್ಯಾರ್ಥಿಗಳು ಇದುವರೆಗೂ ಆಧಾರ್ ಸಿಡಿಂಗ್ ಮಾಡಿರುವುದಿಲ್ಲ ಹಾಗೂ ಹೆಸರು ವ್ಯತ್ಯಾಸ ವಿರುವುದರಿಂದ ವಿದ್ಯಾರ್ಥಿಗಳಿಗೆ ಶುಲ್ಕ ವಿನಾಯಿತಿ ಮೊತ್ತವನ್ನು ಪಾವತಿಸಲು ಸಾಧ್ಯವಾಗಿಲ್ಲ. ಆದ್ದರಿಂದ ಅಂತಹ ವಿದ್ಯಾರ್ಥಿಗಳು ನವೆಂಬರ್ 30ರೊಳಗೆ ಬ್ಯಾಂಕ್ ಶಾಖೆಗೆ ಭೇಟಿ ನೀಡಿ, ತಮ್ಮ ಬ್ಯಾಂಕ್ ಖಾತೆಗೆ ಆಧಾರ ಸಂಖ್ಯೆಯನ್ನು ಸಿಡಿಂಗ್ ಮಾಡಿಸಿಕೊಳ್ಳಬೇಕು ಹಾಗೂ ಆಧಾರ್ ಕಾರ್ಡಿನಲ್ಲಿ ತಮ್ಮ ಹೆಸರನ್ನು ಎಸೆಸೆಲ್ಸಿ ಅಂಕ ಪಟ್ಟಿಯಲ್ಲಿರುವಂತೆ ತಿದ್ದುಪಡಿ ಮಾಡಿಕೊಳ್ಳಬೇಕು. ತಪ್ಪಿದಲ್ಲಿ ಅಂತಹ ವಿದ್ಯಾರ್ಥಿಗಳ ಶುಲ್ಕ ವಿನಾಯತಿ ಮಂಜೂರಾತಿಯನ್ನು ರದ್ದು ಪಡಿಸಲಾಗುವುದು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News