ಮೌಢ್ಯಕ್ಕೆ ಬಲಿಯಾಗಲಿರುವ ವೇಣೂರಿನ 'ಶ್ರೀತಾಳೆ' ರಕ್ಷಣೆಗೆ ಯತ್ನ!

Update: 2021-11-20 14:11 GMT

ಉಡುಪಿ, ನ.20: ಮೌಢ್ಯಕ್ಕೆ ಬಲಿಯಾಗಿ ವಿನಾಶದಂಚಿನಲ್ಲಿರುವ ಶ್ರೀತಾಳೆ (ಪನೋಲಿ ಮರ) ಈಗಾಗಲೇ ಜಗತ್ತಿನಲ್ಲಿ ಕೆಂಪು ಪಟ್ಟಿಗೆ ಸೇರ್ಪಡೆಗೊಂಡಿದೆ. ಇಂತಹ ಅಪರೂಪದ ಮರವೊಂದು ವೇಣೂರಿನ ಕರಿಮಣೇಲು ಎಂಬಲ್ಲಿ ಕೊಡಲಿ ಏಟಿಗೆ ಬಲಿಯಾಗಲು ಕ್ಷಣಗಣನೆ ಎದುರಿಸುತ್ತಿದೆ. ಇದಕ್ಕೆ ಕಾರಣ ಈ ಮರ ಹೂ ಬಿಟ್ಟಿರುವುದು !

ಬೆಳ್ತಂಗಡಿ ತಾಲೂಕಿನ ವೇಣೂರು ಸಮೀಪದ ಕರಿಮಣೇಲು ದೇವಸ್ಥಾನ ಸಮೀಪದ ಅರ್ಚಕರಿಗೆ ಸೇರಿದ ಜಾಗದಲ್ಲಿರುವ ಈ ಮರವನ್ನು ಧರೆಗೆ ಉರುಳಿಸಲು ಈಗಾಗಲೇ ನ.21ರಂದು ಬೆಳಗ್ಗೆ 9.50ಕ್ಕೆ ಮುಹೂರ್ತ ನಿಗದಿ ಪಡಿಸಲಾಗಿದೆ. ಸುಮಾರು 66 ವರ್ಷಗಳಿಗೊಮ್ಮೆ ಹೂವು ಬಿಡುವ ಮತ್ತು ಆ ಹೂವಿನ ಮೂಲಕ ಎರಡು ಲಕ್ಷ ಬೀಜಗಳನ್ನು ಸೃಷ್ಠಿಸುವ ಈ ಕಾಡು ಶ್ರೀತಾಳೆ ಮರವನ್ನು ರಕ್ಷಣೆಗೆ ಉಡುಪಿ ಪ್ರಾಚ್ಯಸಂಚಯ ಸಂಶೋಧನಾ ಕೇಂದ್ರ ಪ್ರಯತ್ನ ನಡೆಸುತ್ತಿದೆ.

ಈ ಮರ ಹೂವು ಬಿಟ್ಟರೆ ಕೇಡುಗಾಲ ವಕ್ಕರಿಸುತ್ತದೆ ಮತ್ತು ಇಡೀ ಊರಿಗೆ ಅಪಾಯ ಕಟ್ಟಿಟ್ಟ ಬುತ್ತಿ ಎಂಬ ಮೌಢ್ಯ ಈಗಲೂ ಚಾಲ್ತಿಯಲ್ಲಿದೆ. ಅದೇ ಕಾರಣಕ್ಕೆ ಈ ಮರವನ್ನು ಹೂವು ಬಿಟ್ಟ ಕೂಡಲೇ ಕಡಿಯುವ ಅನಿಷ್ಠ ಪದ್ಧತಿ ಅವಿಭಜಿತ ದ.ಕ. ಜಿಲ್ಲೆ ಮಾತ್ರವಲ್ಲ, ರಾಜ್ಯ ವಿವಿಧೆಡೆ ಹಾಗೂ ಹೊರರಾಜ್ಯ ಮತ್ತು ವಿದೇಶಗಳಲ್ಲೂ ಆಚರಣೆಯಲ್ಲಿ ಇದೆ. ಇದರ ಪರಿಣಾಮ ಶ್ರೀತಾಳೆ ಕಣ್ಮರೆ ಹಂತಕ್ಕೆ ಬಂದು ತಲುಪಿದೆ ಎಂದು ಕೇಂದ್ರದ ಅಧ್ಯಯನ ನಿರ್ದೇಶಕ ಪ್ರೊ.ಎಸ್.ಎ.ಕೃಷ್ಣಯ್ಯ ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ದೊರೆತ ಮಾಹಿತಿಯಂತೆ ಈ ಮರವನ್ನು ಉಳಿಸುವ ನಿಟ್ಟಿನಲ್ಲಿ ಸ್ಥಳಕ್ಕೆ ಭೇಟಿ ನೀಡಿ, ಸ್ಥಳೀಯರಿಗೆ ಆ ಮರದ ವಿಶೇಷತೆ ಬಗ್ಗೆ ಮಾಹಿತಿ ನೀಡಿದ್ದೇವೆ. ಆದರೆ ಅವರು ಈಗಾಗಲೇ ಸಿದ್ಧತೆ ಮಾಡಿರುವುದರಿಂದ ಮರ ಕಡಿಯದಿರಲು ಒಪ್ಪಲಿಲ್ಲ. ಹಾಗಾಗಿ ಅಳಿವಿನಂಚಿನಲ್ಲಿರುವ ಶ್ರೀತಾಳೆ ಮರ ಕಡಿಯದಂತೆ ಮೂಡುಬಿದರೆ ಜೈನಮಠದ ಶ್ರೀಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿಯನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದೇವೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಇತಿಹಾಸ ಮತ್ತು ಪುರಾತತ್ವ ಸಂಶೋಧನಾರ್ಥಿ ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ, ಇತಿಹಾಸ ಶಿಕ್ಷಕ ಶ್ರೀಧರ್ ಭಟ್, ಸಾಮಾಜಿಕ ಕಾರ್ಯಕರ್ತ ಗಣೇಶ್ರಾಜ್ ಸರಳೇಬೆಟ್ಟು ಉಪಸ್ಥಿತರಿದ್ದರು.

''ಕರಾವಳಿ ಪ್ರದೇಶ ಹಾಗೂ ಬೇರೆ ಬೇರೆ ಭಾಗಗಳಿಂದ ಸಂಗ್ರಹ ಮಾಡಿದ ಸುಮಾರು 38 ಸಾವಿರ ಬೀಜಗಳನ್ನು ಈಗಾಗಲೇ ಕಾವೇರಿಯಿಂದ ವಾರಾಣಾಸಿ ಯವರೆಗೆ ಪ್ರಸರಣ ಮಾಡಲಾಗಿದೆ. ವಿನಾಶದಂಚಿನಲ್ಲಿರುವ ಈ ವೃಕ್ಷದ ಸಂರಕ್ಷಣೆ ಮುಂದುವರೆಯಬೇಕಾಗಿದೆ. ಮೌಢ್ಯತೆಗೆ ಒಳಗಾಗದೇ ಭಾರತೀಯ ಇತಿಹಾಸಕ್ಕೆ ಮಹತ್ತರ ಕೊಡುಗೆ ನೀಡಿದ ಶ್ರೀತಾಳೆ ಮರದ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ''.

-ಪ್ರೊ.ಎಸ್.ಎ.ಕೃಷ್ಣಯ್ಯ

ಶ್ರೀತಾಳೆ ಮರದ ವಿಶೇಷತೆ

ಈ ಮರದ ಸಸ್ಯನಾಮ ಕೊರಿಫಾ ಅಂಬ್ರಕುಲಿಫೆರಾ. ಇಂಡೋನೇಷ್ಯಾದಲ್ಲಿ ಇದನ್ನು ಲೊಂಟಾರ ಎಂದು ಕರೆಯಲಾಗುತ್ತದೆ. ಶ್ರೀಲಂಕಾದ ರಾಷ್ಟ್ರ ವೃಕ್ಷ ಇದಾಗಿದೆ. ಈ ಮರದಲ್ಲಿ ಹೂವು ಎಂಟು ತಿಂಗಳು ಹಾಗೂ ಕಾಯಿ ಎಂಟು ತಿಂಗಳ ಕಾಲ ಇದ್ದು, ಉದುರಿ ಬೀಳುತ್ತದೆ. ಬಳಿಕ ಆ ಮರ ಕ್ರಮೇಣ ಸಾಯುತ್ತದೆ.

ಈ ಮರದ ಒಡಲಲ್ಲಿ ಸುಮಾರು 200-250 ಕೆ.ಜಿ.ಯಷ್ಟು ಸಬ್ಬಕ್ಕಿಯಂತ ಹಿಟ್ಟು/ತಿರುಳು ದೊರೆಯುತ್ತದೆ. ಬರಗಾಲದಲ್ಲಿ ಇಂತಹ ಆಹಾರವನ್ನು ಸುಮಾರು 100 ಕುಟುಂಬಗಳು ಮೂರು ತಿಂಗಳುಗಳ ಕಾಲ ಸೇವಿಸಬಹುದು. ಅವಿಭಜಿತ ದ.ಕ. ಜಿಲ್ಲೆಯಲ್ಲಿ ಸುಮಾರು 25-30 ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಸುಮಾರು 200 ಮರಗಳಿವೆ ಎಂದು ಪ್ರೊ.ಎಮ್.ಎ.ಕೃಷ್ಣಯ್ಯ ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News