ರಾಷ್ಟ್ರೀಯ ಜಂತುಹುಳ ನಿವಾರಣಾ ದಿನ; ಉಡುಪಿ ಜಿಲ್ಲೆಯ 3,16,620 ಮಕ್ಕಳಿಗೆ ಮಾತ್ರೆ ವಿತರಿಸುವ ಗುರಿ

Update: 2021-11-21 16:47 GMT

ಉಡುಪಿ, ಅ.21: ಉಡುಪಿ ಜಿಲ್ಲೆಯಲ್ಲಿ ನ.23ರಂದು ರಾಷ್ಟ್ರೀಯ ಜಂತು ಹುಳ ನಿವಾರಣಾ ದಿನವಾಗಿ ಆಚರಿಸಲಾಗುತ್ತಿದ್ದು, ಜಂತುಹುಳ ಕಾಣಿಸಿಕೊಳ್ಳುವ 1 ರಿಂದ 19 ವರ್ಷದೊಳಗಿನ ಮಕ್ಕಳಿಗೆ ಅಲ್‌ಬೆಂಡಾಜೋಲ್ ಮಾತ್ರೆಯನ್ನು ಉಚಿತವಾಗಿ ನೀಡಲಾಗುತ್ತದೆ.

ಜಿಲ್ಲೆಯ 1 ರಿಂದ 19 ವರ್ಷದೊಳಗೆ ಉಡುಪಿ ತಾಲೂಕಿನಲ್ಲಿ ಅಂದಾಜು 1,55,443, ಕುಂದಾಪುರದಲ್ಲಿ 1,03,797, ಕಾರ್ಕಳ ದಲ್ಲಿ 57,380 ಸೇರಿದಂತೆ ಒಟ್ಟು 3,16,620 ಮಕ್ಕಳಿಗೆ ಮಾತ್ರೆಗಳನ್ನು ವಿತರಿಸುವ ಗುರಿ ಹೊಂದಲಾಗಿದೆ ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ತಿಳಿಸಿದ್ದಾರೆ.

ಈ ಮಾತ್ರೆಯನ್ನು ಮಧ್ಯಾಹ್ನ ಊಟದ ನಂತರ ಶಾಲೆಗಳಲ್ಲಿ ಶಾಲಾ ಶಿಕ್ಷಕರ ಮತ್ತು ಅಂಗನವಾಡಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯವರ ಉಪಸ್ಥಿತಿಯಲ್ಲಿ ನೀಡಲಾಗುವುದು. ಶಿಕ್ಷಕರು, ಬಿಸಿಯೂಟ ಸಿಬ್ಬಂದಿಯವರು, ಅಂಗನವಾಡಿ ಕಾರ್ಯಕರ್ತೆ ಸಹಾಯಕಿಯವರಿಗೆ ಕೂಡ ಮಾತ್ರೆಯನ್ನು ನೀಡಲಾಗುತ್ತದೆ.

1 ರಿಂದ 2 ವರ್ಷದೊಳಗಿನ ಮಕ್ಕಳಿಗೆ ಒಂದೂವರೆ ಮಾತ್ರೆ ಹಾಗೂ 2-19 ವರ್ಷದ ವಯಸ್ಸಿನವರಿಗೆ ಇಡೀ ಮಾತ್ರೆ ನೀಡಲಾ ಗುತ್ತಿದೆ. ಚಿಕ್ಕ ಮಕ್ಕಳಿಗೆ ಮಾತ್ರೆಯನ್ನು ಹುಡಿ ಮಾಡಿ ನೀರಿನೊಂದಿಗೆ ಸೇವಿಸಲು ಅಥವಾ ಚೀಪಿ ಸೇವಿಸುವಂತೆ ಕ್ರಮವಹಿಸಲು ತರಬೇತಿ ನೀಡಲಾಗಿದೆ. ನ.23ರಂದು ಬಿಟ್ಟು ಹೋದ ಮಕ್ಕಳಿಗೆ ನ.27ರ ಮೋಪ್ ಅಪ್ ದಿನದಂದು ಮಾತ್ರೆಗಳನ್ನು ನೀಡಲಾಗುವುದು.

ಸೌಖ್ಯವಿಲ್ಲದ ಮಕ್ಕಳಿಗೆ ಗುಣಮುಖರಾದ ನಂತರ ಅಂದರೆ ನ.27ರೊಳಗೆ ಮಾತ್ರೆ ನೀಡಲಾಗುತ್ತದೆ. ಬೇರೆ ಯಾವುದೇ ಔಷಧಿ ಸೇವಿಸುತ್ತಿದ್ದರೆ ವೈದ್ಯರ ಸಲಹೆ ಪಡೆದು ಮಾತ್ರೆಯನ್ನು ಸೇವಿಸಬೇಕು. ಆಶಾ ಕಾರ್ಯಕರ್ತೆಯರ ಮೂಲಕ ಶಾಲೆಯಿಂದ ಹೊರಗಿರುವ 1 ರಿಂದ 19 ವರ್ಷದ ಒಳಗಿರುವ ಮಕ್ಕಳನ್ನು ಪಟ್ಟಿ ಮಾಡಿ ಪಟ್ಟಿಯಲ್ಲಿರುವ ಎಲ್ಲಾ ಮಕ್ಕಳನ್ನು ಅಂಗನವಾಡಿಗೆ ಬರುವಂತೆ ಮಾಡಿ ಮಾತ್ರೆ ನೀಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News