ಉಡುಪಿ: ಕೃಷಿ ತಿದ್ದುಪಡಿ ಕಾಯ್ದೆ ರದ್ದುಪಡಿಸಿದ ಕೇಂದ್ರದ ನಿರ್ಧಾರಕ್ಕೆ ವಿಮಾ ನೌಕರರ ಸಂಘದ ಸ್ವಾಗತ

Update: 2021-11-23 13:47 GMT

ಉಡುಪಿ, ನ.23: ವಿವಾದಾತ್ಮಕ ಕೃಷಿ ತಿದ್ದುಪಡಿ ಕಾಯ್ದೆಗಳನ್ನು ರದ್ದುಪಡಿಸುವ ಕುರಿತು ಪ್ರಧಾನ ಮಂತ್ರಿಗಳು ಮಾಡಿದ ಪ್ರಸ್ತಾವನೆಯನ್ನು ಅಖಿಲ ಭಾರತ ವಿಮಾ ನೌಕರರ ಸಂಘಕ್ಕೆ ಸಂಯೋಜಿತವಾಗಿರುವ ವಿಮಾ ನೌಕರರ ಸಂಘ ಉಡುಪಿ ವಿಭಾಗವು ಉಡುಪಿ ವಿಭಾಗದ ಎಲ್ಲಾ ಶಾಖಾ ಘಟಕಗಳಲ್ಲಿ ಮತ ಪ್ರದರ್ಶನ ಮಾಡುವ ಮೂಲಕ ಸ್ವಾಗತಿಸಿತು.

ನವೆಂಬರ್ 29ರಂದು ಪ್ರಾರಂಭವಾಗುವ ಚಳಿಗಾಲದ ಅಧಿವೇಶನದಲ್ಲಿ ಈ ಕಾಯ್ದೆಗಳನ್ನು ಹಿಂಪಡೆಯುವ ಪ್ರಕ್ರಿಯೆಯನ್ನು ಕೈಗೊಳ್ಳಲಾಗುವುದು ಎಂದು ಪ್ರಧಾನಿ ತಮ್ಮ ಪ್ರಸ್ತಾಪದಲ್ಲಿ ತಿಳಿಸಿದ್ದಾರೆ.

ಮೂರು ಕೃಷಿ ಕಾಯ್ದೆಗಳ ವಿರುದ್ಧ ಸಂಯುಕ್ತ ಕಿಸಾನ್ ಮೋರ್ಚಾದ ನೇತೃತ್ವದಲ್ಲಿ 2020ರ ನ.26ರಿಂದ ಸುದೀರ್ಘವಾದ ಚಳವಳಿಯನ್ನು ನಡೆಸಿದ್ದಾರೆ. ಈ ಕಾಯ್ದೆಯು ರೈತ ಸಮುದಾಯದೊಂದಿಗೆ ಯಾವುದೇ ಸಮಾಲೋಚನೆ ಇಲ್ಲದೆ ಅಥವಾ ಸಂಸತ್ತಿನಲ್ಲಿ ವಿಸ್ತೃತ ಚರ್ಚೆಯಿಲ್ಲದೆ ಏಕಪಕ್ಷೀಯವಾಗಿ ದೇಶದ ರೈತರ ಮೇಲೆ ಹೇರಲಾಗಿತ್ತು ಎಂದು ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದರು. ಕಳೆದ ಒಂದು ವರ್ಷದಿಂದ ದೇಶದಾದ್ಯಂತ ಬೃಹತ್ ಪ್ರತಿಭಟನೆಗಳು ನಡೆದವು. ಸುಮಾರು 700 ರೈತರ ಅಮೂಲ್ಯ ಜೀವಗಳನ್ನು ಬಲಿತೆಗೆದುಕೊಳ್ಳುವಂತೆ ಮಾಡಿದ ಈ ಮೂರು ಕರಾಳ ಶಾಸನಗಳನ್ನು ಈ ಮೊದಲೇ ಹಿಂತೆಗೆದುಕೊಂಡಿದ್ದರೆ ಈ ಅಮೂಲ್ಯ ಜೀವಗಳನ್ನು ಉಳಿಸಿಕೊಳ್ಳಬಹುದಿತ್ತು ಎಂದು ಸಂಘ ಹೇಳಿದೆ.

ವಿಮಾ ನೌಕರರು ಈ ಚಳವಳಿಯ ಆರಂಭದಿಂದಲೂ ತಮ್ಮ ಬೆಂಬಲವನ್ನು ದೇಶದಾದ್ಯಂತ ಅಖಿಲ ಭಾರತ ವಿಮಾ ನೌಕರರ ಸಂಘದ ನೇತೃತ್ವದಲ್ಲಿ ನೀಡುತ್ತಾ ಬಂದಿದ್ದಾರೆ. ಅದೇ ರೀತಿ ವಿಮಾ ನೌಕರರ ಸಂಘ ಉಡುಪಿ ವಿಭಾಗ ಈ ಚಳವಳಿಗೆ ಬೆಂಬಲ ನೀಡಿದೆ. ಇಂದು ಕೂಡಾ ಎಲ್ಲಾ ಕಛೇರಿಗಳ ಮುಂದೆ ಮತಪ್ರದರ್ಶನ ಮಾಡುವ ಮೂಲಕ ರೈತ ಚಳವಳಿಗೆ ಅಭಿನಂದನೆಯನ್ನು ಸಲ್ಲಿಸಿ ಪ್ರಧಾನಿಯವರ ಪ್ರಸ್ತಾಪಗಳನ್ನು ಸ್ವಾಗತಿಸಲಾಯಿತು ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಪ್ರಭಾಕರ ಬಿ. ಕುಂದರ್ ಮತ್ತು ಅಧ್ಯಕ್ಷ ಕೆ.ವಿಶ್ವನಾಥ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News