ಕೊಂಬೆಟ್ಟು ಕಾಲೇಜ್‍ನಲ್ಲಿ ಮತ್ತೆ ವಿದ್ಯಾರ್ಥಿಗಳ ಮೇಲೆ ಹಲ್ಲೆ

Update: 2021-11-24 16:41 GMT
ಸಿಎಫ್‍ಐ, ಎಬಿವಿಪಿ ಪ್ರತಿಭಟನೆ 

ಪುತ್ತೂರು: ವಿದ್ಯಾರ್ಥಿಯೊಬ್ಬ ತನ್ನ ಸಹಪಾಠಿ ವಿದ್ಯಾರ್ಥಿನಿಯೊಂದಿಗೆ ಮಾತನಾಡಿದ ಕ್ಷುಲ್ಲಕ ವಿಚಾರವನ್ನು ಮುಂದಿಟ್ಟುಕೊಂಡು ಮಂಗಳವಾರ ಪುತ್ತೂರು ನಗರದ ಕೊಂಬೆಟ್ಟು ಸರ್ಕಾರಿ ಕಾಲೇಜೊಂದರಲ್ಲಿ ವಿದ್ಯಾರ್ಥಿಯೊಬ್ಬರ ಮೇಲೆ ನಡೆದ ಹಲ್ಲೆ ಪ್ರರಕಣದ ಬೆನ್ನಲ್ಲೇ ಬುಧವಾರ ಮತ್ತೆ ಮೂವರು ವಿದ್ಯಾರ್ಥಿಗಳ ಮೇಲೆ ಮಾರಕ ಆಯುಧಗಳಿಂದ ಹಲ್ಲೆ ನಡೆಸಲಾಗಿದ್ದು, ಗಾಯಾಳುಗಳ ಪೈಕಿ ಇಬ್ಬರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.

ವಿದ್ಯಾರ್ಥಿಯೋರ್ವ ತನ್ನ ಸಹಪಾಠಿ ವಿದ್ಯಾರ್ಥಿನಿಯೊಂದಿಗೆ ಮಾತನಾಡಿದ ಎಂಬ ಕಾರಣಕ್ಕೆ ಮಂಗಳವಾರ ಸುಮಾರು 15ರಷ್ಟು ವಿದ್ಯಾರ್ಥಿಗಳ ತಂಡವು ಆತನ ಮೇಲೆ ಕಾಲೇಜಿನಲ್ಲಿ ಹಲ್ಲೆ ನಡೆಸಿತ್ತು. ಬಳಿಕ ಆತನನ್ನು ಪುತ್ತೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೇ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ವಿದ್ಯಾರ್ಥಿಗಳು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ವಿದ್ಯಾರ್ಥಿನಿಯೊಂದಿಗೆ ಮಾತನಾಡುವುದನ್ನು ಪ್ರಶ್ನಿಸಿದ ಕಾರಣಕ್ಕೆ ತಮ್ಮ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಿದ್ದರು. ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸಿದ ಆರೋಪಿಯನ್ನು ಬಂಧಿಸುವಂತೆ ಸಿಎಫ್‍ಐ ಸಂಘಟನೆಯ ವಿದ್ಯಾರ್ಥಿಗಳು ಮಂಗಳವಾರ ಸಂಜೆ ಪುತ್ತೂರು ಬಸ್ಸು ನಿಲ್ದಾಣದ ಬಳಿಯಲ್ಲಿನ ಮಿನಿ ವಿಧಾನ ಸೌಧದ ಮುಂಭಾಗ ಪ್ರತಿಭಟನೆಯನ್ನೂ ನಡೆಸಿದ್ದರು. 

ಬಳಿಕದ ಬೆಳವಣಿಗೆಯಲ್ಲಿ ಬುಧವಾರ ಬೆಳಗ್ಗೆ ಪುತ್ತೂರಿನ ಕೊಂಬೆಟ್ಟು ಪದವಿ ಪೂರ್ವ ಕಾಲೇನ್ ಕ್ಯಾಂಪಸ್‍ನಲ್ಲಿ ಎಬಿವಿಪಿ ವತಿಯಿಂದ ಪ್ರತಿಭಟನೆ ನಡೆಸಲಾಗಿತ್ತು. ಪ್ರತಿಭಟನೆ ನಡೆದ ಬೆನ್ನಲ್ಲೇ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳ ಗುಂಪೊಂದು ಮೂವರು ವಿದ್ಯಾರ್ಥಿಗಳ ಮೇಲೆ ಮಾರಕ ಆಯುಧಗಳಿಂದ ಹಲ್ಲೆ ನಡೆಸಿತ್ತು. ತಕ್ಷಣವೇ ಗಾಯಾಳು ವಿದ್ಯಾರ್ಥಿ ಗಳನ್ನು ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಇಬ್ಬರು ವಿದ್ಯಾರ್ಥಿಗಳನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. 

ಇದೇ ಪ್ರಕರಣಕ್ಕೆ ಸಂಬಂಧಿಸಿ ಇನ್ನೊಂದು ತಂಡದ  ಇಬ್ಬರು ವಿದ್ಯಾರ್ಥಿಗಳು ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ಆಗ್ರಹಿಸಿ ಪುತ್ತೂರು ನಗರ ಠಾಣೆಗೆ ವಿದ್ಯಾರ್ಥಿ ಸಂಘಟನೆಗಳ ಮೂಲಕ ದೂರು ನೀಡಿ ಹಿಂದಿರುಗುತ್ತಿದ್ದ ವೇಳೆಯಲ್ಲಿ ಕಾಲೇಜ್‍ಗೆ ಸಂಬಂಧಪಡದ ವ್ಯಕ್ತಿಗಳು ಬಿಳಿ ಬಣ್ಣದ ಕಾರಿನಲ್ಲಿ ಬಂದು ಕಾಲೇಜು ಬಳಿಕ ಕಾಲುದಾರಿಯಲ್ಲಿ ನಮ್ಮ ಮೇಲೆ ಮಾರಕ ಆಯುಧಗಳಿಂದ ದಾಳಿ ನಡೆಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. 

ಕೊಂಬೆಟ್ಟು ಕಾಲೇಜ್‍ನ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ ಆರೋಪಿಗಳನ್ನು ತಕ್ಷಣವೇ ಬಂಧಿಸುವಂತೆ ಬುಧವಾರ ಸಂಜೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯ ವಿದ್ಯಾರ್ಥಿಗಳು ಧರಣಿ ನಡೆಸಿದರು. 
ವಿದ್ಯಾರ್ಥಿಗಳ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ ಆರೋಪಿಗಳನ್ನು 24 ಗಂಟೆಗಳ ಒಳಗಾಗಿ ಬಂಧಿಸುವಂತೆ ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಆಗ್ರಹಿಸಿದರು. 

ಪುತ್ತೂರು ಡಿವೈಎಸ್‍ಪಿ ಅವರು ಸಕಾರಾತ್ಮಕ ಭರವಸೆ ನೀಡಿದ ಬಳಿ ಧರಣಿಯನ್ನು ಹಿಂಪಡೆದರು. ಧರಣಿಯಲ್ಲಿ ಸಿಎಫ್‍ಐ ರಾಜ್ಯ ಕೋಶಾಧಿಕಾರಿ ಸವಾದ್ ಕಲ್ಲರ್ಪೆ, ಜಿಲ್ಲಾಧ್ಯಕ್ಷ ಅನ್ಸಾರ್ ಬೆಳ್ಳಾರೆ, ಮುಖಂಡದಾರ ರಿಯಾಝ್ ಅಂಕತಡ್ಕ, ಫಾರೂಕ್ ಕಬಕ, ಸಂಶುದ್ದೀನ್ ವಿಟ್ಲ ಮತ್ತಿತರರು ಪಾಲ್ಗೊಂಡಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News