ಕೊಂಬೆಟ್ಟು ಕಾಲೇಜಿನಲ್ಲಿ ನಡೆದ ಗಲಾಟೆಯಲ್ಲಿ ಮತಾಂಧ ಶಕ್ತಿಗಳ ಕೈವಾಡ: ಅಮಳ ರಾಮಚಂದ್ರ

Update: 2021-11-25 08:55 GMT

ಪುತ್ತೂರು, ನ.25: ಪುತ್ತೂರಿನ ಕೊಂಬೆಟ್ಟು ಕಾಲೇಜಿನಲ್ಲಿ ನಡೆದ ಗಲಾಟೆಯಲ್ಲಿ ಮತಾಂಧ ಶಕ್ತಿಗಳ ಕೈವಾಡವಿದೆ. ಅಂತಹ ಶಕ್ತಿಗಳ ಹುನ್ನಾರದಿಂದ ವಿದ್ಯಾರ್ಥಿಗಳ ಭವಿಷ್ಯ ಹಾಳಾಗುತ್ತಿದೆ. ಕೋಮು ಗಲಭೆ ನಡೆಸುವ ಉದ್ದೇಶದಿಂದ ಕಾಲೇಜಿಗೆ ಸಂಬಂಧಪಡದ ವ್ಯಕ್ತಿಗಳು ಈ ಗಲಾಟೆ ನಡೆಸುತ್ತಿದ್ದಾರೆ ಎಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಮಳ ರಾಮಚಂದ್ರ ಆರೋಪಿಸಿದ್ದಾರೆ.

ಅವರು ಗುರುವಾರ ಪುತ್ತೂರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆದ ದಿನದಂದು ಸಿಎಫ್‌ಐ ಮುಖಂಡ ಸವಾದ್ ಕಲ್ಲರ್ಪೆ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಮಾರನೆಯ ದಿನ ಎಬಿವಿಪಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದ್ದರು. ಅಲ್ಲಿ ಸಂದೇಶ್ ಎಂಬ ಎಬಿವಿಪಿಯ ವ್ಯಕ್ತಿ ಪ್ರಮುಖ ಭಾಷಣ ಮಾಡಿದ್ದಾರೆ. ಇವರಿಬ್ಬರೂ ಆ ಕಾಲೇಜಿನ ವಿದ್ಯಾರ್ಥಿಗಳಲ್ಲ. ಸಂದೇಶ್ ಎಂಬ ಹೊರಗಿನ ವ್ಯಕ್ತಿಯೊಬ್ಬ ಕಾಲೇಜ್ ಕ್ಯಾಂಪಸ್‌ನೊಳಗೆ ಹೋಗಿ ಮಾತನಾಡುವುದು ಎಷ್ಟು ಸರಿ. ಕಾಲೇಜಿನ ಪ್ರಾಂಶುಪಾಲರು ಮತ್ತು ಕಾಲೇಜಿನ ಕಾರ್ಯಾಧ್ಯಕ್ಷ ಜಗನ್ನಿವಾಸ್ ರಾವ್ ಅವರ ಸಮ್ಮುಖದಲ್ಲಿಯೇ ಇದು ನಡೆದಿದೆ. ಕಾಲೇಜಿನ ಒಳಗಿನ ಸಮಸ್ಯೆಯನ್ನು ಆ ಕಾಲೇಜಿನ ವಿದ್ಯಾರ್ಥಿಗಳು ಪ್ರಶ್ನಿಸುವುದು ತಪ್ಪಲ್ಲ, ಅದು ಅವರ ಹಕ್ಕು. ಆದರೆ ಈ ಕಾಲೇಜಿಗೆ ಸಂಬಂಧಪಡದ ವ್ಯಕ್ತಿಗಳು ಇದರಲ್ಲಿ ಪಾಲುದಾರರಾಗಿ ವಿದ್ಯಾರ್ಥಿಗಳ ಭವಿಷ್ಯದಲ್ಲಿ ಚೆಲ್ಲಾಟವಾಡುವುದು ಖಂಡನೀಯ ಎಂದರು.

ಬ್ಲಾಕ್ ಅಲ್ಪ ಸಂಖ್ಯಾತರ ಘಟಕದ ಅಧ್ಯಕ್ಷ ವಿ.ಎಚ್.ಅಬ್ದುಲ್ ಶಕೂರ್ ಹಾಜಿ ಮಾತನಾಡಿ, ಕೊಂಬೆಟ್ಟು ಕಾಲೇಜಿನಲ್ಲಿ ಕಳೆದ ಮೂರು ದಿನಗಳಿಂದ ವಿದ್ಯಾರ್ಥಿಗಳ ನಡುವಿನ ಗಲಾಟೆಯು ಅನಾಗರಿಕವಾಗಿದ್ದು, ರಾಜಕೀಯ ದುರುದ್ದೇಶಕ್ಕಾಗಿ ವಿದ್ಯಾರ್ಥಿಗಳನ್ನು ಬಲಿಪಶು ಮಾಡಲಾಗುತ್ತಿದೆ. ಎಬಿವಿಪಿ ಮತ್ತು ಸಿಎಫ್‌ಐ ಮಾಡುವ ಅನಾಗರಿಕ ಕೆಲಸಗಳಿಂದ ಕಾಲೇಜುಗಳಲ್ಲಿ ಭಯದ ವಾತಾವರಣ ಸೃಷ್ಟಿಯಾಗುತ್ತಿದೆ. ಹಳ್ಳಿಯ ಮಕ್ಕಳು ಕಾಲೇಜಿಗೆ ಬರಲು ಭಯಪಡುವಂತಾಗಿದೆ. ಇಂತಹ ನೀಚ ಕೃತ್ಯಗಳು ನಮ್ಮ ಊರಿನಲ್ಲಿ ನಡೆಯುತ್ತಿರುವು ಖೇದಕರ. ಇದಕ್ಕೆ ಕುಮ್ಮಕ್ಕು ನೀಡುವವರ ವಿರುದ್ದ ಕಠಿಣ ಕ್ರಮ ಜರುಸಬೇಕು ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಎನ್‌ಎಸ್‌ಯುಐ ಜಿಲ್ಲಾಧ್ಯಕ್ಷ ಲೆಸ್ಟರ್, ಎಸ್ಸಿ-ಎಸ್ಟಿ ಘಟಕದ ಅಧ್ಯಕ್ಷ ಕೇಶವ ಪಡೀಲ್, ಮುಖಂಡರಾದ ಹರೀಶ್ ಕುಮಾರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News