ಲೈಂಗಿಕ ಕಿರುಕುಳ ಪ್ರಕರಣ: ದ.ಕ. ಜಿಲ್ಲಾ ಆರೋಗ್ಯ ಇಲಾಖೆಯ ಅಧಿಕಾರಿ ಡಾ.ರತ್ನಾಕರ್ ಪೊಲೀಸ್ ವಶಕ್ಕೆ

Update: 2021-11-26 14:24 GMT
ಡಾ.ರತ್ನಾಕರ್

ಮಂಗಳೂರು, ನ.26: ಕಚೇರಿಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ಸಿಬ್ಬಂದಿಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇರೆಗೆ ದ.ಕ. ಜಿಲ್ಲಾ ಆರೋಗ್ಯ ಇಲಾಖೆಯ ಅಧಿಕಾರಿ ಡಾ.ರತ್ನಾಕರ್‌ ನನ್ನು ಮಹಿಳಾ ಪೊಲೀಸರು ಶುಕ್ರವಾರ ವಶಕ್ಕೆ ಪಡೆದುಕೊಂಡಿದ್ದಾರೆ.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧೀನದಲ್ಲಿರುವ ಜಿಲ್ಲಾ ಆಯುಷ್ಮಾನ್ ನೋಡಲ್ ಅಧಿಕಾರಿ, ಕುಷ್ಠರೋಗ ನಿವಾರಣಾ ವಿಭಾಗದ ಅಧಿಕಾರಿಯೂ ಆಗಿರುವ ಡಾ. ರತ್ನಾಕರ್ ಕೆಲವು ತಿಂಗಳ ಹಿಂದೆ ಸರಕಾರಿ ಕಚೇರಿಯಲ್ಲೇ ಸುಮಾರು 9 ಮಂದಿ ಮಹಿಳಾ ಸಿಬ್ಬಂದಿಗಳಿಗೆ ಲೈಂಗಿಕ ಕಿರುಕುಳ ನೀಡಿದ್ದ ಎಂದು ದೂರಲಾಗಿದೆ. ಇದರ ವಿರುದ್ಧ ಬಂದ ದೂರನ್ನು ಆಧರಿಸಿ ದ.ಕ. ಜಿಲ್ಲಾಧಿಕಾರಿಯು ಆರೋಗ್ಯ ಇಲಾಖೆ ಹಾಗೂ ಜಿಲ್ಲಾ ಮಟ್ಟದ ದೂರು ಸಮಿತಿಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಿದ್ದರು. ಸಮಿತಿಯು ನೀಡಿದ ವರದಿಯನ್ನು ಸರಕಾರಕ್ಕೆ ಸಲ್ಲಿಸಲಾಗಿದೆಯಲ್ಲದೆ ಡಾ.ರತ್ನಾಕರ್‌ ನನ್ನು ನ.8ರಿಂದ ಅನ್ವಯಗೊಳ್ಳುವಂತೆ ಅಮಾನತಿನಲ್ಲಿಡಲಾಗಿದೆ.

ಈ ಮಧ್ಯೆ ಸಂತ್ರಸ್ಥೆ ಯುವತಿಯ ಪರವಾಗಿ ವಿವಿಧ ಸಂಘಟನೆಗಳಲ್ಲಿ ತೊಡಗಿಸಿಕೊಂಡ ಮಹಿಳೆಯೊಬ್ಬರು ಶುಕ್ರವಾರ ನೀಡಿದ ದೂರನ್ನು ದಾಖಲಿಸಿಕೊಂಡ ಮಹಿಳಾ ಪೊಲೀಸರು ಆರೋಪಿ ಅಧಿಕಾರಿ ಡಾ.ರತ್ನಾಕರ್‌ನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ.

ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ 'ಆರೋಗ್ಯ ಇಲಾಖೆಯ ಅಧಿಕಾರಿ ಡಾ.ರತ್ನಾಕರ್ ತನ್ನ ಕಚೇರಿಯ ಮಹಿಳಾ ಸಿಬ್ಬಂದಿಗಳಿಗೆ ಲೈಂಗಿಕ ಕಿರುಕುಳ ನೀಡಿದ ವಿಷಯವು ಮಾಧ್ಯಮಗಳಲ್ಲಿ ಬಹಿರಂಗಗೊಂಡರೂ ಕೂಡ ಭವಿಷ್ಯದ ಹಿತದೃಷ್ಟಿಯಿಂದ ಕಿರುಕುಳಕ್ಕೆ ಒಳಗಾದ ಸಂತ್ರಸ್ತೆಯರು ದೂರು ನೀಡಲು ಹಿಂದೇಟು ಹಾಕಿದ್ದಾರೆ. ಆದರೆ ಮುಂದಿನ ವಿಚಾರಣೆಗೆ ಎಲ್ಲಾ ರೀತಿಯ ಸಹಕಾರ ನೀಡುವೆವು ಎಂದಿದ್ದಾರೆ. ಈ ಸಂತ್ರಸ್ತರ ಪರವಾಗಿ ಮಹಿಳಾ ಸಂಘಟನೆಗಳಲ್ಲಿ ತೊಡಗಿಸಿಕೊಂಡ ಒಬ್ಬ ಮಹಿಳೆ ದೂರು ನೀಡಿದ್ದರು. ಅದರಂತೆ ವಿಚಾರಣೆಗಾಗಿ ಆರೋಗ್ಯ ಇಲಾಖೆಯ ಅಧಿಕಾರಿ ಡಾ.ರತ್ನಾಕರ್‌ ನನ್ನು ವಶಕ್ಕೆ ಪಡೆಯಲಾಗಿದೆ. ವಿಚಾರಣೆಯ ಬಳಿಕ ಸೂಕ್ತ ಕಾನೂನು ಕ್ರಮ ಜರಗಿಸಲಾಗುವುದು' ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News