ವಾಹನ ಚಾಲನೆಯಲ್ಲಿ ಸುರಕ್ಷತಾ ಕ್ರಮಗಳನ್ನು ಅನುಸರಿಸಿ: ಆರ್‌ಟಿಓ

Update: 2021-11-30 16:20 GMT

ಉಡುಪಿ, ನ.30: ವಾಹನ ಚಾಲನೆ ಮಾಡುವಾಗ ಸುರಕ್ಷತಾ ಕ್ರಮಗಳನ್ನು ಅನುಸರಿಸುವುದು ಕಡ್ಡಾಯ. ರಸ್ತೆ ನಿಯಮಗಳನ್ನು ಚಾಲಕರು ತಿಳಿದಿರುವುದು ಅಗತ್ಯ ಎಂದು ಉಡುಪಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಜೆ.ಪಿ. ಗಂಗಾಧರ ಹೇಳಿದರು.

ಉಡುಪಿ ಪ್ರಾದೇಶಿಕ ಸಾರಿಗೆ ಇಲಾಖೆ, ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ, ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಉಡುಪಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಳ್ಳಲಾದ ರಸ್ತೆ ಸುರಕ್ಷತೆ ಮತ್ತು ಶಾಲಾ ಮಕ್ಕಳ ಸುರಕ್ಷತೆಯ ಬಗ್ಗೆ ಪ್ರೌಢಶಾಲಾ ಶಿಕ್ಷಕರಿಗೆ ತರಬೇತಿ ಕಾರ್ಯಕ್ರಮವನ್ನು ಉ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಒಂದೇ ಮಗುವನ್ನು ಹೊಂದಿರುವ ಪೋಷಕರು, ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ದೈನಂದಿನ ನಡೆಯ ಬಗ್ಗೆ ಹೆಚ್ಚು ಜಾಗೃತೆ ವಹಿಸಬೇಕು. 18 ವರ್ಷಕ್ಕಿಂತ ಮೊದಲು ಮಕ್ಕಳಿಗೆ ವಾಹನ ಚಾಲನೆಗೆ ನಿರ್ಬಂಧ ಹಾಕ ಬೇಕು. ಮೊಬೈಲ್ ಬಳಕೆಗೂ ಕಡಿವಾಣ ಹಾಕಬೇಕು. ಉದ್ಯೋಗಸ್ಥ ಪೋಷಕರು ಮಕ್ಕಳ ಮೇಲಿನ ಅತಿಯಾದ ಪ್ರೀತಿಯಿಂದಾಗಿ ದಾರಿ ತಪ್ಪುವ ಸಾಧ್ಯತೆ ಹೆಚ್ಚು. ಅಂತಹವರು ಮಕ್ಕಳ ಪ್ರತಿಯೊಂದು ನಡೆಯ ಮೇಲೆ ನಿಗಾ ಇಡಬೇಕು ಎಂದು ಅವರು ತಿಳಿಸಿದರು.

ಶಾಲಾ ವಾಹನ ಚಾಲನೆ ಮಾಡುವ ಚಾಲಕ ಎಲ್ಲ ದಾಖಲೆಗಳನ್ನು ಇಟ್ಟು ಕೊಳ್ಳುವುದು ಕಡ್ಡಾಯ. ಅದರ ಜತೆಗೆ ಚಾಲನಾ ಅನುಭವ ಪಡೆದಿರುವುದು ಅಗತ್ಯ. ವಾಹನವನ್ನು ಬೇಕಾಬಿಟ್ಟಿ ನಿಲ್ಲಿಸಬಾರದು. ಶಾಲಾ ಮಕ್ಕಳನ್ನು ಇಳಿಸು ವಾಗ ಅಗತ್ಯ ಸಹಾಯಕಿ ಅಥವಾ ಸಹಾಯಕ ಇರುವುದು ಕಡ್ಡಾಯ. ಸುರಕ್ಷತೆಯ ಬಗ್ಗೆ ಹೆಚ್ಚಿನ ಒತ್ತು ನೀಡಬೇಕು. ವಾಹನದ ಮುಂದಿನಿಂದ ಮಕ್ಕಳನ್ನು ರಸ್ತೆ ದಾಟಲು ಬಿಡಬಾರದು. ವಾಹನ ದಟ್ಟಣೆಯಿದ್ದಾಗ, ಶಾಲೆಗಳ ಬಿಡುವಿನ ವೇಳೆ ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿ ಅಗತ್ಯ ಎಂದು ಅವರು ಹೇಳಿದರು.

ಉಡುಪಿ ಸಂಚಾರ ಠಾಣೆಯ ಪೊಲೀಸ್ ಉಪನಿರೀಕ್ಷಕ ಅಬ್ದುಲ್ ಖಾದರ್ ಮಾತನಾಡಿ, ಬ್ಲಾಕ್ ಸ್ಪಾಟ್, ಮೇಲುಸೇತುವೆ, ರಸ್ತೆ ವಿಭಜಕಗಳಲ್ಲಿ, ವಾಹನ ನಿರ್ಬಂಧ ಪ್ರದೇಶದಲ್ಲಿ, ವಾಹನ ನಿಲುಗಡೆ ನಿಷೇಧ ಜಾಗದಲ್ಲಿ ಚಾಲಕರು ಜಾಗೃತವಾಗಿ ವಾಹನಗಳನ್ನು ಚಲಾಯಿಸಬೇಕು ಎಂದು ಹೇಳಿದರು.

ಸೈಕ್ಲಿಂಗ್ ಕ್ಲಬ್‌ನ ಸದಸ್ಯ ವಿನೋದ ಬಂಗೇರ, ಮೋಟಾರು ವಾಹನ ನಿರೀಕ್ಷಕ ಸಂತೋಷ ಶೆಟ್ಟಿ ಮಾತನಾಡಿದರು. ಶಿಕ್ಷಣ ಇಲಾಖೆಯ ವಿಷಯ ಪರಿವೀಕ್ಷಣಾ ಅಧಿಕಾರಿ ನಿವೇದಿತಾ ಸೇರಿದಂತೆ 445 ಮಂದಿ ಶಿಕ್ಷಕರು, ಪ್ರಾದೇಶಿಕ ಸಾರಿಗೆ ಕಚೇರಿಯ ಸಿಬ್ಬಂದಿ ಕಾರ್ಯಕ್ರಮದಲ್ಲಿ ಹಾಜರಿದ್ದರು. ದೈಹಿಕ ಶಿಕ್ಷಣ ಪರಿವೀಕ್ಷಣಾ ಅಧಿಕಾರಿ ಎಚ್.ಗೋಪಾಲ ಶೆಟ್ಟಿ ಸ್ವಾಗತಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News