ಡಿ.4ರಂದು ರಾಷ್ಟ್ರಭಕ್ತ ನಾಗರಿಕ ವೇದಿಕೆಯಿಂದ ‘ಏಕ್ ಶಾಮ್ ದೇಶ್ ಕೆ ನಾಮ್’ ಕಾರ್ಯಕ್ರಮ

Update: 2021-12-01 10:26 GMT

ಮಂಗಳೂರು, ಡಿ.1: ನೂತನ ಬಾಂಗ್ಲಾದೇಶದ ನಿರ್ಮಾಣಕ್ಕೆ ನಾಂದಿ ಹಾಡಿದ 1971ನೇ ಬಾಂಗ್ಲಾ ವಿಮೋಚನಾ ಯುದ್ಧದ ‘ಸ್ವರ್ಣ ಜಯಂತಿ'ಯ ಪ್ರಯುಕ್ತ ರಾಷ್ಟ್ರ ಭಕ್ತ ನಾಗರಿಕ ವೇದಿಕೆ ಮಂಗಳೂರು ಇದರ ವತಿಯಿಂದ ‘ಏಕ್ ಶಾಮ್ ದೇಶ್ ಕೆ ನಾಮ್’ ಕಾರ್ಯಕ್ರಮವನ್ನು ಡಿ.4ರಂದು ಸಂಜೆ 5 ಗಂಟೆಗೆ ನಗರದ ಕೊಡಿಯಾಲ್‌ ಬೈಲ್‌ನಲ್ಲಿರುವ ಶಾರದಾ ವಿದ್ಯಾಲಯದ ಸಭಾಂಗಣದಲ್ಲಿ ಆಯೋಜಿಸಲಾಗಿದೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮದ ಕುರಿತು ವಿವರ ನೀಡಿದ ರಾಷ್ಟ್ರಭಕ್ತ ನಾಗರಿಕ ವೇದಿಕೆ ಮಂಗಳೂರು ಇದರ ಅಧ್ಯಕ್ಷ ಸತ್ಯಜಿತ್ ಸುರತ್ಕಲ್, ಕಾರ್ಯಕ್ರಮವನ್ನು ನಿವೃತ್ತ ವಾಯುಸೇನಾ ಅಧಿಕಾರಿ ಏರ್‌ವೈಸ್ ಮಾರ್ಷಲ್ ರಮೇಶ್ ಕಾರ್ಣಿಕ್ ಉದ್ಘಾಟಿಸುವರು.

ನಿವೃತ್ತ ಹಿರಿಯ ಭೂ ಸೇನಾ ಅಧಿಕಾರಿ ಮೇಜರ್ ಜನರಲ್ ಎಂ.ವಿ.ಭಟ್ ಅಧ್ಯಕ್ಷತೆ ವಹಿಸುವರು. ಬಾಂಗ್ಲಾ ವಿಮೋಚನಾ ಯುದ್ಧ ಯೋಧರು ಮತ್ತು ಸೇನಾ ಮೆಡಲ್ ಪುರಸ್ಕೃತ ಕರ್ನಲ್ ಮೋಹಿಂದರ್ ಸಿಂಗ್ ಖೈರಾ ಎಸ್.ಎಂ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದರು.

1971ರ ಬಾಂಗ್ಲಾ ವಿಮೋಚನೆಯ ಯುದ್ಧವನ್ನು ಎಂದೂ ಮರೆಯಲು ಸಾಧ್ಯವಿಲ್ಲ. ಈ ಯುದ್ಧದಲ್ಲಿ ಸೇನೆಯಲ್ಲಿದ್ದ ದ.ಕ. ಜಿಲ್ಲೆಯ 55ಕ್ಕೂ ಅಕ ಮಂದಿ ಭಾಗವಹಿಸಿದ್ದಾರೆ. ಬಹುತೇಕ ಮಂದಿ ಈಗ ಇಲ್ಲ. ಇರುವ ಕೆಲವರು ಮತ್ತು ಅವರ ಮನೆಯವರನ್ನು ಒಳಗೊಂಡಂತೆ ಸೇನೆಯಲ್ಲಿ ವಿವಿಧ ಜವಾಬ್ದಾರಿ ನಿರ್ವಹಿಸಿದ ಸುಮಾರು 45 ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದವರು ಹೇಳಿದರು.

ಸಭಾ ಕಾರ್ಯಮದ ಬಳಿಕ ದೇಶಾದ್ಯಂತ 3000ಕ್ಕಿಂತ ಅಧಿಕ ಪ್ರದರ್ಶನ, ಅಮೆರಿಕಾದಲ್ಲಿ 28 ಪ್ರದರ್ಶನ, 2 ರಾಷ್ಟ್ರ ಪ್ರಶಸ್ತಿ, 2 ಮಹಾರಾಷ್ಟ್ರ ರಾಜ್ಯ ಪ್ರಶಸ್ತಿ ವಿಜೇತ ತಂಡವಾದ ಜಾಗೋ ಹಿಂದೂಸ್ಥಾನಿ ತಂಡದಿಂದ ದೇಶಭಕ್ತಿ ಗೀತೆಗಳ ಹಾಗೂ ಸ್ವಾತಂತ್ರ್ಯ ಹೋರಾಟಗಾರರ ಮೈನವಿರೇಳಿಸುವ ಕಥೆಗಳ ಸಂಯೋಜನೆಯ ಅದ್ಭುತ ಕಾರ್ಯಕ್ರಮ ನಡೆಯಲಿದೆ.

ಸೇನೆಯ ಬಗ್ಗೆ ನಮ್ಮ ವಿದ್ಯಾರ್ಥಿಗಳೂ ತಿಳಿದುಕೊಳ್ಳುವಂತಾಗಬೇಕು. ಈ ನಿಟ್ಟಿನಲ್ಲಿ ರಾಷ್ಟ್ರಭಕ್ತ ನಾಗರಿಕ ವೇದಿಕೆ ಮಂಗಳೂರಿನ ವಿವಿಧ ಹೈಸ್ಕೂಲ್ ಮತ್ತು ಪದವಿಪೂರ್ವ ಕಾಲೇಜುಗಳಲ್ಲಿ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಂಡಿದೆ. ನಮ್ಮ ದೇಶದ ಸೇನೆ, ಸೈನ್ಯದಲ್ಲಿರುವ ಯೋಧರ ಜೀವನ ಈ ಎಲ್ಲಾ ವಿಚಾರವನ್ನಿಟ್ಟುಕ್ಕೊಂಡು ಈಗಗಾಲೇ ಕೆಲವು ಶಾಲೆಗಳಲ್ಲಿ ಕಾರ್ಯಕ್ರಮ ಆರಂಭವಾಗಿದೆ. ಸುಮಾರು 45ರಿಂದ 50 ಶಾಲೆಗಳಲ್ಲಿ ಉಪನ್ಯಾಸ ಕಾರ್ಯಕ್ರಮ ಆಯೋಜಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗಿದೆ ಎಂದು ಸತ್ಯಜಿತ್ ಸುರತ್ಕಲ್ ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ರಾಷ್ಟ್ರಭಕ್ತ ವೇದಿಕೆಯ ಉಪಾಧ್ಯಕ್ಷರಾದ ಪ್ರಸನ್ನ ರವಿ, ಗುರುಚಂದ್ರ ಹೆಗ್ಡೆ, ಪ್ರಧಾನ ಕಾರ್ಯದರ್ಶಿ ಸಂದೀಪ್ ಮತ್ತು ಸಂಚಾಲಕ ಸಂದೀಪ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News