'ಸಿಆರ್‌ಝೆಡ್ ಮರಳು ದುಬಾರಿ ಮಿತ ದರದಲ್ಲಿ ದೊರೆಯದಿದ್ದರೆ ಹೋರಾಟದ ಎಚ್ಚರಿಕೆ'

Update: 2021-12-03 12:25 GMT

ಮಂಗಳೂರು, ಡಿ.3: ದ.ಕ.ಜಿಲ್ಲೆಯಲ್ಲಿ ನಾನ್ ಸಿಆರ್‌ಝಡ್ ಮರಳು ದುಬಾರಿಯಾಗಿದ್ದು, ಈ ಬಗ್ಗೆ ಜಿಲ್ಲಾಡಳಿತ ಮಧ್ಯಪ್ರವೇಶಿಸಿ ಡಿಸೆಂಬರ್‌ನಲ್ಲಿ ವೇಳೆಗಾದರೂ ಕೈಗೆಟಕುವ ದರದಲ್ಲಿ ಮರಳು ಪೂರೈಕೆಗೆ ಕ್ರಮ ಕೈಗೊಳ್ಳಬೇಕು. ತಪ್ಪಿದಲ್ಲಿ ಉಗ್ರ ಹೋರಾಟ ನಡೆಸಲು ದ.ಕ. ಸಿವಿಲ್ ಕಾಂಟ್ರಾಕ್ಟರ್ಸ್ ಅಸೋಸಿಯೇಷನ್ ಮಂಗಳೂರು ಎಚ್ಚರಿಕೆ ನೀಡಿದೆ.

ಶುಕ್ರವಾರ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಸೋಸಿಯೇಷನ್ ಅಧ್ಯಕ್ಷ ಮಹಾಬಲ ಕೊಟ್ಟಾರಿ, ಜಿಲ್ಲೆಯಲ್ಲಿ ಮರಳುಗಾರಿಕೆ ಪರವಾನಿಗೆ ಅವಧಿ ಸೆಪ್ಟೆಂಬರ್ 16ಕ್ಕೆ ಮುಗಿದಿದೆ. ಈ ಕಾರಣಕ್ಕೆ ಮರಳುಗಾರಿಕೆ ನಿಷೇಧಿಸಿ ಎರಡು ತಿಂಗಳು ಕಳೆದಿದೆ. ನವೆಂಬರ್ ಕೊನೆಗೆ ಮರಳು ಲಭ್ಯವಾಗಲಿದೆ ಎಂದು ಜಿಲ್ಲಾಧಿಕಾರಿ ಹೇಳಿಕೆ ನೀಡಿದ್ದರು. ಆದರೆ ಡಿಸೆಂಬರ್ ಬಂದರೂ ಇನ್ನೂ ಮರಳು ಲಭ್ಯವಾಗುತ್ತಿಲ್ಲ ಎಂದು ದೂರಿದರು.

ಜಿಲ್ಲೆಯಲ್ಲಿ ಸುಮಾರು 11 ತಿಂಗಳಿಂದ ಮರಳು ಲಭ್ಯವಿಲ್ಲದ ಕಾರಣ ಕಟ್ಟಡ ಗುತ್ತಿಗೆದಾರರು, ಜನಸಾಮಾನ್ಯರು, ಕೂಲಿ ಕಾರ್ಮಿಕರು ಪರಿತಪಿಸುತ್ತಿದ್ದಾರೆ. ಕಡಿಮೆ ಬೆಲೆಯಲ್ಲಿ ಮರಳು ಲಭ್ಯ ಎಂದು ನ.8ರಂದು ಜಿಲ್ಲಾಡಳಿತ ಪ್ರಕಟಣೆ ನೀಡಿತ್ತು. ನಾನ್ ಸಿಆರ್‌ಝಡ್ ವಲಯದಲ್ಲಿ ಮರಳು ಒಂದು ಟನ್‌ಗೆ 700 ರೂ. ನಿಗದಿಪಡಿಸಲಾಗಿದೆ. ಅಂದರೆ 2 ಯುನಿಟ್ ಮರಳಿಗೆ(1 ಲೋಡ್) 5,600 ರು. ಮತ್ತು ಲೋಡಿಂಗ್ ಚಾರ್ಜ್ 400 ರು., ಲಾರಿ ಬಾಡಿಗೆ ಸೇರಿ 8 ಸಾವಿರ ರು. ತಗಲುತ್ತದೆ. ನಾನ್ ಸಿಆರ್‌ಝಡ್ ಮರಳು ಗುತ್ತಿಗೆದಾರರಲ್ಲಿ ವಿಚಾರಿಸಿದಾಗ 3 ಯುನಿಟ್ ಮರಳಿಗೆ 15 ಸಾವಿರ ರೂ. ವೆಚ್ಚವಾಗುತ್ತದೆ ಎನ್ನುತ್ತಾರೆ.

ಈ ಹಿಂದೆ ಸಿಆರ್‌ಝಡ್ ವಲಯದಲ್ಲಿ ಇದೇ 3 ಯುನಿಟ್ ಮರಳು 8 ಸಾವಿರ ರು.ಗೆ ಲಭ್ಯವಿದ್ದು, ಗಾರೆ ಕೆಲಸಕ್ಕೆ ಅನುಕೂಲ ವಾಗಿತ್ತು. ಆದರೆ ಈಗ ಪೂರೈಕೆಯಾಗುವ ನಾನ್ ಸಿಆರ್‌ಝಡ್ ಮರಳು ಕಳಪೆ ಗುಣಮಟ್ಟದ್ದಾಗಿದ್ದು, ಕಟ್ಟಡ ಕಾಮಗಾರಿಗೆ ಯೋಗ್ಯವಾಗಿಲ್ಲ ಎಂದರು. ಕರಾವಳಿಗೆ ಪ್ರತ್ಯೇಕ ಮರಳು ನೀತಿ ಜಾರಿಗೊಳಿಸುವುದಾಗಿ ಸರ್ಕಾರ ಹೇಳಿದರೂ ಇನ್ನೂ ಕಾರ್ಯಗತವಾಗಿಲ್ಲ. ಮಂಗಳೂರಿನಲ್ಲಿ ಎಲ್ಲ ಕಟ್ಟಡ ಕಾಮಗಾರಿಗಳಿಗೆ ಸಿಆರ್‌ಝಡ್ ಮರಳು ಬಳಕೆಯಾಗುತ್ತಿದ್ದು, ಇದು ಉತ್ತಮ ಗುಣಮಟ್ಟ ಹೊಂದಿರುತ್ತದೆ. ಮಂಗಳೂರಿಗೆ ಪ್ರತಿದಿನ 500 ಲೋಡ್ ಮರಳು ಕಾಮಗಾರಿಗೆ ಬೇಕಾಗುತ್ತದೆ. ಆದರೆ ಗುತ್ತಿಗೆದಾರರ ದುಬಾರಿ ದರದಿಂದಾಗಿ ಅಗತ್ಯ ಮರಳು ಖರೀದಿಸಲು ಆಗುತ್ತಿಲ್ಲ. ಅಲ್ಲದೆ ಕಟ್ಟಡ ನಿರ್ಮಾಣ ಉದ್ಯಮ ಕೂಡ ಹಿನ್ನಡೆ ಕಾಣುತ್ತಿದೆ. ಇದರಿಂದಾಗಿ ಗುತ್ತಿಗೆದಾರರಿಗೆ ಮಾತ್ರವಲ್ಲ ಕಾರ್ಮಿಕರ ಉದ್ಯೋಗಕ್ಕೂ ತೊಂದರೆ ಉಂಟಾಗಿದೆ ಎಂದರು.

ಅಸೋಸಿಯೇಷನ್ ಗೌರವಾಧ್ಯಕ್ಷ ಪುರುಷೋತ್ತಮ ಕೊಟ್ಟಾರಿ, ಉಪಾಧ್ಯಕ್ಷ ದಿನಕರ ಸುವರ್ಣ, ಕಾರ್ಯದರ್ಶಿ ಉಮೇಶ್ ದಂಡಕೇರಿ, ಜೊತೆ ಕಾರ್ಯದರ್ಶಿ ಅಶೋಕ್ ಕುಲಾಲ್ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಅಸಮರ್ಪಕ ಮರಳು ಸರ್ವೆಸಿಆರ್‌ಝಡ್ ಮತ್ತು ನಾನ್ ಸಿಆರ್‌ಝಡ್‌ಗಳಲ್ಲಿ ಮರಳು ದಿಬ್ಬ ಪತ್ತೆ ಮಾಡಿ ಮರಳು ತೆಗೆಯಲು ಸಾಧ್ಯವೇ ಎಂಬುದನ್ನು ತಜ್ಞರು ಬೆಥಮೆಟ್ರಿಕ್ಸ್ ಸರ್ವೆ ವಿಧಾನದಲ್ಲಿ ಪರಿಶೀಲಿಸಿ ಜಿಲ್ಲಾಡಳಿತಕ್ಕೆ ವರದಿ ನೀಡುತ್ತಾರೆ. ಆದರೆ ನದಿಯಲ್ಲಿ ಮರಳು ದಿಬ್ಬ ಪರಿಶೀಲಿಸುವ ತಜ್ಞರು ಸ್ಥಳೀಯ ಮೀನುಗಾರರ ನೆರವು ಕೂಡ ಪಡೆಯುವುದಿಲ್ಲ. ಅವರಿಗೆ ನದಿಯಲ್ಲಿರುವ ಮರಳಿನ ಬಗ್ಗೆ ಪ್ರಾಥಮಿಕ ಜ್ಞಾನವೂ ಇರುವುದಿಲ್ಲ. ನದಿಯಲ್ಲಿ ಸರ್ವೆ ನಡೆಸಲು ತೆರಳಲು ನೀರಿನ ಭಯದಿಂದ ಹಿಂದೇಟು ಹಾಕುವವರು ಜಿಲ್ಲಾಡಳಿತಕ್ಕೆ ವರದಿ ನೀಡುವುದು ವಿಪರ್ಯಾಸ ಎಂದು ಗೌರವಾಧ್ಯಕ್ಷ ಪುರುಷೋತ್ತಮ ಕೊಟ್ಟಾರಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News