ಬನ್ನಂಜೆ ಗೋವಿಂದಾಚಾರ್ಯರ ಪುತ್ಥಳಿ ಅನಾವರಣ: ಉಡುಪಿಯಲ್ಲಿ ಬನ್ನಂಜೆ ಸಂಸ್ಮರಣೋತ್ಸವ

Update: 2021-12-03 16:15 GMT

ಉಡುಪಿ, ಡಿ.3: ಬಹುಶ್ರುತ ವಿದ್ವಾಂಸ, ಪದ್ಮಶ್ರೀ ಪುರಸ್ಕೃತ ವಿದ್ಯಾವಾಚಸ್ಪತಿ ಡಾ.ಬನ್ನಂಜೆ ಗೋವಿಂದಾಚಾರ್ಯರ ಪ್ರಥಮ ಪುಣ್ಯಸಂಸ್ಮರಣೋತ್ಸವದ ಅಂಗವಾಗಿ ಅಂಬಲಪಾಡಿಯಲ್ಲಿರುವ ಆಚಾರ್ಯರ ಸ್ವಗೃಹ ಈಶಾವಾಸ್ಯಮ್ ನಲ್ಲಿ ಬನ್ನಂಜೆಯವರ ಅಭಿಮಾನಿಗಳು ಹಾಗೂ ಶಿಷ್ಯರು ದಿನವಿಡೀ ‘ಮುಂಜಾನೆಯಿಂದ ಸಂಜೆಯವರೆಗೆ’ ಶೀರ್ಷಿಕೆಯಡಿ ವಿವಿಧ ಕಾರ್ಯಕ್ರಮ ಗಳನ್ನು ಹಮ್ಮಿಕೊಂಡಿದ್ದರು.

ಕಾರ್ಯಕ್ರಮವನ್ನು ಉಡುಪಿ ಶಾಸಕ ಹಾಗೂ ಆಚಾರ್ಯರ ಅಭಿಮಾನಿ ಕೆ.ರಘುಪತಿ ಭಟ್ಟ ಉದ್ಘಾಟಿಸಿದರು. ರಾಜ್ಯ ಸರಕಾರ ಆಚಾರ್ಯರ ಶ್ರೇಷ್ಠವಾದ ಬಹುಮುಖಿ ವ್ಮಾಯ ಕೊಡುಗೆಗಳನ್ನು ಗೌರವಿಸುವ ನಿಟ್ಟಿನಲ್ಲಿ ಉಡುಪಿಯಲ್ಲಿ ನಿರ್ಮಾಣಗೊಂಡಿರುವ ಜಿಲ್ಲಾ ಗ್ರಂಥಾಲಯಕ್ಕೆ ಅವರಹೆಸರಿಡಲು ನಿರ್ಧರಿಸಿದೆ. ಈ ಗ್ರಂಥಾಲಯದ ಎರಡನೇ ಮಹಡಿಯಲ್ಲಿ ಆಚಾರ್ಯರ ಕೃತಿಗಳ ಅಧ್ಯಯನ, ಪ್ರವಚನ ಉಪನ್ಯಾಸಗಳ ಶ್ರವಣಕ್ಕಾಗಿ ಹಾಗೂ ತತ್ತ್ವ ಶಾಸ್ತ್ರಗಳ ಅಧ್ಯಯನಕ್ಕೆ ಮುಡುಪಾಗಿಡಲಾಗುವುದು ಎಂದು ಶಾಸಕರು ಈ ಸಂದರ್ಭದಲ್ಲಿ ನುಡಿದರು.

ನೂತನವಾಗಿ ನಿರ್ಮಿಸಲಾದ ಡಾ. ಆಚಾರ್ಯರ ಸುಂದರ ಲೋಹದ ಪ್ರತಿಮೆಯನ್ನು ಅವರ ಅಧ್ಯಾತ್ಮ ಶಿಷ್ಯ ರಷ್ಯಾ ದೇಶದ ನಾರಸಿಂಹ ನಿಕೋಲಾಯ್ ಲೋಕಾರ್ಪಣೆಗೊಳಿಸಿ ಸಂಸ್ಕೃತ ಭಾಷೆಯಲ್ಲೇ ಭಾವುಕತೆಯಿಂದ ಮಾತನಾಡಿ, ಆಚಾರ್ಯರು ತಮ್ಮ ಮೇಲೆ ವಿಶೇಷ ಕಾರುಣ್ಯದಿಂದ ಅಧ್ಯಾತ್ಮದ ಬಗ್ಗೆ ತೋರಿದ ಮಾರ್ಗದರ್ಶನವನ್ನು ಸ್ಮರಿಸಿಕೊಂಡರು.

ಇದೇ ಸಂದರ್ಭದಲ್ಲಿ ಪ್ರತಿಮೆ ನಿರ್ಮಿಸಿಕೊಟ್ಟ ಕಲಾವಿದ ಜನಾರ್ದನ ಹಾವಂಜೆ ಅವರನ್ನು ಸಂಮಾನಿಸಲಾಯಿತು. ಈಶಾವಾಸ್ಯ ಪ್ರತಿಷ್ಠಾನದ ವಿಶ್ವಸ್ಥರಾದ ಉದ್ಯಮಿ ಬಾಲಾಜಿ ರಾಘವೇಂದ್ರಾಚಾರ್ಯ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ಮಹಿತೋಷ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.

ಬಳಿಕ ನಡೆದ ವಿವಿಧ ಕಾರ್ಯಕ್ರಮಗಳಲ್ಲಿ ಪ್ರಸಿದ್ಧ ಗಾಯಕ ರಾಯಚೂರಿನ ಹುಸೇನ್‌ಸಾಬ್ ಅವರು ಬನ್ನಂಜೆ ಅವರ ತತ್ತ್ವಪದಗಳ ಗಾಯನ ನಡೆಸಿಕೊಟ್ಟರು. ವಿದ್ವಾನ್ ಶಶಿಕಿರಣ್ ಮಣಿಪಾಲ ಹಾರ್ಮೋನಿಯಂನಲ್ಲಿ ಹಾಗೂ ವಿದ್ವಾನ್ ಮಾಧವಾಚಾಯರ್. ತಬಲಾದಲ್ಲಿ ಸಹಕರಿಸಿದರು. ಬಳಿಕ ಬೆಂಗಳೂರಿನ ರಾಜ್‌ಕಮಲ್ ಅವರ ವೇಣುವಾದನ ಕಚೇರಿಯೂ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News