ನಿರೀಕ್ಷೆಗೂ ಮೀರಿದ ಮತಗಳ ಅಂತರದಲ್ಲಿ ಜಯ: ಕೋಟ ಶ್ರೀನಿವಾಸ ಪೂಜಾರಿ ವಿಶ್ವಾಸ

Update: 2021-12-05 15:01 GMT

ಉಡುಪಿ, ಡಿ.5: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲಾ ವಿಧಾನ ಪರಿಷತ್ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ನಿರೀಕ್ಷೆಗೂ ಮೀರಿದ ಮತಗಳ ಅಂತರದಲ್ಲಿ ಜಯಗಳಿಸಲಿದೆ ಎಂದು ಬಿಜೆಪಿ ಅಭ್ಯರ್ಥಿ ಹಾಗೂ ಸಚಿವ ಕೋಟ ಶ್ರೀನಿವಾಸ ಪೂಜಾರಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕ್ಷೇತ್ರದಲ್ಲಿ ನಾವು ಸಂಘಟಿತ ಪ್ರಯತ್ನವನ್ನು ಬೂತ್ ಮಟ್ಟದಲ್ಲಿಯೇ ಮಾಡುತ್ತಿದ್ದೇವೆ. ಇದರಿಂದ ನಿರೀಕ್ಷೆಗೂ ಮೀರಿದ ಗೆಲುವು ನಮ್ಮದಾಗುತ್ತದೆ. ನರೇಗಾ, ಗೌರವಧನ ಹೆಚ್ಚಳ ಸೇರಿದಂತೆ ಹಲವು ಯೋಜನೆಗಳ ಮೂಲಕ ಪಂಚಾಯತ್ ರಾಜ್ ವ್ಯವಸ್ಥೆಗೆ ಶಕ್ತಿ ತುಂಬುವ ಕಾರ್ಯವನ್ನು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಮಾಡುತ್ತಿವೆ ಎಂದರು.

ರಾಜ್ಯದಲ್ಲಿ 25 ಕ್ಷೇತ್ರಗಳಲ್ಲಿ ಚುನಾವಣೆ ನಡೆಯುತ್ತಿದ್ದು, ಅದರಲ್ಲಿ 5 ದ್ವಿ ಸದಸ್ಯ ಕ್ಷೇತ್ರಗಳಿವೆ. ಇಲ್ಲಿ ಆಯಾ ಪಕ್ಷಗಳು ಅವರ ಶಕ್ತಿ ಆಧಾರದ ಮೇಲೆ ಅಭ್ಯರ್ಥಿಗಳನ್ನು ನಿಲ್ಲಿಸಿವೆ. ಅದರಂತೆ ಈ ಕ್ಷೇತ್ರದಲ್ಲಿ ನಾವು ಕೂಡ ಒಬ್ಬ ಅಭ್ಯರ್ಥಿಯನ್ನು ಮಾತ್ರ ಕಣಕ್ಕೆ ಇಳಿಸಿದ್ದೇವೆ. ಇಬ್ಬರು ಸ್ಪರ್ಧಿಸಿದ್ದರೆ ನಮ್ಮಲ್ಲಿಯೇ ಒಡಕು ಉಂಟಾಗುವ ಸಾಧ್ಯತೆ ಇರುತ್ತದೆ. ಆದುದರಿಂದ ಮತಗಳ ಅಂಕಿಅಂಶ ಗಮನದಲ್ಲಿ ಇಟ್ಟುಕೊಂಡು ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದ್ದೇವೆ. ಕಾಂಗ್ರೆಸ್ ಪಕ್ಷವೂ ಕೂಡ ಅದೇ ರೀತಿ ಮಾಡಿದೆ ಎಂದು ಹೇಳಿದರು.

ಗ್ರಾಪಂ ಸದಸ್ಯರ ಗೌರವಧನ ಬಾಕಿ ಕುರಿತ ಪ್ರಶ್ನೆಗೆ, ಆಯಾ ಗ್ರಾಪಂಗಳಲ್ಲಿ ರುವ ಹೂಡಿಕೆ ಹಣದಲ್ಲಿ ಹೊಂದಾಣಿಕೆ ಮಾಡಿ ಕೊಂಡು ಗೌರವಧನ ನೀಡಲು ಸರಕಾರ ಈಗಾಗಲೇ ನಿರ್ದೇಶನ ನೀಡಿದೆ. ಮುಂದೆ ಆ ಹಣವನ್ನು ಸರಕಾರ ಆ ಗ್ರಾಪಂಗಳಿಗೆ ಬಿಡುಗಡೆ ಮಾಡುತ್ತದೆ ಎಂದು ತಿಳಿಸಿದರು.

ಮುಖ್ಯಮಂತ್ರಿ ಬದಲಾವಣೆ ಕುರಿತ ಪ್ರಶ್ನೆಗೆ ಉತ್ತರಿಸಿದ ಸಚಿವರು, ಬಸವ ರಾಜ ಬೊಮ್ಮಾಯಿ ವಿಶ್ವಾಸರ್ಹ ಹಾಗೂ ಪಾರದರ್ಶಕತೆಯಿಂದ ಆಡಳಿತ ನಡೆಸುತ್ತಿದ್ದಾರೆ. ಇಡೀ ರಾಜ್ಯವೇ ಅವರ ಆಡಳಿತವನ್ನು ಪ್ರಶಂಸುತ್ತಿದೆ ಎಂದರು.

ಕೊರೋನ ಆತಂಕದ ಹಿನ್ನೆಲೆಯಲ್ಲಿ 500 ಜನ ಮೀರದಂತೆ ಸಭೆ ಸಮಾರಂಭ ನಡೆಸುವಂತೆ ಸರಕಾರ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಅದಕ್ಕೆ ನಮ್ಮ ಪಕ್ಷ ಬದ್ಧವಾಗಿದ್ದು, ನಮ್ಮ ಸಭೆಯಲ್ಲಿ 200-300ಕ್ಕಿಂತ ಹೆಚ್ಚು ಜನರನ್ನು ಸೇರಿಸುತ್ತಿಲ್ಲ ಎಂದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಮುಖಂಡರಾದ ಉದಯ ಕುಮಾರ್ ಶೆಟ್ಟಿ, ಶ್ರೀಶ ನಾಯಕ್ ಪೆರ್ಣಂಕಿಲ, ಮನೋಹರ್ ಎಸ್.ಕಲ್ಮಾಡಿ, ಗುರುಪ್ರಸಾದ್ ಶೆಟ್ಟಿ, ಸತ್ಯಾನಂದ ನಾಯಕ್, ಶಿವಕುಮಾರ್ ಅಂಬಲ ಪಾಡಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News