ಕುಂದಾಪುರ; ಅತ್ಯಾಚಾರ ಪ್ರಕರಣ: ಪೊಕ್ಸೊ ಆರೋಪಿಗೆ 10 ವರ್ಷ ಜೈಲು ಶಿಕ್ಷೆ

Update: 2021-12-09 16:16 GMT

ಕುಂದಾಪುರ, ಡಿ.9: ಅಪ್ರಾಪ್ತ ವಯಸ್ಸಿನ ನಾದಿನಿ ಮೇಲೆ ಅತ್ಯಾಚಾರಗೈದ ಪೊಕ್ಸೊ ಪ್ರಕರಣದ ಆರೋಪಿಗೆ ಉಡುಪಿ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯದಲ್ಲಿನ ಪೊಕ್ಸೊ ತ್ವರಿತ ವಿಶೇಷ ನ್ಯಾಯಾಲಯವು 10 ವರ್ಷಗಳ ಜೈಲು ಶಿಕ್ಷೆ ವಿಧಿಸಿ ಗುರುವಾರ ತೀರ್ಪು ನೀಡಿದೆ.

ಸುರೇಶ್ ಮರಾಠಿ (29) ಶಿಕ್ಷೆಗೆ ಗುರಿಯಾಗಿರುವ ಆರೋಪಿ.

ಬೈಂದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2018ರಲ್ಲಿ ಸುರೇಶ್ ತನ್ನ ಹೆಂಡತಿಯ ತಂಗಿಯನ್ನು ಅತ್ಯಾಚಾರ ಮಾಡಿದ್ದನು. 17 ವರ್ಷ ಪ್ರಾಯದ ಸಂತ್ರಸ್ತ ಬಾಲಕಿ ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಗೆ ದೂರು ನೀಡಿದ್ದು ಪೊಕ್ಸೊ ಕಾಯ್ದೆಯಡಿ ಆರೋಪಿಯನ್ನು ಬಂಧಿಸಲಾಗಿತ್ತು. 

ಪ್ರಕರಣಕ್ಕೆ ಸಂಬಂಧಿಸಿದಂತೆ ಬೈಂದೂರಿನ ಅಂದಿನ ಸಿಪಿಐ ಪರಮೇಶ್ವರ ಗುನಗ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಒಟ್ಟು 25 ಸಾಕ್ಷಿಗಳ ಪೈಕಿ ನ್ಯಾಯಾಲಯದಲ್ಲಿ 15 ಮಂದಿ ವಿಚಾರಣೆ ನಡೆದಿತ್ತು. ಸಂತ್ರಸ್ತ ಬಾಲಕಿ ಸಹಿತ ಪ್ರಮುಖ ಸಾಕ್ಷಿಗಳು‌ ಅಭಿಯೋಜನೆಗೆ ವಿರುದ್ಧವಾಗಿತ್ತು.

ಆದರೆ‌ ವೈದ್ಯಕೀಯ ಸಾಕ್ಷಿ, ತನಿಖಾಧಿಕಾರಿ‌ ನ್ಯಾಯಾಲಯದಲ್ಲಿ ನುಡಿದ ಸಾಕ್ಷಿ ಹಾಗೂ ಸಾಂದರ್ಭಿಕ ಸಾಕ್ಷಿ ಆಧಾರದಲ್ಲಿ ಸುರೇಶ್ ಮರಾಠಿ ಮೇಲಿನ‌ ಆರೋಪ ಸಾಬೀತಾಗಿದೆ ಎಂದು ಅಭಿಪ್ರಾಯ ಪಟ್ಟ ನ್ಯಾಯಾಧೀಶೆ ಎರ್ಮಾಳ್ ಕಲ್ಪನಾ ಆರೋಪಿಗೆ 10 ವರ್ಷ ಜೈಲು ಶಿಕ್ಷೆ, 20 ಸಾವಿರ ದಂಡ ವಿಧಿಸಿದ್ದು ದಂಡ ತೆರಲು ತಪ್ಪಿದಲ್ಲಿ 1 ವರ್ಷ ಸಾದಾ ಸಜೆ‌ ವಿಧಿಸಿ ಆದೇಶಿಸಿದರು.

ಉಡುಪಿಯ ಪೊಕ್ಸೊ ನ್ಯಾಯಾಲಯದ ವಿಶೇಷ ಸರಕಾರಿ ಅಭಿಯೋಜಕ ವೈ.ಟಿ ರಾಘವೇಂದ್ರ ಅವರು ಪ್ರಾಸಿಕ್ಯೂಶನ್ ಪರ ವಾದ ಮಂಡಿಸಿದ್ದರು.

ಪೊಲೀಸರಿಂದ ತಪ್ಪಿಸಿಕೊಂಡಿದ್ದ !

ಆರೋಪಿ ಸುರೇಶ್ ಮರಾಠಿಯನ್ನು ಬಂಧಿಸಿದ ಬಳಿಕ ವಿಚಾರಣೆಗಾಗಿ‌ 2018ರ ಅಕ್ಟೋಬರ್ ತಿಂಗಳಿನಲ್ಲಿ ಉಡುಪಿ ಪೊಕ್ಸೊ ನ್ಯಾಯಾಲಯಕ್ಕೆ ಕರೆತಂದು ರೈಲಿನಲ್ಲಿ ಮರಳಿ ಕಾರಾವರ ಜೈಲಿಗೆ ಕರೆದೊಯ್ಯುತ್ತಿರುವಾಗ ಬೈಂದೂರು ರೈಲು ನಿಲ್ದಾಣದ ಬಳಿ ಆರೋಪಿ ತನಗೆ ವಾಂತಿ ಬರುತ್ತಿದೆಯೆಂಬ ನಾಟಕವಾಡಿ ಪೊಲೀಸರಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದನು.

ಈ  ಪ್ರಕರಣಕ್ಕೆ ಸಂಬಂಧಿಸಿ ಕರ್ತವ್ಯ ಲೋಪದಡಿಯಲ್ಲಿ ಇಬ್ಬರು ಪೊಲೀಸರನ್ನು ಅಂದಿನ ಉಡುಪಿ ಎಸ್ಪಿ ಲಕ್ಷ್ಮಣ ನಿಂಬರ್ಗಿ ಅಮಾನತುಗೊಳಿಸಿದ್ದರು. ಸುಮಾರು ಎರಡು ವರ್ಷಗಳ ಕಾಲ ತಲೆಮರೆಸಿಕೊಂಡಿದ್ದ ಈತ ಕಳೆದ ಆರೇಳು ತಿಂಗಳ ಹಿಂದೆ ನ್ಯಾಯಾಲಯಕ್ಕೆ ಶರಣಾಗತನಾಗಿದ್ದನು ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News